ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ರೆಡ್ಡಿಗಳ ಗಣಿಗಾರಿಕೆ ಮನವಿ ತೀರ್ಪು ಕಾಯ್ದಿರಿಸಿದ ಸುಪ್ರೀಂ
(Mining | Reddy brothers | Karnataka | Survey of India panel)
ರೆಡ್ಡಿಗಳ ಗಣಿಗಾರಿಕೆ ಮನವಿ ತೀರ್ಪು ಕಾಯ್ದಿರಿಸಿದ ಸುಪ್ರೀಂ
ನವದೆಹಲಿ, ಮಂಗಳವಾರ, 4 ಮೇ 2010( 19:33 IST )
ಆಂಧ್ರಪ್ರದೇಶ - ಕರ್ನಾಟಕ ಗಡಿಯಲ್ಲಿನ ಓಬಳಾಪುರಂ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು ಅವಕಾಶ ನೀಡಬೇಕು ಎಂದು ರೆಡ್ಡಿ ಸಹೋದರರು ಸಲ್ಲಿಸಿರುವ ಅರ್ಜಿ ಸಂಬಂಧ ತೀರ್ಪನ್ನು ಸುಪ್ರೀಂ ಕೋರ್ಟ್ ಕಾಯ್ದಿರಿಸಿದೆ.
ಈ ಪ್ರದೇಶದಲ್ಲಿ ಗಣಿಗಾರಿಕೆಗೆ ಅನುಮತಿ ನೀಡುವ ಮೊದಲು ಗಡಿಯನ್ನು ಮರು ಗುರುತಿಸುವ ಕಾರ್ಯ ನಡೆಯಬೇಕು ಎಂದು ಸರ್ವೇ ಆಫ್ ಇಂಡಿಯಾ ತನ್ನ ವರದಿಯಲ್ಲಿ ಶಿಫಾರಸು ಮಾಡಿದೆ ಎಂದು ಸೋಲಿಸಿಟರ್ ಜನರಲ್ ಗೋಪಾಲ್ ಸುಬ್ರಮಣ್ಯಂ ಹೇಳಿದ ನಂತರ ಮುಖ್ಯ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್, ದೀಪಕ್ ವರ್ಮಾ ಮತ್ತು ಬಿ.ಎಸ್. ಚೌಹಾನ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ತೀರ್ಪನ್ನು ಕಾಯ್ದಿರಿಸಿತು.
ಗುತ್ತಿಗೆ ನೀಡಲಾಗಿರುವ ಪ್ರದೇಶದಲ್ಲಿ ಗಡಿ ಗುರುತಿಸುವಿಕೆ ಕಾರ್ಯವನ್ನು ಸರ್ವೇ ಆಫ್ ಇಂಡಿಯಾ ನಡೆಸಲು ಕನಿಷ್ಠ ಮೂರು ತಿಂಗಳುಗಳು ಬೇಕಾಗುತ್ತದೆ ಮತ್ತು ಅದುವರೆಗೆ ಗಣಿಗಾರಿಕೆ ಚಟುವಟಿಕೆಯನ್ನು ಸ್ಥಗಿತಗೊಳಿಸಬೇಕು ಎಂದು ಸುಬ್ರಮಣ್ಯಂ ತಿಳಿಸಿದರು.
ಸುಪ್ರೀಂ ಕೋರ್ಟ್ ಕಳೆದ ತಿಂಗಳು ಇಲ್ಲಿ ಗಣಿಗಾರಿಕೆಯನ್ನು ಸ್ಥಗಿತಗೊಳಿಸುವಂತೆ ಆದೇಶ ನೀಡಿತ್ತು.
ಗಾಲಿ ಕರುಣಾಕರ ರೆಡ್ಡಿ, ಗಾಲಿ ಜನಾರ್ದನ ರೆಡ್ಡಿ ಮತ್ತು ಗಾಲಿ ಸೋಮಶೇಖರ ರೆಡ್ಡಿಗಳ ಒಡೆತನದಲ್ಲಿ ಬಳ್ಳಾರಿ ಮತ್ತು ಆಂಧ್ರಪ್ರದೇಶದ ಅನಂತಪುರ ಜಿಲ್ಲೆಗಳಲ್ಲಿ ಹಲವು ಗಣಿಗಳಿದ್ದು, ಇಲ್ಲಿ ಒತ್ತುವರಿ ಮಾಡಲಾಗಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ನೇಮಿಸಿದ್ದ ಸರ್ವೇ ಆಫ್ ಇಂಡಿಯಾದ ಸಮಿತಿಯು ಸಮೀಕ್ಷೆ ನಡೆಸಿದ್ದು, ಆ ವರದಿಯನ್ನು ಕೋರ್ಟ್‌ಗೆ ಸಲ್ಲಿಸಿದೆ. ಈ ಸಂಬಂಧ ನ್ಯಾಯಾಲಯವು ಇನ್ನಷ್ಟೇ ತೀರ್ಪು ನೀಡಬೇಕಿದೆ.
ಆಂಧ್ರಪ್ರದೇಶ ಮತ್ತು ಕರ್ನಾಟಕಗಳ ನಡುವಿನ ಅಂತಾರಾಜ್ಯ ಗಡಿ ಪ್ರದೇಶವನ್ನು ಹೊಸದಾಗಿ ಗುರುತಿಸದ ಹೊರತು ಅಕ್ರಮ ಗಣಿಗಾರಿಕೆಯ ಕುರಿತು ಸಮರ್ಪಕವಾಗಿ ವರದಿ ಸಲ್ಲಿಸಲು ಸಾಧ್ಯವಿಲ್ಲ. ಹಾಗಾಗಿ ಗಡಿ ಮರು ಗುರುತಿಸುವಿಕೆ ಕಾರ್ಯ ನಡೆಯುವವರೆಗೆ ಗಣಿಗಾರಿಕೆ ಸ್ಥಗಿತ ಮುಂದುವರಿಸಬೇಕು ಎಂದು ಸರ್ವೇ ಆಫ್ ಇಂಡಿಯಾವು ಸುಪ್ರೀಂ ಕೋರ್ಟ್‌ಗೆ ಶಿಫಾರಸು ಮಾಡಿತ್ತು.