ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮಂಪರು ಪರೀಕ್ಷೆ ಅಸಂವಿಧಾನಿಕ, ಸಾಕ್ಷಿಯಾಗಲ್ಲ: ಸುಪ್ರೀಂ (narco-analysis test | fundamental rights | Supreme court | Brain mapping)
Bookmark and Share Feedback Print
 
ಮಂಪರು ಪರೀಕ್ಷೆ ನಡೆಸುವುದು ಅಸಂವಿಧಾನಿಕ ಎಂದು ಮಹತ್ವದ ತೀರ್ಪು ನೀಡಿರುವ ಸರ್ವೋಚ್ಚ ನ್ಯಾಯಾಲಯ, ಯಾವುದೇ ಆರೋಪಗಳನ್ನು ಹೊತ್ತಿದ್ದರೂ ವ್ಯಕ್ತಿಯೊಬ್ಬನ ಒಪ್ಪಿಗೆಯಿಲ್ಲದೆ ಮಂಪರು ಪರೀಕ್ಷೆ ನಡೆಸುವಂತಿಲ್ಲ ಮತ್ತು ಅದನ್ನು ಸಾಕ್ಷಿಯನ್ನಾಗಿ ನ್ಯಾಯಾಲಯ ಪರಿಗಣಿಸುವಂತಿಲ್ಲ ಎಂದು ಹೇಳಿದೆ.

ಮಂಪರು ಪರೀಕ್ಷೆ ನಡೆಸುವುದು ವ್ಯಕ್ತಿಯ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಹಾಗಾಗಿ ಯಾವುದೇ ವ್ಯಕ್ತಿಯನ್ನು ಮಂಪರು ಪರೀಕ್ಷೆ (ನಾರ್ಕೊ ಅನಾಲಿಸಿಸ್), ಸುಳ್ಳು ಪತ್ತೆ ಪರೀಕ್ಷೆ (ಪಾಲಿಗ್ರಾಫ್ ಟೆಸ್ಟ್) ಮತ್ತು ಮಿದುಳು ನಕ್ಷೆ ತೆಗೆಯುವುದಕ್ಕೆ (ಬ್ರೇನ್ ಮ್ಯಾಪಿಂಗ್) ಬಲವಂತವಾಗಿ ಒಳಪಡಿಸುವುದು ಸಲ್ಲದು ಎಂದು ಸುಪ್ರೀಂ ಕೋರ್ಟ್ ಇಂದು ತನ್ನ ತೀರ್ಪಿನಲ್ಲಿ ತಿಳಿಸಿದೆ.

ಸ್ವ ಇಚ್ಛೆಗೆ ವಿರುದ್ಧವಾಗಿ ಬಲವಂತದಿಂದ ಸಾಕ್ಷಿಯನ್ನು ಹೇಳುವಂತೆ ಮಾಡುವುದರಿಂದ ವ್ಯಕ್ತಿಯನ್ನು ರಕ್ಷಿಸುವ ವಿಧಿ 23ನ್ನು ನಾರ್ಕೊ ಅನಾಲಿಸಿಸ್, ಪಾಲಿಗ್ರಾಫ್ ಟೆಸ್ಟ್, ಮತ್ತು ಬ್ರೇನ್ ಮ್ಯಾಪಿಂಗ್‌ಗಳು ಉಲ್ಲಂಘಿಸುತ್ತವೆ. ಹಾಗಾಗಿ ಯಾವುದೇ ವ್ಯಕ್ತಿಯನ್ನು ಬಲವಂತದಿಂದ ಮತ್ತು ಇಚ್ಛೆಗೆ ವಿರುದ್ಧವಾಗಿ ಇಂತಹ ತಂತ್ರಜ್ಞಾನಗಳಿಗೆ ಒಳಪಡಿಸುವುದರಿಂದ ವೈಯಕ್ತಿಕ ಹಕ್ಕುಗಳಿಗೆ ಧಕ್ಕೆಯುಂಟಾಗುತ್ತದೆ ಎಂಬ ಅಭಿಪ್ರಾಯವನ್ನು ನಾವು ಪರಿಗಣಿಸಿದ್ದೇವೆ ಎಂದು ನ್ಯಾಯಮೂರ್ತಿ ಬಾಲಕೃಷ್ಣನ್ ತಿಳಿಸಿದ್ದಾರೆ.

ಅದೇ ಹೊತ್ತಿಗೆ ಮಂಪರು ಪರೀಕ್ಷೆಗೆ ಆರೋಪಿತ ವ್ಯಕ್ತಿಯು ಸ್ವಯಂ ಒಪ್ಪಿಗೆ ಸೂಚಿಸಿದಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಆದರೂ ಈ ಪರೀಕ್ಷೆಗಳಲ್ಲಿ ಹೊರಬರುವ ಫಲಿತಾಂಶಗಳನ್ನು ಇತರ ಸಾಕ್ಷ್ಯಗಳ ಹೊರತು ನ್ಯಾಯಾಲಯದಲ್ಲಿ ಬಳಸಲು ಅವಕಾಶವಿಲ್ಲ ಎಂದು ಅಪೆಕ್ಸ್ ಕೋರ್ಟ್ ಸ್ಪಷ್ಟಪಡಿಸಿದೆ.

ಮಂಪರು ಪರೀಕ್ಷೆಗಳನ್ನು ನಡೆಸುವುದರ ಪರ ಮತ್ತು ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ) ಮತ್ತು ಕೇಂದ್ರ ಸರಕಾರ ಸೇರಿದಂತೆ ಇನ್ನಿತರರ ಅರ್ಜಿಗಳನ್ನು 27 ತಿಂಗಳುಗಳ ಹಿಂದೆ ವಿಚಾರಣೆಗೆ ಸ್ವೀಕರಿಸಿದ್ದ ಮುಖ್ಯ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ನೇತೃತ್ವದ ಪೀಠವು ತೀರ್ಪನ್ನು ಕಾಯ್ದಿರಿಸಿತ್ತು.

ಸುಪ್ರೀಂ ಕೋರ್ಟ್ ತೀರ್ಪಿನಿಂದಾಗಿ ಮಾವೋವಾದಿ ನಾಯಕ ಕೊಬಾಡ್ ಗಾಂಡಿ, ಗುಜರಾತ್‌ನ 'ಗಾಡ್ ಮದರ್' ಖ್ಯಾತಿಯ ಸಂತೋಕ್ಬೆನ್ ಜಡೇಜಾ, ನಕಲಿ ಛಾಪಾ ಕಾಗದ ಹಗರಣದ ರೂವಾರಿ ಅಬ್ದುಲ್ ಕರೀಂ ತೆಲಗಿ ಮುಂತಾದ ಪ್ರಕರಣಗಳಲ್ಲಿ ತನಿಖಾ ದಳಗಳಿಗೆ ತೀವ್ರ ಹಿನ್ನಡೆಯಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಸಂಬಂಧಿತ ಮಾಹಿತಿ ಹುಡುಕಿ