ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕಸಬ್ ಸಾಕಲು ಪ್ರತಿ ದಿನ 2 ಲಕ್ಷ, ಇದುವರೆಗೆ 35 ಕೋಟಿ! (Maharashtra | Congress | Ajmal Kasab | Mumbai attack)
Bookmark and Share Feedback Print
 
ಮುಂಬೈ ದಾಳಿಯ ನಂತರ ಜೀವಂತವಾಗಿ ಸೆರೆ ಸಿಕ್ಕ ಏಕೈಕ ಪಾಕಿಸ್ತಾನಿ ಉಗ್ರ ಮೊಹಮ್ಮದ್ ಅಜ್ಮಲ್ ಅಮೀರ್ ಕಸಬ್‌ನನ್ನು ಸಾಕಲು ಕಾಂಗ್ರೆಸ್ ನೇತೃತ್ವದ 'ಪ್ರಜಾಸತ್ತಾತ್ಮಕ ರಂಗ' ಮಹಾರಾಷ್ಟ್ರ ಸರಕಾರ ಪ್ರತಿ ದಿನ ಎರಡು ಲಕ್ಷ ರೂಪಾಯಿಗಳನ್ನು ವ್ಯಯಿಸುತ್ತಿದೆ.

ಆತನಿಗೆ ಭದ್ರತೆ ನೀಡಲು ನಾವು ಭಾರೀ ಮೊತ್ತವನ್ನು ವ್ಯಯಿಸುವುದು ಅನಿವಾರ್ಯ, ಬೇರೆ ದಾರಿಯೇ ಇಲ್ಲ. ಕಸಬ್ ಜೀವಂತವಾಗಿ ಸೆರೆ ಸಿಕ್ಕ ನಂತರ ಒಂದು ಪ್ರಮುಖ ಕ್ರಿಮಿನಲ್ ಪ್ರಕರಣವನ್ನು ನಾವು ಕಾನೂನಿನ ಪರಿಧಿಗೆ ತಂದಿದ್ದೇವೆ ಎಂದು ಸರಕಾರಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

2008ರ ನವೆಂಬರ್ 26ರಂದು ಮುಂಬೈ ಮೇಲೆ ದಾಳಿ ನಡೆಸಿ ನೂರಾರು ಮಂದಿಯ ಸಾವಿಗೆ ಕಾರಣನಾದ ದುಬಾರಿ ಕೈದಿ ಕಸಬ್‌ನನ್ನು ಸಾಕಲು ಪ್ರಸಕ್ತ ಸರಕಾರವು ದಿನಕ್ಕೆ ಎರಡು ಲಕ್ಷ ರೂಪಾಯಿಗಳನ್ನು ವ್ಯಯಿಸುತ್ತಿದೆ. ಇದುವರೆಗಿನ ಒಟ್ಟು ವೆಚ್ಚ 35 ಕೋಟಿ ರೂಪಾಯಿಗಳನ್ನು ದಾಟಿದೆ. ಅಲ್ಲದೆ ಆತನನ್ನು ಇಡಲಾಗಿರುವ ಆರ್ಥರ್ ರೋಡ್ ಜೈಲಿನ ಪಕ್ಕದಲ್ಲೇ ಹಾದು ಹೋಗಬೇಕಿದ್ದ ಮೋನೋ ರೈಲು ಮಾರ್ಗವನ್ನು ಬದಲಾಯಿಸುತ್ತಿರುವ ಕಾರಣ ಹೆಚ್ಚುವರಿ ಖರ್ಚನ್ನು ಸರಕಾರ ಭರಿಸಬೇಕಾಗಿದೆ.

ಆತನ ಜೀವಕ್ಕೆ ಭಯೋತ್ಪಾದಕರಿಂದ ಬೆದರಿಕೆಗಳಿರುವುದರಿಂದ ಸಂಭಾವ್ಯ ದಾಳಿಗಳನ್ನು ತಪ್ಪಿಸಲು ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಪಡೆಯನ್ನು ಆರ್ಥರ್ ರೋಡ್ ಜೈಲಿನಲ್ಲಿ ನಿಯೋಜಿಸಲಾಗಿದೆ. ಜತೆಗೆ ಜೈಲಿನ ಸುತ್ತಮುತ್ತ ಚಲನವಲನಗಳನ್ನು ವೀಕ್ಷಿಸಲು ಅರ್ಧ ಡಜನ್ ವೀಕ್ಷಣಾ ಗೋಪುರಗಳನ್ನು ನಿರ್ಮಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಸಬ್‌ಗೆ ವಿಶೇಷ ವ್ಯವಸ್ಥೆಗಳನ್ನು ಒದಗಿಸುವ ಮೂಲಕ ಆತನನ್ನು ರಕ್ಷಿಸಲು ಕೇಂದ್ರವೇ ಸ್ವತಃ ಮುಂದಾಗಿದೆ. ಆತನ ಬಗ್ಗೆ ಕೈಗೊಳ್ಳಲಾಗುವ ಎಲ್ಲಾ ಭದ್ರತಾ ವಿಚಾರಗಳನ್ನು ನೇರವಾಗಿ ಗೃಹ ಸಚಿವ ಪಿ. ಚಿದಂಬರಂ ನೋಡಿಕೊಳ್ಳುತ್ತಿದ್ದಾರೆ. ಕಸಬ್‌ನನ್ನು ಇಡಲಾಗಿರುವ ಜೈಲಿನ ಸೆಲ್ ಎಷ್ಟು ಗಟ್ಟಿಯಾಗಿದೆ ಎಂದರೆ ಯಾವುದೇ ಸ್ಫೋಟ ನಡೆದರೂ ಅದನ್ನು ಒಡೆಯುವುದು ಅಸಾಧ್ಯ. ಇದಕ್ಕಾಗಿ ಲಕ್ಷಾಂತರ ರೂಪಾಯಿಗಳನ್ನು ವ್ಯಯಿಸಲಾಗಿದೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ವಿವರಣೆ ನೀಡಿದ್ದಾರೆ.

ಕಸಬ್‌ಗೆ ಉದರ ಸಮಸ್ಯೆಗಳಿವೆ. ಈ ಹಿಂದೆ ಆತನನ್ನು ನಗರದ ಸರಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಒಳಪಡಿಸಲಾಗುತ್ತಿತ್ತು. ಆದರೆ ಇದು ಅಪಾಯಕ್ಕೆ ಆಹ್ವಾನ ನೀಡಬಹುದು ಎಂಬ ಕಾರಣಕ್ಕೆ ಜೆಜೆ ಆಸ್ಪತ್ರೆಯಲ್ಲಿ ನಾವು ಕೈದಿಗಳ ವಿಶೇಷ ವಾರ್ಡ್ ನಿರ್ಮಾಣ ಮಾಡಿದ್ದೇವೆ. ಅಲ್ಲೇ ಕಸಬ್‌ಗೆ ಚಿಕಿತ್ಸೆ ನೀಡಲಾಗುತ್ತಿದೆ. ಇದು ಸಂಪೂರ್ಣವಾಗಿ ಗುಂಡು ನಿರೋಧಕ ಕೊಠಡಿಯಾಗಿದೆ. ಈಗ ಪ್ರತಿ ದಿನ ವೈದ್ಯರು ಜೈಲಿಗೆ ಬಂದು ಆತನನ್ನು ಪರೀಕ್ಷೆ ನಡೆಸುತ್ತಾರೆ. ಅಗತ್ಯ ಬಿದ್ದರೆ ಅಲ್ಲೇ ಸಣ್ಣಪುಟ್ಟ ಚಿಕಿತ್ಸೆಯನ್ನೂ ನೀಡುತ್ತಾರೆ. ನ್ಯಾಯಾಂಗ ಪ್ರಕ್ರಿಯೆಗಳು ಮುಗಿದ ಬಳಿಕ ಆತನಿಗೆ ಹೆಚ್ಚಿನ ಚಿಕಿತ್ಸೆ ಅಥವಾ ಅಗತ್ಯ ಬಿದ್ದರೆ ಶಸ್ತ್ರಚಿಕಿತ್ಸೆ ನಡೆಸಲಾಗುತ್ತದೆ ಎಂದಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ