ನಮ್ಮ ಪಕ್ಕದ ಸೀಟಿನಲ್ಲಿ ಇಬ್ಬರು ಶಂಕಿತ ವ್ಯಕ್ತಿಗಳಿದ್ದು, ಅವರಲ್ಲೊಬ್ಬ ಬುರ್ಖಾ ಧರಿಸಿದ್ದಾನೆ. ಅವರಿಬ್ಬರು ವಿಮಾನ ಅಪಹರಣ ಕುರಿತು ಮಾತುಕತೆ ನಡೆಸುತ್ತಿದ್ದಾರೆ, ಸಂಶಯಾಸ್ಪದವಾಗಿ ವರ್ತಿಸುತ್ತಿದ್ದಾರೆ ಎಂದು ಸಹ ಪ್ರಯಾಣಿಕರು ದೂರಿಕೊಂಡ ಹಿನ್ನೆಲೆಯಲ್ಲಿ ಜಾಗೃತಗೊಂಡ ವಿಮಾನದ ಸಿಬ್ಬಂದಿಗಳು ಭದ್ರತಾ ಕಟ್ಟೆಚ್ಚರ ಘೋಷಿಸಿ ಕೆಲಕಾಲ ಆತಂಕ ಸೃಷ್ಟಿಸಿದ ಘಟನೆ ಇಂದು ಕೊಲ್ಕತ್ತಾದಲ್ಲಿ ನಡೆದಿದೆ.
123 ಪ್ರಯಾಣಿಕರನ್ನು ಹೊತ್ತಿದ್ದ ದೆಹಲಿ-ಕೊಲ್ಕತ್ತಾ-ಢಾಕಾ 'ಸ್ಪೈಸ್‌ಜೆಟ್ ವಿಮಾನ 208'ರಲ್ಲಿ ಈ ಘಟನೆ ನಡೆದಿರುವುದು. ಭದ್ರತಾ ಬೆದರಿಕೆ ಹಿನ್ನೆಲೆಯಲ್ಲಿ ಏರ್ ಟ್ರಾಫಿಕ್ ಕಂಟ್ರೋಲ್‌ನಿಂದ ಅನುಮತಿ ಪಡೆದುಕೊಂಡ ಪೈಲಟ್, ತ್ವರಿತಗತಿಯಲ್ಲಿ ವಿಮಾನವನ್ನು ಕೊಲ್ಕತ್ತಾದ ನೇತಾಜಿ ಸುಭಾಷ್ ಚಂದ್ರ ಬೋಸ್ ವಿಮಾನ ನಿಲ್ದಾಣದಲ್ಲಿ ಇಳಿಸಿದ್ದ.
ಬುರ್ಖಾದೊಳಗೆ ಪುರುಷನಲ್ಲ, ಮಹಿಳೆ..! ಇಷ್ಟೆಲ್ಲ ಆತಂಕಕ್ಕೆ ಕಾರಣವಾಗಿರುವುದು ಬುರ್ಖಾದಲ್ಲಿದ್ದ ದಡೂತಿ ಮಹಿಳೆ. ಈಕೆಯ ದೇಹದ ಗಾತ್ರವನ್ನು ನೋಡಿದ್ದ ಪ್ರಯಾಣಿಕರು, ಅದು ಪುರುಷನೇ ಇರಬೇಕೆಂದು ಸಂಶಯಿಸಿದ್ದರು. ಅಲ್ಲದೆ ಮತ್ತೊಬ್ಬ ಪುರುಷನ ಜತೆ ಬುರ್ಖಾಧಾರಿ ಆತಂಕ ಹುಟ್ಟಿಸುವ ರೀತಿಯಲ್ಲಿ ಅಪಹರಣ ಮಾತುಕತೆ ನಡೆಸಿರುವುದನ್ನೂ ಪ್ರಯಾಣಿಕರು ಕೇಳಿದ್ದರು.
ಇಷ್ಟಾದ ನಂತರ ವಿಮಾನದ ಸಿಬ್ಬಂದಿಗಳು ಸಂಶಯಿತ ಇಬ್ಬರು ಪ್ರಯಾಣಿಕರನ್ನು ವಿಚಾರಣೆ ನಡೆಸಲು ಬಂದಾಗ ಪೂರಕವಾಗಿ ಸ್ಪಂದಿಸಿರಲಿಲ್ಲ. ಬುರ್ಖಾ ತೆಗೆಯುವಂತೆ ಮನವಿ ಮಾಡಿಕೊಂಡರೂ, ಅವರು ಒಪ್ಪಿಗೆ ಸೂಚಿಸಿರಲಿಲ್ಲ.
ಈ ಹಿನ್ನೆಲೆಯಲ್ಲಿ ತುರ್ತು ಲ್ಯಾಂಡಿಂಗ್ ವಿಭಾಗದಲ್ಲಿ ವಿಮಾನವನ್ನು ಇಳಿಸಲಾಯಿತು. ತಕ್ಷಣವೇ ಸಿಐಎಸ್ಎಫ್ ಭದ್ರತಾ ಪಡೆಗಳು, ಬಾಂಬ್ ನಿಷ್ಕ್ರಿಯ ದಳ, ಅಗ್ನಿಶಾಮಕ ದಳ ಮತ್ತು ಪೊಲೀಸರು ವಿಮಾನವನ್ನು ಸುತ್ತುವರಿದು ತಪಾಸಣೆ ನಡೆಸಿದರು.
ಇಡೀ ವಿಮಾನವನ್ನು ತಪಾಸಣೆ ನಡೆಸಿ, ಸಂಶಯಿತ ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆಯಲಾಯಿತು. ಬುರ್ಖಾ ಧರಿಸಿದ್ದ ವ್ಯಕ್ತಿಯನ್ನು ವಶಕ್ಕೆ ತೆಗೆದುಕೊಂಡು ಪರಿಶೀಲನೆ ನಡೆಸಿದಾಗ ಅದು ಮಹಿಳೆಯೆಂಬುದು ಖಚಿತವಾಯಿತು. ದಾಖಲೆಗಳನ್ನು ಪರಿಶೀಲಿಸಿದಾಗ ಅವರು ರಷ್ಯಾ ಪ್ರಜೆಗಳು ಎಂಬುದು ತಿಳಿದು ಬಂದಿದೆ. ಇಬ್ಬರನ್ನೂ ಭದ್ರತಾ ಅಧಿಕಾರಿಗಳು ತೀವ್ರ ವಿಚಾರಣೆ ನಂತರ ಬಿಡುಗಡೆ ಮಾಡಿದ್ದಾರೆ.