ಆಕೆ ಮೊದಲ ಗಂಡನಿಂದ ಬೇರ್ಪಟ್ಟಿರುವ ಯುವತಿ, ಆತ ಇನ್ನೂ ಮದುವೆಯಾಗದ ಯುವಕ. ಇಬ್ಬರೂ ಕೆಲವು ಸಮಯ ಜತೆಯಾಗಿ ಜೀವನ ಸಾಗಿಸಿದ್ದಾರೆ. ಗರ್ಭಿಣಿಯಾದ ನಂತರ ಯುವತಿ ಇದೀಗ ಯುವಕನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾಳೆ!
ಇದು ನಡೆದಿರುವುದು ಹರ್ಯಾಣದ ರೆವಾರಿ ಪಟ್ಟಣದಲ್ಲಿ. 26ರ ಹರೆಯದ ವಿಚ್ಛೇದಿತ ಮಹಿಳೆಯೊಂದಿಗೆ ಕಳೆದೊಂದು ವರ್ಷದಿಂದ ನೀರಜ್ ಯಾದವ್ ಎಂಬ ಯುವಕ ಸಂಬಂಧ ಹೊಂದಿದ್ದ. ಈತ ಮೂಲತಃ ರಾಜಸ್ತಾನದ ಅಲ್ವಾರ್ ಜಿಲ್ಲೆಯವನು.
ನಿನ್ನನ್ನು ಮದುವೆಯಾಗುತ್ತೇನೆ ಎಂದು ಯಾದವ್ ಭರವಸೆ ನೀಡಿದ ಕಾರಣದಿಂದ ನಾನು ಆತನ ಜತೆ ಸಂಬಂಧಕ್ಕೆ ಒಪ್ಪಿಗೆ ಸೂಚಿಸಿದ್ದೆ. ಆದರೆ ನಾನು ಗರ್ಭಿಣಿಯಾದ ನಂತರ ಮದುವೆಗೆ ಆತ ಒಪ್ಪುತ್ತಿಲ್ಲ ಎಂದು ದೂರಿರುವ ಯುವತಿ, ಆತನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾಳೆ.
ಯಾದವ್‌ನಿಂದಾಗಿ ತಾನು ಗರ್ಭಿಣಿಯಾದ ನಂತರ ಮದುವೆಯಾಗುವಂತೆ ಒತ್ತಾಯಿದ್ದೆ. ಆದರೆ ಆತ ನನ್ನನ್ನು ನಡುದಾರಿಯಲ್ಲಿ ಬಿಟ್ಟು ಹೋಗಿದ್ದಾನೆ ಎಂದು ವಿಚ್ಛೇದಿತೆ ಆರೋಪಿಸಿದ್ದಾಳೆ.
ಯುವತಿ ನೀಡಿದ ದೂರಿನಂತೆ ಯಾದವ್ ವಿರುದ್ಧ ಅತ್ಯಾಚಾರ ಮತ್ತು ಜೀವ ಬೆದರಿಕೆ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು, ಪೊಲೀಸರು ಯಾದವ್‌ನನ್ನು ಬಂಧಿಸಿದ್ದಾರೆ. ಇದೀಗ ನ್ಯಾಯಾಲಯ ಆತನನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.