ಇಷ್ಟು ಬೇಗ ಸಾನಿಯಾ ಮದುವೆಯಾಗುತ್ತಿದ್ದಾರೆಂದು ಜಗತ್ತೇ ಅಚ್ಚರಿಗೊಂಡಿದ್ದರೂ, ಸಾನಿಯಾ ನಿರ್ಧಾರ ಅಚಲವಾಗಿತ್ತು. ಅವರ ಪ್ರಕಾರ 24 ಅಥವಾ 25ರೊಳಗೆ ಮದುವೆಯಾಗಬೇಕು ಎನ್ನುವುದಾಗಿತ್ತು.
PTI
ನನಗೀಗ 23 ವರ್ಷ. ಹಾಗಾಗಿ ನನ್ನ ಮದುವೆ ಸರಿಯಾದ ಸಮಯದಲ್ಲೇ ನಡೆದಿದೆ. ಬೇಗನೆ ಮದುವೆಯಾಗಬೇಕು ಎನ್ನುವುದು ನನ್ನ ಇಚ್ಛೆಯಾಗಿತ್ತು. ಯಾಕೆಂದರೆ ಚಿಕ್ಕ ಪ್ರಾಯದಲ್ಲೇ ಮಕ್ಕಳನ್ನು ಪಡೆಯುವುದು ನನ್ನ ಆಸೆ. ಮದುವೆ ಇಂತಹ ವರ್ಷ ಅಥವಾ ತಿಂಗಳಲ್ಲೇ ನಡೆಯಬೇಕೆಂದು ಯೋಚಿಸಿದವಳು ನಾನಲ್ಲ, ಅದು ನಡೆದು ಹೋಗಿದೆ ಎಂದು ಪತ್ರಿಕೆಯೊಂದರ ಸಂದರ್ಶನದಲ್ಲಿ ಸಾನಿಯಾ ತಿಳಿಸಿದ್ದಾರೆ.
ಪ್ರಸಕ್ತ ಹೈದರಾಬಾದ್‌ನ ಮನೆಯಲ್ಲಿ ಗಂಡನೊಂದಿಗೆ ಸಾನಿಯಾ ಸಂತೋಷವಾಗಿದ್ದಾರೆ. ಅವರ ಪ್ರಕಾರ ಮದುವೆಯಾದ ನಂತರ ಏನೂ ಬದಲಾಗಿಲ್ಲ. ಒಟ್ಟಿಗೆ ಬದುಕುತ್ತಿರುವುದನ್ನು ಬಿಟ್ಟರೆ ಮದುವೆಯಾಗಿದೆ ಎಂಬ ಭಾವನೆಯೇ ಬರುತ್ತಿಲ್ಲ ಎಂದಿದ್ದಾರೆ.
ಪಾಕ್ ಪ್ರಜೆಯಾಗಲಾರೆ.. ಪಾಕಿಸ್ತಾನದ ಪೌರತ್ವ ಸ್ವೀಕರಿಸುವ ಯೋಜನೆಯನ್ನು ಹೊಂದಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ್ದು ಹೀಗೆ. ಈಗಾಗಲೇ ಹಲವು ಬಾರಿ ಹೇಳಿದಂತೆ ನಾನು ಭಾರತೀಯಳಾಗಿಯೇ ಉಳಿಯುತ್ತೇನೆ. ಖಂಡಿತಾ ನನ್ನ ರಾಷ್ಟ್ರೀಯತೆಯನ್ನು ತೊರೆಯುವುದಿಲ್ಲ.
ಸಂಘಟನೆಗಳ ಬೆದರಿಕೆ ಬಗ್ಗೆ.. ವಿಶ್ವ ಹಿಂದೂ ಪರಿಷತ್ ನಿಮ್ಮನ್ನು ಭಾರತದಲ್ಲಿ ಆಡಲು ಅವಕಾಶ ನೀಡುವುದಿಲ್ಲ ಎಂದು ಸವಾಲು ಹಾಕಿದೆಯಲ್ಲ ಎಂಬ ಪ್ರಶ್ನೆಗೆ, ಇಲ್ಲ-- ಅದು ತನ್ನ ಹೇಳಿಕೆಯನ್ನು ವಾಪಸ್ ಪಡೆದುಕೊಂಡಿದೆ. ಆದರೆ ಅದನ್ನು ಮಾಧ್ಯಮಗಳು ಹೆಚ್ಚು ಪ್ರಚಾರ ಮಾಡಿಲ್ಲ. ನಾನು ಈ ದೇಶಕ್ಕೆ ಸೇರಿದವಳು. ಹಾಗಾಗಿ ಆಡುವುದನ್ನು ಮುಂದುವರಿಸುತ್ತೇನೆ.
ಪಾಕಿಸ್ತಾನದಲ್ಲಿನ ಭದ್ರತಾ ಬೆದರಿಕೆಗಳು ಮತ್ತು ರಾಜಕೀಯ ಅಸ್ಥಿರತೆಗಳ ಬಗ್ಗೆ ನಾನು ತಲೆ ಕೆಡಿಸಿಕೊಂಡಿಲ್ಲ ಎಂದಿರುವ ಸಾನಿಯಾ, ಭಾರತ ಮತ್ತು ಪಾಕಿಸ್ತಾನದ ಮೊದಲ ಸೆಲೆಬ್ರಿಟಿ ಜೋಡಿ ಎಂದೆನಿಸಿರುವುದಕ್ಕೆ ನನಗೆ ತೀರಾ ಹೆಮ್ಮೆಯೆನಿಸುತ್ತಿದೆ ಎಂದಿದ್ದಾರೆ.