ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪರಮಪಾಪಿ ಕಸಬ್ ಫಾಸಿಗೆ ಇಂದು ಮೊದಲ ಮುಹೂರ್ತ? (Ajmal Kasab | Mumbai attacks | Terrorist | Pakistan)
Bookmark and Share Feedback Print
 
ಮುಂಬೈ ದಾಳಿಯಲ್ಲಿ ದೋಷಿಯೆಂದು ನ್ಯಾಯಾಲಯದಿಂದ ತೀರ್ಪನ್ನು ಪಡೆದುಕೊಂಡಿರುವ ಪಾಕಿಸ್ತಾನಿ ಉಗ್ರ ಮೊಹಮ್ಮದ್ ಅಜ್ಮಲ್ ಅಮೀರ್ ಕಸಬ್‌ಗೆ ಗರಿಷ್ಠ ಪ್ರಮಾಣದ ಶಿಕ್ಷೆ ನೀಡಬೇಕೆಂದು ಪ್ರಾಸಿಕ್ಯೂಷನ್ ವಾದಿಸಿದ್ದು, ಇಂದು ವಿಶೇಷ ನ್ಯಾಯಾಲಯವು ಗಲ್ಲು ಶಿಕ್ಷೆಯನ್ನು ಪ್ರಕಟಿಸಲಿದೆ ಎಂದು ನಿರೀಕ್ಷಿಸಲಾಗುತ್ತಿದೆ.

2008ರ ನವೆಂಬರ್ 26ರಂದು ಸಮುದ್ರ ಮಾರ್ಗದ ಮೂಲಕ ಮುಂಬೈ ಪ್ರವೇಶಿಸಿ ಹಲವೆಡೆ ಯದ್ವಾತದ್ವಾ ಗುಂಡಿನ ಮಳೆಗರೆದು ನೂರಾರು ಮಂದಿಯ ಸಾವಿಗೆ ಕಾರಣವಾಗಿದ್ದ ಕಸಬ್ ನೀಡಿದ್ದ ತಪ್ಪೊಪ್ಪಿಗೆಯನ್ನು ವಿಶೇಷ ನ್ಯಾಯಾಲಯದ ಜಡ್ಜ್ ಎಂ.ಎಲ್. ತಹಲಿಯಾನಿ ಬಹುತೇಕ ಸ್ವೀಕರಿಸಿದ್ದು, ಗುರುವಾರ ಶಿಕ್ಷೆ ಪ್ರಕಟಿಸಲಾಗುತ್ತದೆ ಎಂದು ಹೇಳಿದ್ದರು.

ಭಾರತದ ವಿರುದ್ಧ ಯುದ್ಧ ಸಾರಿದ್ದು, ಹಲವರ ಹತ್ಯೆ ನಡೆಸಿರುವುದು ಮತ್ತು ಭಯೋತ್ಪಾದನಾ ದಾಳಿಗಳನ್ನು ನಡೆಸಿರುವ ಪ್ರಕರಣಗಳಲ್ಲಿ ಕಸಬ್ ತಪ್ಪಿತಸ್ಥನೆಂದು ಸಾಬೀತಾಗಿದೆ. ಹಾಗಾಗಿ ಆತನಿಗೆ ಗರಿಷ್ಠ ಶಿಕ್ಷೆಯಾದ ಮರಣದಂಡನೆಯನ್ನು ವಿಧಿಸಬೇಕೆಂದು ವಿಶೇಷ ಸಾರ್ವಜನಿಕ ವಕೀಲ ಉಜ್ವಲ್ ನಿಕಂ ಮಂಗಳವಾರ ವಾದಿಸಿದ್ದರು. ಆದರೆ ತನ್ನ ಕಕ್ಷಿದಾರನಿಗೆ ಕಡಿಮೆ ಶಿಕ್ಷೆಯನ್ನು ಪ್ರಕಟಿಸುವ ಮೂಲಕ ಸಹಾನುಭೂತಿ ತೋರಿಸಬೇಕು ಎಂದು ನ್ಯಾಯಾಲಯದಿಂದ ನೇಮಕಗೊಂಡಿರುವ ಕಸಬ್ ಪರ ವಕೀಲ ಕೆ.ಪಿ. ಪವಾರ್ ವಾದಿಸಿದ್ದರು.

ಪ್ರಕರಣದ ಪರ ಮತ್ತು ವಿರೋಧದ ವಾದ ವಿವಾದಗಳನ್ನು ಆಲಿಸಿದ್ದ ನ್ಯಾಯಮೂರ್ತಿ ತಹಲಿಯಾನಿ, ಇಂದು ಅಂತಿಮ ತೀರ್ಪು ನೀಡಲಿದ್ದಾರೆ.

ತನ್ನಂತೆ ಇತರರು ಕೂಡ ಭಯೋತ್ಪಾದನಾ ಚಟುವಟಿಕೆಗಳಲ್ಲಿ ಅಥವಾ ಫಿದಾಯಿನ್ ಅಥವಾ ಆತ್ಮಹತ್ಯಾ ದಾಳಿಗಳಲ್ಲಿ ಪಾಲ್ಗೊಳ್ಳುವಂತೆ ಸ್ಫೂರ್ತಿ ನೀಡಲು ಕಸಬ್ ಬಯಸುತ್ತಿದ್ದಾನೆ. ಆತ ಮುಂಬೈಯಲ್ಲಿ ನಡೆಸಿರುವುದು ಉದ್ದೇಶಪೂರ್ವಕವಾದ ಅಮಾಯಕರ ಮಾರಣಹೋಮ. ಆತ ಬಳಸಿರುವುದು ಪಾಕಿಸ್ತಾನದಲ್ಲಿ ತಯಾರಾದ ಮೆಷಿನ್‌ಗನ್. ಖಂಡಿತಕ್ಕೂ ಆತನಿಗೆ ಶಿಕ್ಷೆಯ ಪ್ರಮಾಣದಲ್ಲಿ ಯಾವುದೇ ರೀತಿಯ ವಿನಾಯಿತಿ ನೀಡಬಾರದು ಎಂದು ಸುಮಾರು ಎರಡು ಗಂಟೆಗಳ ಕಾಲ ಪ್ರಾಸಿಕ್ಯೂಷನ್ ತನ್ನ ವಾದವನ್ನು ಮಂಡಿಸಿತ್ತು.

ಒಂದು ವೇಳೆ ಕಸಬ್‌ಗೆ ಕಡಿಮೆ ಪ್ರಮಾಣದ ಶಿಕ್ಷೆಯನ್ನು ನೀಡಿದರೆ, ಭಾರತವು ಭಯೋತ್ಪಾದಕ ಗುಂಪುಗಳಿಗೆ ಸುಲಭ ತುತ್ತಾಗಬಹುದು. ಆತ ನಡೆಸಿರುವುದು ಕ್ರೂರಾತಿಕ್ರೂರ ಕೃತ್ಯ. ಆತ ಜೀವಗಳ ಮೌಲ್ಯಗಳಿಗೆ ಬೆನ್ನು ಹಾಕಿದ್ದ. ಬದುಕುವ ಎಲ್ಲಾ ಹಕ್ಕುಗಳನ್ನು ಹೊಂದಿದ್ದ ವ್ಯಕ್ತಿಗಳ ಪ್ರಾಣವನ್ನು ಆತ ತೆಗೆದಿದ್ದಾನೆ. 72 ಮಂದಿಯನ್ನು ಕೊಂದ ನಂತರವೂ ಆತ ತೃಪ್ತನಾಗದೆ, ಇನ್ನಷ್ಟು ಮಂದಿಯನ್ನು ಕೊಲ್ಲಲು ಬಯಸಿದ್ದ. ಹಾಗಾಗಿ ಆತನಿಗೆ ಮರಣ ದಂಡನೆ ವಿಧಿಸುವುದೇ ಸೂಕ್ತ ಎಂದು ನಿಕಂ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ