ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ವರ್ಷಕ್ಕೆರಡು ಕೋಟಿ ರೂ.ಗಳ 'ಸಂಸದರ ನಿಧಿ' ರದ್ದಿಲ್ಲ: ಸುಪ್ರೀಂ
(MPLAD Scheme | India | Supreme court | members of Parliament)
ವರ್ಷಕ್ಕೆರಡು ಕೋಟಿ ರೂ.ಗಳ 'ಸಂಸದರ ನಿಧಿ' ರದ್ದಿಲ್ಲ: ಸುಪ್ರೀಂ
ನವದೆಹಲಿ, ಗುರುವಾರ, 6 ಮೇ 2010( 13:26 IST )
ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಸಂಸತ್ ಸದಸ್ಯರಿಗೆ ತಮ್ಮ ಕ್ಷೇತ್ರಗಳಲ್ಲಿ ವಿನಿಯೋಗಿಸಲು ನೀಡಲಾಗುವ ಎರಡು ಕೋಟಿ ರೂಪಾಯಿಗಳ ನಿಧಿಯ ಸಾಂವಿಧಾನಿಕ ಸಿಂಧುತ್ವವನ್ನು ಸುಪ್ರೀಂ ಕೋರ್ಟ್ ಗುರುವಾರ ಎತ್ತಿ ಹಿಡಿದಿದೆ.
ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯು (ಎಂಪಿಎಲ್ಎಡಿ) ಮಾನ್ಯತೆ ಹೊಂದಿದೆ ಎಂದು ಮುಖ್ಯ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ನೇತೃತ್ವದ ಐದು ನ್ಯಾಯಾಧೀಶರ ಸಂವಿಧಾನಿಕ ಪೀಠವು ಸರ್ವಾನುಮತದ ತೀರ್ಪು ನೀಡಿದೆ.
ನ್ಯಾಯಾಧೀಶರಾದ ಆರ್.ವಿ. ರವೀಂದ್ರನ್, ಡಿ.ಕೆ. ಜೈನ್, ಪಿ. ಸದಾಶಿವಂ ಮತ್ತು ಜೆ.ಎಂ. ಪಾಂಚಾಲ್ ಅವರನ್ನೊಳಗೊಂಡ ಪೀಠವು, 'ಈ ಯೋಜನೆಯಲ್ಲಿ ಮಧ್ಯ ಪ್ರವೇಶಿಸಲು ನಮಗೆ ಯಾವುದೇ ಕಾರಣಗಳಿಲ್ಲ' ಎಂದಿದೆ.
ಕೆಲವು ಸಂಸದರಿಂದ ಯೋಜನೆ ದುರುಪಯೋಗವಾಗುತ್ತಿದೆ ಎಂಬ ಕಾರಣಕ್ಕೆ ಯೋಜನೆಯನ್ನು ರದ್ದುಪಡಿಸಲಾಗದು. ಆದರೆ ಯೋಜನೆಯ ಕಾರ್ಯನಿರ್ವಹಣೆಯಲ್ಲಿ ಸುಧಾರಣೆಯನ್ನು ತರಬಹುದು ಎಂದು ಪೀಠ ತಿಳಿಸಿದೆ.
ಎಂಪಿಎಲ್ಎಡಿ ಯೋಜನೆಯನ್ನು ಪಿ.ವಿ. ನರಸಿಂಹ ರಾವ್ ಅವರ ಸರಕಾರ 1993ರಲ್ಲಿ ಜಾರಿಗೆ ತಂದಿತ್ತು. ಆರಂಭದಲ್ಲಿ ಸಂಸದರಿಗೆ ವಾರ್ಷಿಕವಾಗಿ 50 ಸಾವಿರ ರೂಪಾಯಿಗಳನ್ನು ನೀಡಲಾಗುತ್ತಿತ್ತು. ಅದನ್ನು ತಮ್ಮ ಕ್ಷೇತ್ರದ ತುರ್ತು ಅವಶ್ಯಕತೆಗಳು ಮತ್ತು ಇತರ ಸಣ್ಣ ಪುಟ್ಟ ಅಭಿವೃದ್ಧಿ ಕಾರ್ಯಗಳಿಗಾಗಿ ಬಳಸಲು ಅವಕಾಶವಿದೆ. ಈ ಸಂಸದರ ನಿಧಿಯನ್ನು 1998ರಲ್ಲಿ ಎರಡು ಕೋಟಿ ರೂಪಾಯಿಗಳಿಗೆ ಏರಿಸಲಾಗಿತ್ತು.
ಎಂಪಿಎಲ್ಎಡಿ ಯೋಜನೆಯಡಿಯಲ್ಲಿ ಕಾಮಗಾರಿ ಗುತ್ತಿಗೆ ನೀಡಲು ಸಂಸದರು ಗುತ್ತಿಗೆದಾರರಿಂದ ಲಂಚ ಬಯಸುತ್ತಿರುವುದು 2005ರಲ್ಲಿ ನಡೆಸಲಾಗಿದ್ದ ಅಣಕು ಕಾರ್ಯಾಚರಣೆಯಲ್ಲಿ ಬಹಿರಂಗವಾಗಿತ್ತು. ಈ ಹಿನ್ನೆಲೆಯಲ್ಲಿ ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಭಾರೀ ಕೋಲಾಹಲ ಉಂಟಾಗಿತ್ತು.
ನಂತರ 2006ರಲ್ಲಿ ಎಂಎಪಿಎಲ್ಎಡಿ ಯೋಜನೆಯಡಿಯಲ್ಲಿ ಚುನಾವಣಾ ಆಯುಕ್ತ ನವೀನ್ ಚಾವ್ಲಾ ಅವರು ನಡೆಸುತ್ತಿದ್ದ ಟ್ರಸ್ಟ್ ಒಂದಕ್ಕೆ ಅಕ್ರಮವಾಗಿ ನಿಧಿಯನ್ನು ನೀಡಲಾಗಿತ್ತು ಎಂದೂ ಆರೋಪಿಸಲಾಗಿತ್ತು.