ಕನ್ನಡ ಸೇರಿದಂತೆ ಭಾಷಾ ಅಲ್ಪಸಂಖ್ಯಾತರ ಮೇಲೆ ತಮಿಳನ್ನು ನಾವು ಹೇರುವುದಿಲ್ಲ, ಕನ್ನಡ ಶಾಲೆಗಳನ್ನು ಮುಚ್ಚುವ ಯಾವುದೇ ಪ್ರಸ್ತಾಪ ಸರಕಾರದ ಮುಂದಿಲ್ಲ, ಇದು ಮಾಧ್ಯಮಗಳ ಸೃಷ್ಟಿ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿ ಸ್ಪಷ್ಟಪಡಿಸಿದ್ದಾರೆ.
ಸರಕಾರವು ಕನ್ನಡ ಭಾಷಿಗರು ಸೇರಿದಂತೆ ಭಾಷಾ ಅಲ್ಪಸಂಖ್ಯಾತರ ಮೇಲೆ ತಮಿಳು ಭಾಷೆಯನ್ನು ಹೇರಲು ಯತ್ನಿಸಿಲ್ಲ ಎಂದು ಸ್ಪಷ್ಟಪಡಿಸಿರುವ ಅವರು, ಇದು ವಿಶೇಷವಾಗಿ ಕರ್ನಾಟಕದ ಜತೆಗಿನ ಸಂಬಂಧವನ್ನು ಕುಲಗೆಡಿಸಲು ಮಾಧ್ಯಮದ ಒಂದು ವಿಭಾಗವು ನಡೆಸುತ್ತಿರುವ ಯತ್ನವಷ್ಟೇ ಎಂದು ಟೀಕಿಸಿದ್ದಾರೆ.
WD
ಕಾವೇರಿ ವಿವಾದಕ್ಕೆ ಸಂಬಂಧಪಟ್ಟಂತೆ ದಶಕಗಳ ಕಾಲ ಗುದ್ದಾಡಿಕೊಂಡಿದ್ದ ಕರ್ನಾಟಕ ಮತ್ತು ತಮಿಳುನಾಡು ಸರಕಾರಗಳ ನಡುವೆ ಅತ್ಯುತ್ತಮ ಮತ್ತು ಸ್ನೇಹಪರ ಸಂಬಂಧವಿದೆ. ಆದರೆ ಮಾಧ್ಯಮದ ಒಂದು ವಿಭಾಗವು ಇಲ್ಲಿ ಕೀಟಲೆ ಮಾಡುತ್ತಿದೆ. ಇದನ್ನು ಸಹಿಸಲಾಗದು ಎಂದು ಇದೇ ಸಂದರ್ಭದಲ್ಲಿ ಡಿಎಂಕೆ ಮುಖ್ಯಸ್ಥ ಎಚ್ಚರಿಕೆ ನೀಡಿದರು.
ತಮಿಳುನಾಡಿನಲ್ಲಿನ ಕನ್ನಡ ಮಾಧ್ಯಮ ಶಾಲೆಗಳನ್ನು ಮುಚ್ಚಬೇಕೆಂದು ಸರಕಾರ ಆದೇಶ ನೀಡಿರುವುದರ ವಿರುದ್ಧ ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಸಮಾಧಾನ ವ್ಯಕ್ತಪಡಿಸಿರುವುದರ ಸಂಬಂಧ ಕಾಂಗ್ರೆಸ್ ಸೇರಿದಂತೆ ಹಲವು ಪಕ್ಷಗಳು ವಿಧಾನಸಭೆಯಲ್ಲಿ ಪ್ರಶ್ನಿಸಿದ ಹಿನ್ನೆಲೆಯಲ್ಲಿ ಅವರು ಉತ್ತರಿಸುತ್ತಿದ್ದರು.
ಯಡಿಯೂರಪ್ಪನವರಿಗೆ ಆತುರ ಯಾಕೆ? ಯಡಿಯೂರಪ್ಪನವರು ಮಾಧ್ಯಮಗಳ ಮುಂದೆ ಹೇಳಿಕೆ ನೀಡುವ ಮೊದಲು ತಮಿಳುನಾಡು ಸರಕಾರದ ಜತೆ ವಿಚಾರವನ್ನು ಖಚಿತಪಡಿಸಿಕೊಳ್ಳಬೇಕಿತ್ತು. ಎರಡು ರಾಜ್ಯಗಳ ನಡುವೆ ಸದಾ ಹುಳಿ ಹಿಂಡಲು ಯತ್ನಿಸುತ್ತಿರುವ ಮಾಧ್ಯಮದ ಒಂದು ಘಟಕದ ಯತ್ನವಿದು. ಇದು ಶುದ್ಧ ಕೀಟಲೆ. ಇದಕ್ಕೆ ತಲೆ ಕೆಡಿಸಿಕೊಳ್ಳಬೇಕಾಗಿಲ್ಲ ಎಂದು ಕರುಣಾನಿಧಿ ತಿಳಿಸಿದ್ದಾರೆ.
ಭಾಷಾ ಅಲ್ಪಸಂಖ್ಯಾತರ ಶಾಲೆಗಳನ್ನು ಮುಚ್ಚುವ ಯಾವುದೇ ಪ್ರಸ್ತಾಪ ಸರಕಾರದ ಮುಂದಿಲ್ಲ ಎಂಬ ಶೈಕ್ಷಣಿಕ ಸಚಿವ ತಂಗಂ ತೆನ್ನರಸು ಅವರ ಸ್ಪಷ್ಟನೆಯನ್ನು ಉಲ್ಲೇಖಿಸಿದ ಮುಖ್ಯಮಂತ್ರಿಯವರು, ಇತರ ಭಾಷೆಗಳ ಮೇಲೆ ತಮಿಳನ್ನು ಮೆರೆಸಬೇಕೆಂಬ ಇಚ್ಛೆ ಡಿಎಂಕೆಗಿಲ್ಲ ಎಂದರು.
ನಾವು ತಮಿಳಿನ ಮೇಲೆ ಇತರ ಭಾಷೆಗಳ ಆಕ್ರಮಣಕ್ಕೆ ಅವಕಾಶ ನೀಡುವುದಿಲ್ಲ. ಅದೇ ಹೊತ್ತಿಗೆ ಇತರ ಭಾಷೆಗಳಿಗೆ ತೊಂದರೆಯಾಗುವಂತೆ ತಮಿಳನ್ನು ಪ್ರಚುರಪಡಿಸುವುದೂ ಇಲ್ಲ. ಇದು ನಮ್ಮ ನೀತಿ ಎಂದು ಆಡಳಿತ ಪಕ್ಷದ ಸದಸ್ಯರು ಮೇಜು ಕುಟ್ಟಿ ಸ್ವಾಗತಿಸುತ್ತಿರುವುದರ ನಡುವೆಯೇ ಕರುಣಾನಿಧಿ ಉತ್ತರಿಸಿದರು.
ಪ್ರಸಕ್ತ ತಮಿಳುನಾಡಿನಲ್ಲಿರುವ 53 ಕನ್ನಡ ಮಾಧ್ಯಮ ಶಾಲೆಗಳಲ್ಲಿ 3,900 ವಿದ್ಯಾರ್ಥಿಗಳು ವಿದ್ಯಾಭ್ಯಾಸ ನಡೆಸುತ್ತಿದ್ದಾರೆ. ಈ ಶಾಲೆಗಳನ್ನು ಮುಚ್ಚುವ ಯಾವುದೇ ಪ್ರಸ್ತಾಪ ನಮ್ಮ ಮುಂದಿಲ್ಲ. ಸರಕಾರವು ಇಂತಹ ಶಾಲೆಗಳಿಗೆ ಎಲ್ಲಾ ಅಗತ್ಯ ಸಹಕಾರಗಳನ್ನು ನೀಡಲಿವೆ ಎಂದು ಸಚಿವ ತೆನ್ನರಸು ತಿಳಿಸಿದ್ದಾರೆ.