ಕರ್ನಾಟಕದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಕುರಿತು ಸಂಸತ್ತಿನಲ್ಲಿ ದನಿಯೆತ್ತಿರುವ ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನ ಮಂತ್ರಿ ಎಚ್.ಡಿ. ದೇವೇಗೌಡ, ಈ ಕುರಿತು ಲೋಕಸಭೆಯಲ್ಲಿ ವಿಶೇಷ ಚರ್ಚೆ ನಡೆಸಬೇಕೆಂದು ಬೇಡಿಕೆ ಮುಂದಿಟ್ಟಿದ್ದಾರೆ.
ಗುರುವಾರ ಲೋಕಸಭೆಯ ಶೂನ್ಯವೇಳೆಯಲ್ಲಿ ಅಕ್ರಮ ಗಣಿಗಾರಿಕೆಯನ್ನು ಪ್ರಸ್ತಾಪಿಸಿದ ಗೌಡ, ತಾನು ಸದನದಲ್ಲಿ ಈ ಕುರಿತು ವಿಶೇಷ ಚರ್ಚೆ ನಡೆಯಬೇಕು ಮತ್ತು ಅದಕ್ಕಾಗಿ ಸೂಕ್ತ ಸಮಯವನ್ನು ನಿಗದಿಪಡಿಸಬೇಕೆಂದು ಬಯಸುತ್ತಿದ್ದೇನೆ ಎಂದರು.
ಕೇಂದ್ರ ಗಣಿಗಾರಿಕಾ ಸಚಿವ ಬಿಜೋಯ್ ಕೃಷ್ಣಾ ಹ್ಯಾಂಡಿಕ್ ಅವರು ಅನಾರೋಗ್ಯಕ್ಕೊಳಗಾಗಿರುವುದರಿಂದ ಪ್ರಸಕ್ತ ಚರ್ಚೆಯನ್ನು ಕೈಗೆತ್ತಿಕೊಳ್ಳಲು ಸಾಧ್ಯವಿಲ್ಲ ಎಂದು ಗೌಡರಿಗೆ ಮಾಹಿತಿ ನೀಡಲಾಗಿತ್ತು.
ಆದರೆ ಇದಕ್ಕೆ ಪ್ರತಿಕ್ರಿಯೆ ನೀಡಿರುವ ಮಾಜಿ ಪ್ರಧಾನಿ, ಗಣಿಗಾರಿಕಾ ಸಚಿವರು ಅಸೌಖ್ಯಕ್ಕೊಳಗಾಗಿದ್ದರೆ ಅವರ ಪರವಾಗಿ ಸಂಸದೀಯ ವ್ಯವಹಾರಗಳ ಸಚಿವರು ಉತ್ತರಿಸಲಿ ಎಂದು ಸಲಹೆ ನೀಡಿದ್ದಾರೆ.
ಕರ್ನಾಟಕ ಪ್ರವಾಸೋದ್ಯಮ ಸಚಿವ ಬಿ. ಜನಾರ್ದನ ರೆಡ್ಡಿ ಮತ್ತು ಕಂದಾಯ ಸಚಿವ ಜಿ. ಕರುಣಾಕರ ರೆಡ್ಡಿಯವರ ಮಾಲಕತ್ವದ ಬಳ್ಳಾರಿ ಓಬಳಾಪುರಂ ಗಣಿಗಾರಿಕೆಯು ಅಕ್ರಮ ಎಂದು ಹೇಳಲಾಗುತ್ತಿದ್ದು, ಈ ಕುರಿತ ಪ್ರಕರಣ ಪ್ರಸಕ್ತ ನ್ಯಾಯಾಲಯದಲ್ಲಿದೆ.
ಕೆಲವೇ ದಿನಗಳ ಹಿಂದಷ್ಟೇ ಈ ಸಂಬಂಧ ಗೌಡರು ಕೇಂದ್ರ ವಿತ್ತ ಸಚಿವ ಪ್ರಣಬ್ ಮುಖರ್ಜಿಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಈ ಸಂದರ್ಭದಲ್ಲಿ ಬಳ್ಳಾರಿ ಗಣಿಧಣಿಗಳ ಅಕ್ರಮ ಆದಾಯದ ಕುರಿತು ಆದಾಯ ತೆರಿಗೆ ಇಲಾಖೆಯಿಂದ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದ್ದರು.
ಬಳಿಕ ಅಕ್ರಮ ಗಣಿಗಾರಿಕೆ ಕುರಿತು ಲೋಕಸಭೆಯಲ್ಲಿ ಚರ್ಚೆ ನಡೆಸಬೇಕೆಂದು ಟಿಡಿಪಿ ಸಂಸದರ ಜತೆ ಲೋಕಸಭಾ ಸ್ಪೀಕರ್ ಮೀರಾ ಕುಮಾರ್ ಅವರಿಗೆ ಮನವಿ ಸಲ್ಲಿಸಿದ್ದರು.