ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಗ್ಯಾಸ್ ವಿವಾದ; ದರ ನಿಗದಿ ಹಕ್ಕು ಸರಕಾರದ್ದು: ಸುಪ್ರೀಂ (Anil Ambani | Mukhesh Ambani | KG gas row | Supreme court)
Bookmark and Share Feedback Print
 
ಅಂಬಾನಿ ಸಹೋದರರ ನಡುವಿನ ಅನಿಲ ವಿವಾದಕ್ಕೆ ಸಂಬಂಧಪಟ್ಟಂತೆ ಅಂತಿಮ ತೀರ್ಪು ನೀಡಿರುವ ಸರ್ವೋಚ್ಚ ನ್ಯಾಯಾಲಯವು, ಅನಿಲ ದರ ನಿಗದಪಡಿಸುವ ಸಂಪೂರ್ಣ ಹಕ್ಕನ್ನು ಕೇಂದ್ರ ಸರಕಾರ ಹೊಂದಿದೆ ಎಂದು ತಿಳಿಸಿದ್ದು, ಈ ಕುರಿತು ಹಿಂದೆ ನ್ಯಾಯಾಧೀಶ ಸದಾಶಿವಂ ಅವರು ನೀಡಿದ್ದ ತೀರ್ಪನ್ನು ಎತ್ತಿ ಹಿಡಿದಿದೆ.

ನೈಸರ್ಗಿಕ ಅನಿಲವು ಗ್ರಾಹಕರಿಗೆ ಹಸ್ತಾಂತರವಾಗುವವರೆಗೆ ಸರಕಾರವು ಅದರ ಮಾಲಕತ್ವವನ್ನು ಹೊಂದಿರುತ್ತದೆ ಎಂದು ಹೇಳುವ ಮೂಲಕ ನ್ಯಾಯಾಲಯವು ಪರೋಕ್ಷವಾಗಿ ಮುಖೇಶ್ ಅಂಬಾನಿಗೆ ಬೆಂಬಲ ಸೂಚಿಸಿದೆ.

ಕೃಷ್ಣ-ಗೋದಾವರಿ ಅನಿಲ ಸ್ಥಾವರದಿಂದ ನೈಸರ್ಗಿಕ ಮಾರಾಟ-ಹಂಚಿಕೆ ಕುರಿತು ಅಂಬಾನಿ ಕುಟುಂಬವು ಮಾಡಿಕೊಂಡಿರುವ ಒಪ್ಪಂದಕ್ಕೆ ಕಾನೂನಿನ ಮಾನ್ಯತೆಯಿಲ್ಲ. ಹಾಗಾಗಿ ಸಹೋದರರು ಮರು ಒಪ್ಪಂದ ಮಾಡಿಕೊಳ್ಳಬೇಕು ಎಂದು ಮುಖ್ಯ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ಸಲಹೆ ನೀಡಿದ್ದು, ವಿವಾದ ಪರಿಹಾರಕ್ಕೆ ಆರು ವಾರಗಳ ಗಡುವು ನೀಡಿದ್ದಾರೆ.

2005ರಲ್ಲಿ ನಡೆದಿದ್ದ ಕೌಟುಂಬಿಕ ಒಪ್ಪಂದದ ಪ್ರಕಾರ ಮುಖೇಶ್ ಅಂಬಾನಿ ನೇತೃತ್ವದ ರಿಲಯೆನ್ಸ್ ಇಂಡಸ್ಟ್ರೀಸ್ ಪ್ರತೀ ಎಂಎಂಬಿಟಿಯು ಅನಿಲವನ್ನು 2.34 ಅಮೆರಿಕನ್ ಡಾಲರ್ ಬೆಲೆಗೆ ಅನಿಲ್ ಅಂಬಾನಿ ನೇತೃತ್ವದ ಆರ್ಎನ್ಆರ್ಎಲ್‌ಗೆ ನೀಡಬೇಕಾಗಿತ್ತು. ಆದರೆ ರಿಲಯೆನ್ಸ್ ಇದಕ್ಕೆ ನಿರಾಕರಿಸಿದ್ದಲ್ಲದೆ, ಸರಕಾರದ ಅನುಮೋದನೆ ಅಗತ್ಯವಿದೆ ಎಂದು ಪಟ್ಟು ಹಿಡಿದಿತ್ತು. ಸರಕಾರವು 2007ರಲ್ಲಿ ರಿಲಯೆನ್ಸ್‌ನ ಕೃಷ್ಣಾ ಗೋದಾವರಿ ಡಿ6 ಸ್ಥಾವರದಿಂದ ಪ್ರತಿ ಎಂಎಂಬಿಟಿಯುಗೆ 4.20 ಡಾಲರ್ ವಿಧಿಸಲು ಒಪ್ಪಿಗೆ ನೀಡಿತ್ತು.

ಆದರೆ ಈ ಕುರಿತು ಅಸಮಾಧಾನಗೊಂಡ ಉಭಯ ಬಣಗಳು ಹೈಕೋರ್ಟ್ ಮೆಟ್ಟಿಲೇರಿದ್ದವು. ಬಳಿಕ ಪ್ರಕರಣವು ಸುಪ್ರೀಂ ಕೋರ್ಟ್‌ಗೆ ತಲುಪಿತ್ತು. ಸರಕಾರವು ಮುಖೇಶ್ ನೇತೃತ್ವದ ಸಂಸ್ಥೆಯನ್ನು ಬೆಂಬಲಿಸುತ್ತಿದೆ ಎನ್ನುವುದು ಅನಿಲ್ ಸಮೂಹ ಈ ಸಂದರ್ಭದಲ್ಲಿ ಆರೋಪಿಸಿತ್ತು.

ಕಳೆದ ವರ್ಷದ ಡಿಸೆಂಬರ್ 18ರಂದು ಪ್ರಕರಣದ ವಿಚಾರಣೆ ಮುಕ್ತಾಯಗೊಂಡಿತ್ತು.
ಸಂಬಂಧಿತ ಮಾಹಿತಿ ಹುಡುಕಿ