ಹಲವು ಸಮಯದಿಂದ ಅನುಮತಿಯಿಲ್ಲದೆ ಸೇವೆಗೆ ಗೈರು ಹಾಜರಾಗಿರುವ 1,058 ಸರಕಾರಿ ವೈದ್ಯರುಗಳನ್ನು ಮಾಯಾವತಿಯವರ ಉತ್ತರ ಪ್ರದೇಶ ಸರಕಾರವು ವಜಾ ಮಾಡಿ ಆದೇಶ ಹೊರಡಿಸಿದೆ.
ಮುಖ್ಯ ಆರೋಗ್ಯ ಕಾರ್ಯದರ್ಶಿ ಪ್ರದೀಪ್ ಶುಕ್ಲಾ ಅವರ ಪ್ರಕಾರ, ಈ ವೈದ್ಯರು ತಿಂಗಳುಗಳಿಂದ, ಕೆಲವರು ವರ್ಷಗಳಿಂದ ಸೇವೆಗೆ ಬಂದಿಲ್ಲ. ಅವರನ್ನು ಸೇವೆಗೆ ಮರಳುವಂತೆ ಸೂಚಿಸಿದರೂ, ನಮಗದು ಅಸಾಧ್ಯವಾದುದರಿಂದ ಈ ಕ್ರಮಕ್ಕೆ ಸರಕಾರ ಮುಂದಾಗಿದೆ ಎಂದು ತಿಳಿಸಿದ್ದಾರೆ.
ಬೇಜವಾಬ್ದಾರಿಯುತ ವೈದ್ಯರನ್ನು ಪತ್ತೆ ಹಚ್ಚುವ ಕಾರ್ಯಕ್ಕೆ ಮುಖ್ಯಮಂತ್ರಿ ಮಾಯಾವತಿ ನೇತೃತ್ವದ ಸರಕಾರವು ಒಂದು ವರ್ಷದ ಹಿಂದೆಯೇ ಚಾಲನೆ ನೀಡಿತ್ತು. ಅದರಂತೆ ತಪ್ಪೆಸಗಿದವರೆಂದು ಸಾಬೀತಾಗಿರುವ ಎಲ್ಲಾ ವೈದ್ಯರುಗಳಿಗೂ ವೈದ್ಯಕೀಯ ಮತ್ತು ಆರೋಗ್ಯ ಸೇವೆಯ ನಿರ್ದೇಶನಾಲಯವು ನೊಟೀಸ್ ಜಾರಿ ಮಾಡಿತ್ತು.
ಸರಕಾರ ಕಳುಹಿಸಿದ ನೊಟೀಸುಗಳಿಗೆ ವೈದ್ಯರಿಂದ ಯಾವುದೇ ಪ್ರತಿಕ್ರಿಯೆಗಳು ಬರದ ಹಿನ್ನೆಲೆಯಲ್ಲಿ ಹಲವು ದಿನಪತ್ರಿಕೆಗಳಲ್ಲೂ ವೈದ್ಯಕೀಯ ಮತ್ತು ಆರೋಗ್ಯ ಸೇವೆಗಳ ಪ್ರಧಾನ ನಿರ್ದೇಶಕರು ಜಾಹೀರಾತುಗಳ ರೂಪದಲ್ಲಿ ನೊಟೀಸ್ ಪ್ರಕಟಿಸಿದ್ದರು. ಆದರೂ ಯಾವುದೇ ಪ್ರತಿಕ್ರಿಯೆ ಲಭಿಸಲಿಲ್ಲ. ಹಾಗಾಗಿ ಅವರನ್ನು ಸೇವೆಯಿಂದ ವಜಾಗೊಳಿಸುವ ಅಂತಿಮ ನಿರ್ಧಾರಕ್ಕೆ ನಾವು ಬಂದಿದ್ದೇವೆ ಎಂದು ಶುಕ್ಲಾ ತಿಳಿಸಿದ್ದಾರೆ.
ಕೆಲವು ವೈದ್ಯರು ತಾವು ಸೇವೆಯಿಂದ ದೂರ ಉಳಿದುಕೊಂಡರೂ ತಮ್ಮ ವೇತನವನ್ನು ಪಡೆದುಕೊಂಡಿರುವ ಬಗ್ಗೆ ನಾವು ದಾಖಲೆಗಳಿಂದ ತಿಳಿದುಕೊಂಡಿದ್ದೇವೆ. ಇದರ ಬಗ್ಗೆ ಗಮನ ಹರಿಸಲಾಗುತ್ತದೆ. ಜತೆಗೆ ರಾಜ್ಯದ ಅವಶ್ಯಕತೆಯನ್ನು ಪೂರೈಸುವ ಸಲುವಾಗಿ 2,500 ಹೊಸ ವೈದ್ಯರ ನೇಮಕಾತಿ ಮಾಡಿಕೊಳ್ಳಲು ಸರಕಾರ ನಿರ್ಧರಿಸಿದೆ ಎಂದು ಅವರು ವಿವರಣೆ ನೀಡಿದ್ದಾರೆ.