ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಯಾದವರ ಬ್ಲ್ಯಾಕ್‌ಮೇಲ್‌ಗೆ ಮಹಿಳಾ ಮೀಸಲು ಮಸೂದೆ ಬಲಿ? (Women's Reservation Bill, UPA govt, India, Lok Sabha, Budget Session, Sonia Gandhi)
Bookmark and Share Feedback Print
 
ರಾಷ್ಟ್ರೀಯ ಜನತಾದಳ ವರಿಷ್ಠ ಲಾಲೂ ಪ್ರಸಾದ್ ಯಾದವ್ ಮತ್ತು ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ ಬ್ಲ್ಯಾಕ್‌ಮೇಲ್‌ಗೆ ಮಣಿದಿರುವ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಮಹಿಳಾ ಮೀಸಲಾತಿ ಮಸೂದೆಯನ್ನು ಬಜೆಟ್ ಅಧಿವೇಶನ ಸಂದರ್ಭದಲ್ಲಿ ಲೋಕಸಭೆಯಲ್ಲಿ ಮಂಡಿಸದೆ ಬಲಿ ನೀಡಿದೆ ಎಂದು ಆರೋಪಿಸಲಾಗುತ್ತಿದೆ.

ಸಮಾಜವಾದಿ ಮತ್ತು ಆರ್‌ಜೆಡಿ ಸದಸ್ಯರ ತೀವ್ರ ವಿರೋಧದ ನಡುವೆಯೂ ಬಿಜೆಪಿ ಮತ್ತು ಕಾಂಗ್ರೆಸ್ ಬೆಂಬಲದಿಂದ ರಾಜ್ಯಸಭೆಯಲ್ಲಿ ಐತಿಹಾಸಿಕ ಮಹಿಳಾ ಮೀಸಲಾತಿ ಮಸೂದೆಯು ಅಂಗೀಕಾರ ಪಡೆದುಕೊಂಡಿತ್ತು. ಆದರೆ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರವು ತನ್ನ ಹಿತಾಸಕ್ತಿಗಳ ರಕ್ಷಣೆಗೋಸ್ಕರ ಮಸೂದೆಯನ್ನು ಬಲಿ ನೀಡಿದೆ ಎಂದು ಪ್ರಮುಖ ಪ್ರತಿಪಕ್ಷ ಬಿಜೆಪಿ ಆರೋಪಿಸಿದೆ.

ನಾವು ಮಂಡಿಸಿದ ಹಣಕಾಸು ಮಸೂದೆ ವಿರುದ್ಧದ ಖಂಡನಾ ನಿರ್ಣಯಕ್ಕೆ ಪ್ರತಿಯಾಗಿ ಮಹಿಳಾ ಮೀಸಲಾತಿ ಮಸೂದೆಯನ್ನು ಬಲಿ ಕೊಡಲಾಗಿದೆ. ಆ ಮೂಲಕ ಕಾಂಗ್ರೆಸ್ ವಿರೋಧಿಗಳ ಬ್ಲ್ಯಾಕ್‌ಮೇಲ್‌ಗೆ ಮಣಿದಿದೆ ಎಂದು ಲೋಕಸಭೆ ಪ್ರತಿಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಆರೋಪಿಸಿದ್ದಾರೆ.

ಕಾಂಗ್ರೆಸ್ ಮಸೂದೆ ಮಂಡಿಸದಿರಲು ಕಾರಣವೇನು?
** ಬಿಜೆಪಿ ಮತ್ತು ಎಡಪಕ್ಷಗಳು ಸರಕಾರದ ವಿರುದ್ಧ ಹಣಕಾಸು ಮಸೂದೆಯ ಕುರಿತು ಮಂಡಿಸಿದ್ದ ಖಂಡನಾ ನಿರ್ಣಯದಲ್ಲಿ ಸರಕಾರದ ವಿರುದ್ಧ ಮತ ಚಲಾಯಿಸಲು ನಿರಾಕರಿಸಿದ್ದ ಆರ್‌ಜೆಡಿ ಮತ್ತು ಸಮಾಜವಾದಿ ಪಕ್ಷಗಳು, ಬಿಜೆಪಿಗೆ ಬೆಂಬಲ ನೀಡುವುದಿಲ್ಲ ಎಂದಿದ್ದವು. ಅದಕ್ಕೂ ಮೊದಲು ಈ ಮುಖಂಡರು ಕಾಂಗ್ರೆಸ್ ನಾಯಕರ ಜತೆ ಮಾತುಕತೆ ನಡೆಸಿದ್ದರು. ಈ ಸಂದರ್ಭದಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸುವುದಿಲ್ಲ ಎಂಬ ಭರವಸೆ ನೀಡಿದರೆ, ತಾವು ಖಂಡನಾ ನಿರ್ಣಯದಲ್ಲಿ ಸರಕಾರವನ್ನು ಬೆಂಬಲಿಸುತ್ತೇವೆ ಎಂದು ಯಾದವರು ಮಾತು ಕೊಟ್ಟಿದ್ದರು ಎಂದು ಹೇಳಲಾಗಿದೆ.

** ಶುಕ್ರವಾರ ಸರಕಾರವು ಮಂಡಿಸಿದ ನಾಗರಿಕ ಪರಮಾಣು ಬಾಧ್ಯತಾ ಮಸೂದೆಯಲ್ಲಿ ಲಾಲೂ ಮತ್ತು ಮುಲಾಯಂ ವಿರೋಧಿಸದೆ ಸುಮ್ಮನಿದ್ದರು. ಅತ್ತ ಸರಕಾರವು ಯಾದವರ ಬೇಡಿಕೆಯಾದ ಜಾತಿ ಜನಗಣತಿಗೆ ಒಪ್ಪಿಗೆ ಸೂಚಿಸಿತ್ತು. ಆದರೂ ಮಹಿಳಾ ಮೀಸಲಾತಿ ಮಸೂದೆ ಬಜೆಟ್ ಅಧಿವೇಶನ ಸಂದರ್ಭದಲ್ಲಿ ಮಂಡನೆಯಾಗಬಾರದು ಎನ್ನುವುದು ಯಾದವರ ಆಗ್ರಹವಾಗಿತ್ತು.

ಮಸೂದೆಯ ಗತಿ ಮುಂದೇನು?
1996ರಿಂದಲೂ ಮಹಿಳಾ ಮೀಸಲಾತಿ ಮಸೂದೆಯನ್ನು ನಿಯಂತ್ರಿಸುತ್ತಾ ಬಂದಿರುವ ಯಾದವರು, ಮತ್ತೆ ಈ ವಿಚಾರದಲ್ಲಿ ಡ್ರೈವರ್ ಸೀಟಿನಲ್ಲಿ ಕುಳಿತಿರುವುದು ಸ್ಪಷ್ಟವಾಗಿದೆ.

ಪ್ರಸಕ್ತ ಬಜೆಟ್ ಅಧಿವೇಶನ ನಿನ್ನೆ ಮುಕ್ತಾಯಗೊಂಡಿದೆ. ರಾಜ್ಯಸಭೆಯಲ್ಲಿ ಈಗಾಗಲೇ ಮಂಡನೆಯಾಗಿರುವ ಮೀಸಲಾತಿ ಮಸೂದೆಯು ಲೋಕಸಭೆಯಲ್ಲಿ ಮಂಡನೆಯಾಗುವುದನ್ನು ಸರಕಾರ ಮುಂದಕ್ಕೆ ಹಾಕಿದೆ. ಅಂದರೆ ಇನ್ನು ಮುಂದಿನ ಮಳೆಗಾಲದ ಅಧಿವೇಶನದಲ್ಲಿ ಇದರ ಕುರಿತು ಚಿಂತನೆ ನಡೆಸಲಿದೆ. ಅದಕ್ಕೂ ಮೊದಲು ಮತ್ತಷ್ಟು ಮಾತುಕತೆ ಅಗತ್ಯವಿದೆ ಎಂದು ಯುಪಿಎ ಹೇಳಿಕೊಂಡಿದೆ.

ಆದರೆ ರಾಜಕೀಯ ವಿಶ್ಲೇಷಕರ ಪ್ರಕಾರ ಮಳೆಗಾಲದ ಅಧಿವೇಶನ ಸಂದರ್ಭದಲ್ಲೂ ಪರಿಸ್ಥಿತಿ ಬದಲಾಗದು. ಆ ಸಂದರ್ಭದಲ್ಲಿ ಬರುವ ಇತರ ಹೊಸ ಮಸೂದೆಗಳ ಕುರಿತಾಗಿ ಸರಕಾರವನ್ನು ನಿಯಂತ್ರಿಸುವಲ್ಲಿ ಯಾದವರು ಯಶಸ್ವಿಯಾಗಬಹುದು. ಅಂದರೆ ಆಗಲೂ ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರ ಪಡೆದುಕೊಳ್ಳುವುದು ಸಂಶಯ.

ಮಹಿಳಾ ಮೀಸಲಾತಿ ಮಸೂದೆಯು ಲೋಕಸಭೆಯಲ್ಲಿ ಅಂಗೀಕಾರ ಪಡೆದುಕೊಂಡ ನಂತರ ಎಲ್ಲಾ ರಾಜ್ಯ ವಿಧಾನಸಭೆಗಳಿಗೆ ಕಳುಹಿಸಲ್ಪಡುತ್ತದೆ. ಆಗ ಒಟ್ಟು ರಾಜ್ಯಗಳ ಮೂರನೇ ಎರಡರಷ್ಟು ಬೆಂಬಲ ದೊರೆತಲ್ಲಿ ಮಸೂದೆ ಜಾರಿಗೆ ಬರಲು ಸಾಧ್ಯವಾಗುತ್ತದೆ. ಈ ಮಸೂದೆಯಿಂದಾಗಿ ವಿಧಾನಸಭೆ ಮತ್ತು ಲೋಕಸಭೆಗಳಲ್ಲಿ ಮಹಿಳೆಯರು ಶೇ.33ರ ಮೀಸಲಾತಿ ಪಡೆದುಕೊಳ್ಳುತ್ತಾರೆ.

ಪ್ರಸಕ್ತ ರಾಜಕೀಯ ಸ್ಥಿತಿಯನ್ನು ಗಮನಿಸಿದಾಗ ಮಸೂದೆ ಮತ್ತೆ ಮೂಲೆ ಸೇರುತ್ತಿದೆ ಎಂಬ ಶಂಕೆ ನಿಮ್ಮಲ್ಲೂ ಇದೆಯೇ?
ಸಂಬಂಧಿತ ಮಾಹಿತಿ ಹುಡುಕಿ