ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಜೆಡಿಎಸ್ ದ್ರೋಹ; ಜಾರ್ಖಂಡ್ 'ಗಾದಿ' ಸೂತ್ರಕ್ಕೆ ಬಿಜೆಪಿ ನಕಾರ (JMM | Jharkhand | Shibu Soren | BJP)
Bookmark and Share Feedback Print
 
ಮುಖ್ಯಮಂತ್ರಿ ಗಾದಿ ಹಂಚಿಕೆ ಸೂತ್ರವನ್ನು ಮುಂದಿಟ್ಟಿರುವ ಜಾರ್ಖಂಡ್ ಮುಕ್ತಿ ಮೋರ್ಛಾ ಪ್ರಸ್ತಾಪವನ್ನು ಬಿಜೆಪಿ ಒಪ್ಪಿಕೊಳ್ಳಲು ನಿರಾಕರಿಸಿದ್ದು, ತನಗೆ ಕರ್ನಾಟಕದಲ್ಲಿ ಜೆಡಿಎಸ್ ಮಾಡಿದ ದ್ರೋಹವನ್ನು ತಾನಿನ್ನೂ ಮರೆತಿಲ್ಲ ಎಂದು ಹೇಳುವ ಮೂಲಕ ಜಾರ್ಖಂಡ್ ರಾಜಕೀಯ ಅಸ್ಥಿರತೆ ಮುಂದುವರಿದಿದೆ.

ಪ್ರಸಕ್ತ ಜಾರ್ಖಂಡ್ ಮುಕ್ತಿ ಮೋರ್ಛಾ (ಜೆಎಂಎಂ) ನೇತೃತ್ವದ ಶಿಬು ಸೊರೆನ್ ಸರಕಾರಕ್ಕೆ ಬಿಜೆಪಿ ಬೆಂಬಲ ನೀಡುತ್ತಿದೆ. ಆದರೆ ಇತ್ತೀಚೆಗಷ್ಟೇ ಬಿಜೆಪಿ ಲೋಕಸಭೆಯಲ್ಲಿ ಮಂಡಿಸಿದ್ದ ಖಂಡನಾ ನಿರ್ಣಯ ವಿರುದ್ಧ ಮತ ಚಲಾಯಿಸಿದ್ದ ಸೊರೆನ್ ವಿರುದ್ಧ ಬಿಜೆಪಿ ಪ್ರಹಾರ ನಡೆಸಲು ಮುಂದಾಗಿದ್ದು, ಬೆಂಬಲ ಹಿಂತೆಗೆದುಕೊಳ್ಳುವ ಬೆದರಿಕೆ ಹಾಕಿತ್ತು. ಆ ನಂತರ ಎರಡೂ ಪಕ್ಷಗಳ ನಡುವೆ ಸಂಧಾನಗಳು ನಡೆಯುತ್ತಿವೆ.

ಈ ನಡುವೆ ಮುಖ್ಯಮಂತ್ರಿ ಗಾದಿಯನ್ನು ಎರಡೂ ಪಕ್ಷಗಳು 28 ತಿಂಗಳುಗಳ ಕಾಲ ಹೊಂದುವ ಸೂತ್ರವನ್ನು ಜೆಎಂಎಂ ಮುಂದಿಟ್ಟಿದೆ. ಸೊರೆನ್ ಸರಕಾರಕ್ಕೆ ಇನ್ನೂ ನಾಲ್ಕೂವರೆ ವರ್ಷಗಳ ಅಧಿಕಾರಾವಧಿಯಿದೆ.

ಆದರೆ ಬಿಜೆಪಿ ವಲಯದಲ್ಲಿ ಜೆಎಂಎಂ ಸೂತ್ರಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ. ಇದನ್ನು ಒಪ್ಪಿಕೊಳ್ಳುವುದು ಕಷ್ಟ ಎಂಬ ಅಭಿಪ್ರಾಯವೂ ಕೇಳಿ ಬರುತ್ತಿದೆ.

ಇದೇ ಸೂತ್ರದಂತೆ ನಾವು ಉತ್ತರ ಪ್ರದೇಶದಲ್ಲಿ ಬಿಎಸ್‌ಪಿಗೆ ಬೆಂಬಲ ನೀಡಿ ಮಾಯಾವತಿಯವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದ ನಂತರ ನಮಗೆ ಮೋಸ ಮಾಡಲಾಯಿತು. ನಂತರ ಕರ್ನಾಟಕದಲ್ಲಿ ಜೆಡಿಎಸ್‌ನ ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾದ ನಂತರ ಬಿ.ಎಸ್. ಯಡಿಯೂರಪ್ಪನವರನ್ನು ಮುಖ್ಯಮಂತ್ರಿಯಾಗಲು ಬಿಡದೆ ದ್ರೋಹ ಎಸಗಿದರು. ಇದನ್ನೆಲ್ಲ ನಾವು ಹೇಗೆ ಮರೆಯಲು ಸಾಧ್ಯ ಎಂದು ಬಿಜೆಪಿ ಸಂಸದರೊಬ್ಬರು ಪ್ರಶ್ನಿಸಿದ್ದಾರೆ.

ಮುಖ್ಯಮಂತ್ರಿ ಶಿಬು ಸೊರೆನ್ ಪುತ್ರ, ಜೆಎಂಎಂ ನಾಯಕ ಹೇಮಂತ್ ಸೊರೆನ್ ಜತೆ ಮಾತುಕತೆ ನಡೆಸಲು ಬಿಜೆಪಿಯು ಹಿರಿಯ ನಾಯಕರಾದ ರಾಜನಾಥ್ ಸಿಂಗ್ ಮತ್ತು ಅನಂತ್ ಕುಮಾರ್ ಅವರನ್ನು ನೇಮಕಗೊಳಿಸಿದೆ. ಈಗಾಗಲೇ ಹಲವು ಸುತ್ತಿನ ಮಾತುಕತೆಗಳು ನಡೆದಿದ್ದರೂ, ಯಾವುದೇ ಅಂತಿಮ ನಿರ್ಣಯವನ್ನು ಕೈಗೊಳ್ಳಲಾಗಿಲ್ಲ.
ಸಂಬಂಧಿತ ಮಾಹಿತಿ ಹುಡುಕಿ