ಕಳೆದ ಹದಿನೈದು ದಿನಗಳಿಂದ ಅತಂತ್ರ ಸ್ಥಿತಿಗೆ ತಲುಪಿದ್ದ ಜಾರ್ಖಂಡ್‌ನಲ್ಲಿ ಮಹತ್ವದ ರಾಜಕೀಯ ಬೆಳವಣಿಗೆಗಳು ನಡೆದಿದ್ದು, ಬಿಜೆಪಿ ನೇತೃತ್ವದ ಸರಕಾರಕ್ಕೆ ಪ್ರಸಕ್ತ ಮುಖ್ಯಮಂತ್ರಿ ಶಿಬು ಸೊರೆನ್ ಅವರ ಜಾರ್ಖಂಡ್ ಮುಕ್ತಿ ಮೋರ್ಛಾ ಬೆಂಬಲ ನೀಡಲು ನಿರ್ಧರಿಸಿದೆ.
ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ, ಜೆಎಂಎಂ ಮುಖಂಡ ಹೇಮಂತ್ ಸೊರೆನ್ ಮತ್ತು ಅಖಿಲ ಜಾರ್ಖಂಡ್ ವಿದ್ಯಾರ್ಥಿಗಳ ಒಕ್ಕೂಟ ಮುಖ್ಯಸ್ಥ ಸುದೇಶ್ ಮಹತೋ ನಡುವಿನ ಮಾತುಕತೆಯ ನಂತರ ಈ ಬೆಳವಣಿಗೆಗಳು ಕಂಡು ಬಂದಿವೆ.
ಮೂರು ಭಾಗೀದಾರರ ನಡುವಿನ ಮಾತುಕತೆಯ ನಂತರ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟದ (ಎನ್‌ಡಿಎ) ಸರಕಾರವನ್ನು ಜಾರ್ಖಂಡ್‌ನಲ್ಲಿ ರಚಿಸುವ ನಿರ್ಧಾರಕ್ಕೆ ಬರಲಾಗಿದೆ ಎಂದು ಸಭೆಯ ನಂತರ ಬಿಜೆಪಿ ನಾಯಕ ಅನಂತ್ ಕುಮಾರ್ ತಿಳಿಸಿದ್ದಾರೆ.
ಕಳೆದ ಒಂಬತ್ತು ವರ್ಷಗಳಲ್ಲಿ ಜಾರ್ಖಂಡ್‌ನಲ್ಲಿ ರಚನೆಯಾಗುತ್ತಿರುವ ಒಂಬತ್ತನೇ ಸರಕಾರ ಇದಾಗಲಿದ್ದು, ನೂತನ ಮುಖ್ಯಮಂತ್ರಿಯನ್ನು ಬಿಜೆಪಿ ಆಯ್ಕೆ ನಡೆಸಲಿದೆ. ಉಳಿದಿರುವ ನಾಲ್ಕೂವರೆ ವರ್ಷ ಜೆಎಂಎಂ ಬೆಂಬಲದೊಂದಿಗೆ ಬಿಜೆಪಿಯೇ ಆಡಳಿತ ಪಕ್ಷವಾಗಿ ಅಧಿಕಾರ ನಡೆಸಲಿದೆ.
ಏಪ್ರಿಲ್ 27ರಂದು ಸಂಸತ್ತಿನಲ್ಲಿ ಬಿಜೆಪಿ ಮಂಡಿಸಿದ್ದ ಖಂಡನಾ ನಿರ್ಣಯದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ಪರ ಜೆಎಂಎಂ ಮುಖಂಡ ಶಿಬು ಸೊರೆನ್ ಮತ ಚಲಾಯಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಬೆಂಬಲ ಹಿಂದಕ್ಕೆ ಪಡೆದುಕೊಳ್ಳುವ ಬೆದರಿಕೆ ಹಾಕಿದ ನಂತರ ಜಾರ್ಖಂಡ್‌ನಲ್ಲಿ ರಾಜಕೀಯ ಅಸ್ಥಿರತೆ ಉಂಟಾಗಿತ್ತು.
ಕಳೆದ ಆರು ತಿಂಗಳಿನಿಂದ ಮುಖ್ಯಮಂತ್ರಿಯಾಗಿರುವ ಶಿಬು ಸೊರೆನ್ ಇದೀಗ ರಾಜೀನಾಮೆ ನೀಡಲಿದ್ದು, ಸಂಸದರೂ ಆಗಿರುವ ಅವರು ತನ್ನ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ ಎಂದು ಹೇಳಲಾಗಿದೆ.
ಕಳೆದ ಒಂಬತ್ತು ವರ್ಷಗಳಿಂದ ನಮ್ಮ ರಾಜ್ಯವು ಸಮಸ್ಯೆಯಲ್ಲಿ ಸಿಲುಕಿದೆ. ಹಾಗಾಗಿ ನಾವು ನೂತನ ಸರಕಾರವನ್ನು ರಚಿಸಲು ನಿರ್ಧರಿಸಿದ್ದು, ಬಿಜೆಪಿಯ ಮುಖ್ಯಮಂತ್ರಿಯನ್ನು ಅವರೇ ನಿರ್ಧರಿಸಲಿದ್ದಾರೆ ಎಂದು ಸೊರೆನ್ ಪುತ್ರ ಹೇಮಂತ್ ಸೊರೆನ್ ತಿಳಿಸಿದ್ದಾರೆ.