ಬಾಬ್ರಿ ಮಸೀದಿ ಧ್ವಂಸಗೊಂಡ ಸರಿಸುಮಾರು ಎರಡು ದಶಕಗಳ ನಂತರ ಇದೀಗ ವಿಶ್ವ ಹಿಂದೂ ಪರಿಷತ್ ಹಿರಿಯ ನಾಯಕರು ಅಯೋಧ್ಯೆಯ ಶ್ರೀರಾಮ ಮಂದಿರ ಚಳುವಳಿಗೆ ಮತ್ತೆ ಚಾಲನೆ ನೀಡಲು ಯೋಜನೆ ರೂಪಿಸುವುದಕ್ಕಾಗಿ ಸಭೆ ಸೇರಲಿದ್ದಾರೆ.
ಜುಲೈ 12ರಿಂದ ಅಯೋಧ್ಯೆಯಲ್ಲಿ ವಿಶ್ವ ಹಿಂದೂ ಪರಿಷತ್ ಕೇಂದ್ರೀಯ ವ್ಯವಸ್ಥಾಪನಾ ಸಮಿತಿಯ ಸಭೆ ನಾಲ್ಕು ದಿನಗಳ ಕಾಲ ನಡೆಯಲಿದೆ ಎಂದು ಸಂಘಟನೆಯ ಮಾಧ್ಯಮ ವಕ್ತಾರ ಶರದ್ ಶರ್ಮಾ ತಿಳಿಸಿದ್ದಾರೆ.
1992ರ ಡಿಸೆಂಬರ್ 6ರ ನಂತರ ಅಯೋಧ್ಯೆಯಲ್ಲಿ ನಡೆಯಲಿರುವ ಮೊತ್ತ ಮೊದಲ ವಿಎಚ್‌ಪಿ ಕೇಂದ್ರೀಯ ಸಮಿತಿ ಸಭೆ ಇದಾಗಲಿದೆ.
WD
ಈ ಹಿಂದೆ ನಾವು 1992ರ ಡಿಸೆಂಬರ್‌ಗಿಂತ ಎರಡು ತಿಂಗಳ ಹಿಂದೆ ಜಾನಕಿ ಮಹಲ್ ಟ್ರಸ್ಟ್‌ನಲ್ಲಿ ಸಭೆ ನಡೆಸಿದ್ದೆವು ಎಂದು ಶರ್ಮಾ ತಿಳಿಸಿದ್ದಾರೆ.
ನಾಲ್ಕು ದಿನಗಳ ಕಾಲ ನಡೆಯಲಿರುವ ಈ ಪ್ರಮುಖ ಸಭೆಯಲ್ಲಿ ವಿಶ್ವ ಹಿಂದೂ ಪರಿಷತ್ ಅಂತಾರಾಷ್ಟ್ರೀಯ ಅಧ್ಯಕ್ಷ ಅಶೋಕ್ ಸಿಂಘಾಲ್ ಮತ್ತು ಪ್ರಧಾನ ಕಾರ್ಯದರ್ಶಿ ಪ್ರವೀಣ್ ತೊಗಾಡಿಯಾ ಸೇರಿದಂತೆ ಉನ್ನತ ನಾಯಕರು ಭಾಗವಹಿಸಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.
ಹರಿದ್ವಾರದಲ್ಲಿ ಒಟ್ಟು ಸೇರಿದ್ದ ಸಂತರ ನಿರ್ಧಾರಗಳ ಹಿನ್ನೆಲೆಯಲ್ಲಿ ಈ ಸಭೆ ನಡೆಯುತ್ತಿದೆ. ಈ ಮಾತುಕತೆ ಸಂದರ್ಭದಲ್ಲಿ ಮುಂದಿನ ಕ್ರಮಗಳ ಕುರಿತು ರೂಪುರೇಷೆಗಳನ್ನು ರೂಪಿಸಿ ನಂತರ ರಾಜ್ಯ ಘಟಕಗಳಿಗೆ ರವಾನಿಸಲಾಗುತ್ತದೆ ಎಂದು ವಿಎಚ್‌ಪಿ ತಿಳಿಸಿದೆ.
ಆಗಸ್ಟ್ 16ರಿಂದ ಧಾರ್ಮಿಕ ನಾಯಕರ ನೇತೃತ್ವದಲ್ಲಿ ರಾಷ್ಟ್ರವ್ಯಾಪಿ ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಲು ವಿಶ್ವ ಹಿಂದೂ ಪರಿಷತ್ ಉದ್ದೇಶಿಸಿದೆ.