ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮಾವೋವಾದಿಗಳ ಅಟ್ಟಹಾಸ: 7 ಸಿಆರ್‌ಪಿಎಫ್ ಯೋಧರ ಸಾವು (Naxal | CRPF | Bomb)
Bookmark and Share Feedback Print
 
ರಾಯಪುರ: ಮಾವೋವಾದಿಗಳು ಅಟ್ಟಹಾಸ ಮತ್ತೆ ಮುಂದುವರಿದಿದೆ. ಶನಿವಾರ ರಾತ್ರಿಯ ವೇಳೆಗೆ ಛತ್ತಿಸ್‌ಘಡದ ವಿಜಾಪುರ ಜಿಲ್ಲೆಯ ಪೆಡಕೊಡೆಪಲ್ ಪ್ರದೇಶದ ಸಮೀಪದಲ್ಲಿ ಮಾವೋವಾದಿಗಳು ನೆಲಬಾಂಬ್ ಸ್ಫೋಟಿಸಿದ್ದರ ಫಲವಾಗಿ ಕೇಂದ್ರ ಮೀಸಲು ಪಡೆಯ ಏಳು ಮಂದಿ ಮೃತಪಟ್ಟಿದ್ದು, 13 ಮಂದಿ ಗಾಯಗೊಂಡ ಘಟನೆ ನಡೆದಿದೆ.

ಸಿಆರ್‌ಪಿಎಫ್ ಸಿಬ್ಬಂದಿ ಗುಂಡು ನಿರೋಧಕ ವಾಹನದಲ್ಲಿ ಪ್ರಯಾಣಿಸುತ್ತಿದ್ದಾಗ ಈ ಘಟನೆ ನಡೆದಿದೆ. ಇದೇ ವೇಳೆ ಮಾವೋವಾದಿಗಳು ಗುಂಡಿನ ದಾಳಿಯನ್ನೂ ನಡೆಸಿದ್ದಾರೆ ಎಂದು ನಕ್ಸಲ್ ಕಾರ್ಯಾಚರಣೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ರಾಮ್ ನಿವಾಸ್ ತಿಳಿಸಿದ್ದಾರೆ.

ಘಟನೆಯಲ್ಲಿ ಮೃತಪಟ್ಟಿರುವವರನ್ನು ಸಂತೋಷ್ ಚೌರಾಸಿಯಾ, ಹೆಡ್‌ಕಾನ್ಸ್ಟೇಬಲ್‌ಗಳಾದ ಹಜಾರಿಲಾಲ್, ಎಚ್.ಸಿ.ಎಸ್.ಕೆ.ಘೋಷ್, ಎಂ.ಸುಬ್ರಮಣೀಯಂ, ಕಾನ್ಸ್ಟೇಬಲ್ ಟೇಕ್ರಾಂ ವರ್ಮಾ, ರಾಖೇಶ್ ಮೀನಾ ಹಾಗೂ ಸಂತೋಷ್ ಚವಾಣ್ ಎಂದು ಗುರುತಿಸಲಾಗಿದೆ.

ಇದೇ ಸಂದರ್ಭ, ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಯಾವುದೇ ರೀತಿಯ ವಾಹನಗಳಲ್ಲಿ ಪ್ರಯಾಣಿಸುವುದು ಬೇಡ ಎಂದು ಈ ಮೊದಲೇ ಸೂಚನೆ ನೀಡಿದ್ದರೂ, ಸಿಆರ್‌ಪಿಎಫ್ ಸಿಬ್ಬಂದಿ ಇದನ್ನು ನಿರ್ಲಕ್ಷಿಸಿದ ಕಾರಣ ಈ ದುರ್ಘಟನೆ ನಡೆದಿದೆ ಎಂದು ಗೃಹ ಸಚಿವ ನಾಂಕಿರಾಮ್ ಕನ್ವರ್ ತಿಳಿಸಿದ್ದಾರೆ.

ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಹಿಂದೆ ಕಳೆದ ಏ.6ರಂದು ದಾಂತೆವಾಡದ ಮುಕ್ರಾನಾ ಅರಣ್ಯ ಪ್ರದೇಶದಲ್ಲಿ ಮಾವೋವಾದಿಗಳು ದಾಳಿ ನಡೆಸಿ 76 ಸಿಆರ್‌ಪಿಎಫ್ ಯೋಧರನ್ನು ಬಲಿ ತೆಗೆದುಕೊಂಡಿದ್ದನ್ನು ಮಾವೋವಾದಿಗಳ ಅಟ್ಟಹಾಸಕ್ಕೊಂದು ಜ್ವಲಂತ ನಿದರ್ಶನವಾಗಿ ಇಲ್ಲಿ ಸ್ಮರಿಸಬಹುದು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಮಾವೋವಾದಿ, ಸಿಆರ್ಪಿಎಫ್, ನಕ್ಸಲ್