ಅಮ್ಮಂದಿರಲ್ಲಿ, ಮಕ್ಕಳಲ್ಲಿ 'ಅಮ್ಮನ ದಿನ'ದ ಸಂಭ್ರಮ ಭಾರತದೆಲ್ಲೆಡೆ ಮನೆ ಮಾಡಿದ್ದರೂ, ಭಾರತದ ಪರ ಶಾಕಿಂಗ್ ಸುದ್ದಿಯಿದೆ! ಹೌದು, ಭಾರತ ಅಮ್ಮಂದಿರಿಗೆ ಪ್ರಶಸ್ತ ಸ್ಥಳವೇ ಅಲ್ಲ ಎಂಬಂಥ ಸುದ್ದಿಯೊಂದು ಇದೀಗ ಹೊರಬಿದ್ದಿದೆ. ಅಮ್ಮನ ದಿನ ಪ್ರಯುಕ್ತ ನಡೆಸಿದ ಸಮೀಕ್ಷೆಯೊಂದರಲ್ಲಿ ಭಾರತ ಅಮ್ಮಂದಿರಿಗಾಗಿ ಸೂಕ್ತ ಸ್ಥಳವೇ ಅಲ್ಲ ಎಂಬಂಥ ವರದಿಯನ್ನು ಹೊರಹಾಕಿದೆ.
ಅಮ್ಮಂದಿರಿಗಿರುವ ಅತ್ಯುತ್ತಮ ದೇಶವೆಂಬ ಹೆಸರಿನಲ್ಲಿ 'ಸೇವ್ ದಿ ಚಿಲ್ಡ್ರನ್' ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ 77 ದೇಶಗಳನ್ನು ಆಯ್ಕೆ ಮಾಡಲಾಗಿತ್ತು. ಬೇಸರದ ಸಂಗತಿಯೆಂದರೆ, ಆ 77 ದೇಶಗಳ ಪೈಕಿ ಭಾರತ 73ನೇ ಸ್ಥಾನ ಪಡೆದಿದೆ. ಹಾಗಾಗಿ ಭಾರತ ಅಮ್ಮಂದಿರಿಗಾಗಿ ಇರುವ ಅತ್ಯಂತ ಕೆಟ್ಟ ಸ್ಥಳವಾಗಿ ಐದನೇ ಸ್ಥಾನ ಪಡೆದಿದೆ. ಈ ಸಮೀಕ್ಷೆಯನ್ನು ಅಮ್ಮಂದಿರ ಆರೋಗ್ಯದ ಆಧಾರದಲ್ಲಿ ನಡೆಸಲಾಗಿದೆ.
ಇಷ್ಟೇ ಅಲ್ಲದೆ, ಅತ್ಯಂತ ಆಘಾತಕಾರಿ ವಿಚಾರವೆಂದರೆ ಆಪ್ರಿಕಾದ ದೇಶಗಳಾದ ಕೀನ್ಯಾ, ಕಾಂಗೋಗಳಂತಹ ದೇಶಗಳೂ ಕೂಡಾ ಭಾರತಕ್ಕಿಂತ ಮುಂದಿವೆ! ಅಮ್ಮಂದಿರ ಪ್ರಶಸ್ತ ಸ್ಥಳವಾಗಿ ಮೊದಲ ಸ್ಥಾನದಲ್ಲಿ ಕ್ಯೂಬಾ ದೇಶವಿದ್ದರೆ, ಎರಡನೇ ಹಾಗೂ ಮೂರನೇ ಸ್ಥಾನದಲ್ಲಿ ಕ್ರಮವಾಗಿ ಇಸ್ರೇಲ್, ಅರ್ಜೆಂಟೈನಾ ದೇಶಗಳು ಆಯ್ಕೆಯಾಗಿವೆ. ನಂತರದ ಸ್ಥಾನಗಳಲ್ಲಿ ಬಾರ್ಬಡೋಸ್, ಸೌತ್ ಕೊರಿಯಾ, ಸಿಪ್ರಸ್, ಉರುಗ್ವೆ, ಕಝಕಿಸ್ತಾನ್, ಬಹಾಮಾ, ಮಂಗೋಲಿಯಾ ದೇಶಗಳು ಸ್ಥಾನ ಪಡೆದಿವೆ.
ನಮ್ಮ ನೆರೆಯ ದೇಶಗಳ ಪೈಕಿ ಚೀನಾ 18ನೇ ಸ್ಥಾನದಲ್ಲಿದ್ದರೆ, ಶ್ರೀಲಂಕಾ 40ನೇ ಸ್ಥಾನಕ್ಕೆ ತೃಪ್ತಿಪಟ್ಟಿದೆ. ಇನ್ನು ಪಾಕಿಸ್ತಾನ ಭಾರತಕ್ಕಿಂತಲೂ ಹಿಂದಿದ್ದು 75ನೇ ಸ್ಥಾನದಲ್ಲಿದೆ. ಅತ್ಯಂತ ಹಿಂದುಳಿದ ದೇಶಗಳ ಪಟ್ಟಿಯಲ್ಲಿದ್ದರೂ ನಮ್ಮ ನೆರೆಯ ಬಾಂಗ್ಲಾದೇಶ ಈ ಸಮೀಕ್ಷೆಯಲ್ಲಿ 14ನೇ ಸ್ಥಾನ ಪಡೆದಿದೆ.