ಪುಣೆಯ ಜರ್ಮನ್ ಬೇಕರಿ ಸ್ಫೋಟ ಪ್ರಕರಣದಲ್ಲಿ ಇದೀಗ ಇಂಡಿಯನ್ ಮುಜಾಹಿದ್ದೀನ್ ಕೈವಾಡ ಇದೆ ಎಂಬ ಆತಂಕಕಾರಿ ಸತ್ಯ ಬೆಳಕಿಗೆ ಬಂದಿದೆ.
ಜರ್ಮನ್ ಬೇಕರಿ ಸ್ಫೋಟದ ಸಂಬಂಧ ಶಂಕಿತ ಸಲ್ಮಾನ್ ಎಂಬಾತನನ್ನು ಬಂಧಿಸಲಾಗಿದ್ದು, ಈತನ ವಿಚಾರಮೆಯ ಸಂದರ್ಭ ಇಂತಹ ಆತಂಕಕಾರಿ ಮಾಹಿತಿಗಳು ಹೊರಬಿದ್ದಿವೆ. ಮಹಾರಾಷ್ಟ್ರ ಭಯೋತ್ಪಾದಕ ನಿಗ್ರಹ ದಳ ಹಾಗೂ ದೆಹಲಿ ಪೊಲೀಸರ ಬಳಿ ಸಲ್ಮಾನ್ ತಪ್ಪೊಪ್ಪಿಕೊಂಡಿದ್ದು ಈ ಮಾಹಿತಿಗಳನ್ನು ಬಹಿರಂಗ ಪಡಿಸಿದ್ದಾನೆ ಎನ್ನಲಾಗಿದೆ.
ಮಹತ್ವದ ಟೆಲಿಫೋನ್ ಸಂಭಾಷಣೆ: ತನಿಖೆಯ ಸಂದರ್ಭದಲ್ಲಿ ಸಲ್ಮಾನ್, ಜನವರಿ ತಿಂಗಳಲ್ಲಿ ಆತ ನೇಪಾಳಕ್ಕೆ ಪ್ರಯಾಣಿಸಿದ್ದು ಬೇನಾಮಿ ಹೆಸರಿನಲ್ಲಿ ಅಲ್ಲಿ ಕೆಲಕಾಲ ತಂಗಿದ್ದ. ಅಲ್ಲದೆ ಆತ ಇಂಡಿಯನ್ ಮುಜಾಹಿದ್ದೀನ್ ಸಂಸ್ಥಾಪಕರಾದ ಅಮೀರ್ ರಾಜಾ ಹಾಗೂ ರಿಯಾಝ್ ಭಟ್ಕಳ್ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದ ಎಂಬ ಆತಂಕಕಾರಿ ಮಾಹಿತಿಗಳನ್ನು ಹೊರಹಾಕಿದ್ದಾನೆ. ಆತ ನೀಡಿದ ಮಾಹಿತಿಗಳ ಪ್ರಕಾರ, ಸ್ಫೋಟ ಸಂಭವಿಸಿದ ದಿನವೂ ಆತನಿಗೆ ರಿಯಾಝ್‌ನಿಂದ ಕರೆ ಬಂದಿತ್ತು.
ಟೆಲಿಫೋನ್ ಸಂಭಾಷಣೆಯ ಪ್ರಕಾರ, ಪುಣೆಯಲ್ಲಿ ಸ್ಫೋಟ ನಡೆಯುತ್ತಿರುವ ಸಂದರ್ಭ ರಿಯಾಝ್‌ನಿಂದ ಸಲ್ಮಾನ್ ಮೊಬೈಲಿಗೆ ಕರೆ ಬಂದಿದೆ. ಕರೆಯಲ್ಲಿ 'ಬದಾಯಿ ಹೋ' ಎಂದು ರಿಯಾಝ್ ಸಲ್ಮಾನ್‌ಗೆ ವಿಶ್ ಮಾಡಿದ್ದಾನೆ. 'ಯಾಕೆ' ಎಂದು ಸಲ್ಮಾನ್ ಪ್ರಶ್ನಿಸಿದಾಗ ರಿಯಾಝ್, 'ಟಿವಿ ಆನ್ ಮಾಡು, ಬ್ರೇಕಿಂಗ್ ನ್ಯೂಸ್ ಬರ್ತಿದೆ' ಎಂದಷ್ಟೆ ಹೇಳಿದ್ದಾನೆ. ಆಗ ಟಿವಿ ಆನ್ ಮಾಡಿ ನೋಡಿದ ಸಲ್ಮಾನ್‌ಗೆ ಕಾಣಿಸಿದ್ದು ಮುಣೆ ಸ್ಫೋಟದ ಬ್ರೇಕಿಂಗ್ ಸುದ್ದಿ!
ಇತ್ತೀಚೆಗಷ್ಟು ಗೃಹ ಸಚಿವ ಪಿ.ಚಿದಂಬರಂ, ಪುಣೆಯ ಸ್ಫೋಟದ ಹಿಂದಿನ ಗುಟ್ಟು ಬಯಲಾಗಿದೆ. ಸದ್ಯದಲ್ಲೇ ಇದರ ಬಗ್ಗೆ ಮಾಹಿತಿಗಳು ಹೊರಬರಲಿವೆ ಎಂದು ಹೇಳಿದ್ದರು.
ಸಲ್ಮಾನ್ ಬಗ್ಗೆ ಮಾಹಿತಿ ನೀಡಿದ ಪೊಲೀಸರು 1992ರಲ್ಲಿ ಜನಿಸಿರುವ ಸಲ್ಮಾನ್, ಮುಂಬೈನ ಬಾಂದ್ರಾದ ನಿವಾಸಿಯಾಗಿದ್ದಾನೆ. ಈತ ತನ್ನ ಅಣ್ಣನ ಕುಕೃತ್ಯಗಳಿಗೆ ಸಾಥ್ ನೀಡುತ್ತಿದ್ದ ಈತನ ಅಣ್ಣ ಶಹನ್ವಾಝ್ ಹಾಗೂ ಆತಿಫ್ ಅಮೀನ್ 2008ರಲ್ಲಿ ಪೊಲೀಸ್ ಎನ್‌ಕೌಂಟರ್‌ನಲ್ಲಿ ಹತರಾಗಿದ್ದರು. ಸಲ್ಮಾನ್ ಗೋರಕ್‌ಪುರದಲ್ಲಿ 2007ರ ಮೇ 22ರಂದು ನಡೆದ ಸರಣಿ ಸ್ಫೋಟ, ವಾರಣಾಸಿ ಸಿವಿಲ್ ಕೋರ್ಟ್‌ನಲ್ಲಿ 2007ರ ನವೆಂಬರ್ 23ರಂದು ನಡೆದ ಸ್ಫೋಟಗಳು, ಜೈಪುರದಲ್ಲಿ 2008ರ ಮೇ. 13ರಂದು ನಡೆದ ಸ್ಫೋಟಗಳಲ್ಲಿ ಭಾಗಿಯಾಗಿದ್ದಾನೆಂದು ಶಂಕಿಸಲಾಗಿದೆ.
ಸಲ್ಮಾನ್ ನೇಪಾಳದ ನಕಲಿ ಪಾಸ್‌ಪೋರ್ಟನ್ನೂ ಹೊಂದಿದ್ದು, ಇದನ್ನು 2009ರ ಜೂ.23ರಂದು ಪಡೆಯಲಾಗಿದೆ. ಆ ಪಾಸ್‌ಪೋರ್ಟಿನಲ್ಲಿ ಮೊಹಮ್ಮದ್ ಫಹಾದ್ ಅನ್ಸಾರಿ ಎಂಬ ಬೇನಾಮಿ ಹೆಸರಿದೆ.