ಶಾಲಾ ಬಾಲಕರ ಗುಂಪಿನ ನಡುವೆ ಹುಟ್ಟಿಕೊಂಡಿದ್ದ ದ್ವೇಷಕ್ಕೆ ತನ್ನದೇ ಓರಗೆಯ 15ರ ಹರೆಯದ ಸ್ನೇಹಿತನನ್ನು ಮೂವರು ಹದಿಹರೆಯದವರು ಸೇರಿಕೊಂಡು ಮರಕ್ಕೆ ಕಟ್ಟಿ ಹಾಕಿ ಕ್ರೂರ ರೀತಿಯಲ್ಲಿ ಶಿರಚ್ಛೇದ ಮಾಡಿರುವ ಹೇಯ ಪ್ರಸಂಗ ಮಹಾರಾಷ್ಟ್ರದಲ್ಲಿ ನಡೆದಿದ್ದು, ಸಾರ್ವಜನಿಕರು ಭಾರೀ ಆಘಾತ ವ್ಯಕ್ತಪಡಿಸಿದ್ದಾರೆ.
ಇದು ನಡೆದಿರುವುದು ಪುಣೆಯ ನಾಯ್ಕ್ ಐಸ್ಲೆಂಡ್ ಎಂಬ ಪ್ರದೇಶದಲ್ಲಿ. ತನ್ನ ಗೆಳೆಯರಿಂದಲೇ ಹತ್ಯೆಗೊಳಗಾಗಿರುವ ವಿದ್ಯಾರ್ಥಿಯನ್ನು ಎಂಟನೇ ತರಗತಿಯಲ್ಲಿ ಓದುತ್ತಿದ್ದ ಅಭಿಷೇಕ್ ಯಾನೆ ಗೌರವ್ ಸುರೇಶ್ ಘೋರ್ಪಡೆ ಎಂದು ಗುರುತಿಸಲಾಗಿದೆ.
ಇಲ್ಲಿನ ರಾಸ್ತಾ ಪೇಠ್ ಶಾಲೆಯಲ್ಲಿ ಓದುತ್ತಿದ್ದ ಘೋರ್ಪಡೆಯ ಸಹಪಾಠಿಗಳೇ ಈ ಕೃತ್ಯವನ್ನೆಸಗಿದ್ದು, ಓರ್ವನನ್ನು ಆಶಿಶ್ ಮಾಪರೆ (18) ಎಂದು ಗುರುತಿಸಲಾಗಿದೆ. ಮತ್ತಿಬ್ಬರು ಆರೋಪಿಗಳು ಅಪ್ರಾಪ್ತರು ಎಂದು ಹೇಳಲಾಗಿದ್ದು, ಅವರ ಹೆಸರುಗಳು ತಿಳಿದು ಬಂದಿಲ್ಲ. ಈ ಪ್ರಮುಖ ಆರೋಪಿ ಮಾಪರೆ ಎಂಬಾತನನ್ನು ಶಾಲೆಯಿಂದ ಈ ಹಿಂದೆ ಅಮಾನತುಗೊಳಿಸಲಾಗಿತ್ತು.
ಆರಂಭದಲ್ಲಿ ಘೋರ್ಪಡೆ ಕುಟುಂಬವು ಶವಸಂಸ್ಕಾರಕ್ಕೆ ನಿರಾಕರಿಸಿತ್ತು. ಪುತ್ರನ ತಲೆ ಸಿಗದೆ ನಾವು ಅದು ಆತನ ದೇಹ ಎಂದು ಸ್ವೀಕರಿಸುವುದಿಲ್ಲ ಎಂದಿದ್ದರು. ಶಿರಕ್ಕಾಗಿ ನಡೆಸಿದ ಹುಡುಕಾಟ ವಿಫಲವಾದಾಗ ಒತ್ತಾಯಕ್ಕೆ ಮಣಿದ ಕುಟುಂಬವು ಘೋರ್ಪಡೆ ಶವಸಂಸ್ಕಾರ ನಡೆಸಿದೆ.
ಮರಕ್ಕೆ ಕಟ್ಟಿ ಹಾಕಿದ್ದರು... ಘೋರ್ಪಡೆಯನ್ನು ನಾಯ್ಕ್ ಐಸ್ಲೆಂಡ್ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋದ ಮಾಪರೆ ಮತ್ತು ಇತರ ಇಬ್ಬರು ವಿದ್ಯಾರ್ಥಿಗಳು, ಮೊದಲು ಆತನ ಕೈ ಮತ್ತು ಕಾಲುಗಳನ್ನು ಮರಕ್ಕೆ ಕಟ್ಟಿ ಹಾಕಿದ್ದರು.
ಬಳಿಕ ಘೋರ್ಪಡೆಯ ಬಾಯಿಗೆ ಪ್ಲಾಸ್ಟಿಕ್ ಪೈಪೊಂದನ್ನು ತುರುಕಿಸಿದ ಆರೋಪಿಗಳು, ಜೀವಂತವಾಗಿರುವಾಗಲೇ ಹರಿತವಾದ ಕತ್ತಿಯಿಂದ ಆರು ಬಾರಿ ಕಡಿದು ದೇಹದಿಂದ ತಲೆಯನ್ನು ಬೇರ್ಪಡಿಸಿದ್ದರು. ಬಾಲಕನ ತಲೆಯನ್ನು ಪಕ್ಕದ ನದಿಗೆ ಎಸೆದ ಆರೋಪಿಗಳು ನಂತರ ಅಲ್ಲಿಂದ ಪರಾರಿಯಾಗಿದ್ದರು.
ಘೋರ್ಪಡೆಯನ್ನು ಹತ್ಯೆಗೈದ ನಂತರ ಮಾಪರೆ ತನ್ನ ಮನೆಗೆ ಹೋಗಿ ಬಟ್ಟೆ ಬದಲಾಯಿಸಿದ್ದ. ಅಧಿಕೃತ ಮಾಹಿತಿಗಳ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬರ್ಬರ ಕೃತ್ಯ, ಆದ್ರೆ ವಿಷಾದವಿಲ್ಲ... ಹೀಗೆಂದು ಹೇಳಿರುವುದು ಸ್ವತಃ ಮಾಪರೆ. ನಾನು ಕೇವಲ ಐದೇ ನಿಮಿಷದಲ್ಲಿ ಆತನ ತಲೆಯನ್ನು ಕತ್ತರಿಸಿ ಹಾಕಿದ್ದೆ. ನಾನು ಎಸಗಿರುವುದು ಘೋರ ಕೃತ್ಯ. ಆದರೆ ಇದಕ್ಕಾಗಿ ವಿಷಾದವಿಲ್ಲ. ಪ್ರತೀಕಾರಕ್ಕಾಗಿ ನಾನು ಆತನನ್ನು ಕೊಲ್ಲಬೇಕಾಯಿತು ಎಂದು ಹೇಳಿಕೊಂಡಿದ್ದಾನೆ.
ನಾವು ಮೊದಲು ಘೋರ್ಪಡೆಯನ್ನು ಮರಕ್ಕೆ ಕಟ್ಟಿ ಹಾಕಿದೆವು. ನಂತರ ನಾನು ಕತ್ತಿಯಿಂದ ಕೃತ್ಯ ಎಸಗಿ, ಆತನ ತಲೆಯನ್ನು ಪಕ್ಕದ ನದಿಗೆ ಎಸೆದೆ. ಈ ಬಗ್ಗೆ ಎಲ್ಲಾ ವಿವರಗಳನ್ನು ನಾನು ಪೊಲೀಸರಿಗೆ ನೀಡಿದ್ದೇನೆ ಎಂದು ಮಾಪರೆ ತಿಳಿಸಿದ್ದಾನೆ.
ಹಳೆ ಪ್ರಕರಣದ ಹಿನ್ನೆಲೆ... ಮೂಲಗಳ ಪ್ರಕಾರ ಮಾಪರೆ ಎಂಬ ಈ ಶಾಲೆಯ ಹಳೆ ವಿದ್ಯಾರ್ಥಿ ಕಳೆದ ವರ್ಷ ಶಾಲೆಯ ಹುಡುಗರ ಮತ್ತೊಂದು ಗುಂಪಿನ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿತ್ತು. ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿತ್ತು.
ಈ ಬಗ್ಗೆ ಮಾಹಿತಿಯಿದ್ದ ಘೋರ್ಪಡೆ ಪೊಲೀಸರಿಗೆ ಮಾಹಿತಿ ನೀಡಿ, ಪ್ರಕರಣದಲ್ಲಿ ಪಾಲ್ಗೊಂಡಿದ್ದವರ ಹೆಸರುಗಳನ್ನು ಬಹಿರಂಗಪಡಿಸಿದ್ದಾನೆ ಎಂದು ಸಂಶಯಗೊಂಡ ಮಾಪರೆ ಗುಂಪು ಈ ಕೃತ್ಯವನ್ನೆಸಗಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.