ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕಾಂಗ್ರೆಸ್-ಮಮತಾ ಮುನಿಸು; ಕೇಂದ್ರಕ್ಕೆ ಮುಲಾಯಂ ಗಾಳ? (Mulayam Singh | Mamata Banerjee | Trinamool Congress | UPA govt)
Bookmark and Share Feedback Print
 
ಒಂದಲ್ಲ ಒಂದು ವಿಚಾರವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರಕ್ಕೆ ನುಂಗಲಾರದ ತುತ್ತಾಗುತ್ತಿರುವ ತೃಣಮೂಲ ಕಾಂಗ್ರೆಸ್ಸನ್ನು ಕೈ ಬಿಡಲು ಕೇಂದ್ರವೇನಾದರೂ ಆಡಳಿತ ಮೈತ್ರಿಕೂಟದಿಂದ ಮನಸ್ಸು ಮಾಡಿದಲ್ಲಿ, ಸರಕಾರಕ್ಕೆ ತಾನು ಬೆಂಬಲ ನೀಡಲು ಸಿದ್ಧ ಎಂದು ಸಮಾಜವಾದಿ ಪಕ್ಷ ಹೇಳಿಕೊಂಡಿದೆ. ಇದರ ಬೆನ್ನಿಗೆ ತೃಣಮೂಲ ವರಿಷ್ಠೆ ಮಮತಾ ಬ್ಯಾನರ್ಜಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.

ಕಾಂಗ್ರೆಸ್ ನೇತೃತ್ವದ ಸರಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗಿನಿಂದಲೂ ರೈಲ್ವೆ ಸಚಿವೆ ಬ್ಯಾನರ್ಜಿ ಹತ್ತು ಹಲವು ತಕರಾರುಗಳನ್ನು ತೆಗೆಯುತ್ತಾ ಬಂದಿದ್ದಾರೆ. ಹಲವು ಬಾರಿ ಆಡಳಿತ ಪಕ್ಷದಲ್ಲಿದ್ದುಕೊಂಡೇ ವಿರೋಧ ಪಕ್ಷದಂತೆ ನಡೆದುಕೊಂಡಿದ್ದಾರೆ.

ಅವುಗಳಲ್ಲಿ ಪ್ರಮುಖವಾದುದು ಪೆಟ್ರೋಲಿಯಂ ಬೆಲೆಯೇರಿಕೆ ಬಗ್ಗೆ ಬಹಿರಂಗವಾಗಿ ವಿರೋಧ ವ್ಯಕ್ತಪಡಿಸಿರುವುದು. ಅದಕ್ಕಿಂತಲೂ ಮಗ್ಗುಲ ಮುಳ್ಳಾಗಿರುವುದು ಆಕೆ ಪಶ್ಚಿಮ ಬಂಗಾಲದಲ್ಲಿ ಮಾವೋವಾದಿಗಳಿಗೆ ಬೆಂಬಲ ನೀಡುತ್ತಿರುವುದು. ಲಾಲ್‌ಗಢದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ನಡೆಸುತ್ತಿರುವ ಜಂಟಿ ಕಾರ್ಯಾಚರಣೆಯನ್ನು ಆಕೆ ವಿರೋಧಿಸುತ್ತಾ ಸಾರ್ವಜನಿಕವಾಗಿಯೇ ಹೇಳಿಕೆಗಳನ್ನು ನೀಡುತ್ತಾ ಬಂದಿದ್ದಾರೆ.

ಅವರ ಪ್ರಕಾರ ಸಿಪಿಎಂ ಕಾರ್ಯಕರ್ತರಿಗೆ ಶಸ್ತ್ರಾಸ್ತ್ರಗಳನ್ನು ಕೊಟ್ಟು ಗ್ರಾಮಗಳನ್ನು ವಶಕ್ಕೆ ತೆಗೆದುಕೊಳ್ಳಲು ಅವಕಾಶ ನೀಡಲಾಗಿದೆ. ಇದೇ ಕಾರಣದಿಂದ ಇತ್ತೀಚಿನ ಸ್ಥಳೀಯ ಚುನಾವಣೆಯಲ್ಲಿ ಸಿಪಿಎಂಗೆ ಬೆಂಬಲ ನೀಡುವ ನಿಟ್ಟಿನಿಂದ ಕಾಂಗ್ರೆಸ್ ತನ್ನ ಮೈತ್ರಿಕೂಟದಿಂದ ದೂರಕ್ಕೆ ಸರಿದಿದೆ ಎನ್ನುವುದು ಮಮತಾ ಆರೋಪ.

ಇದನ್ನೇ ಕಾಯುತ್ತಿದ್ದ ಸಮಾಜವಾದಿ ಪಕ್ಷದ ಮುಲಾಯಂ ಸಿಂಗ್ ಯಾದವ್, ತೃಣಮೂಲ ಕಾಂಗ್ರೆಸ್ಸನ್ನು ಕೈ ಬಿಡುವುದಾದರೆ ಸರಕಾರಕ್ಕೆ ಬೆಂಬಲ ನೀಡಲು ನಾನಿದ್ದೇನೆ ಎಂದು ಭರವಸೆ ನೀಡಿದ್ದಾರೆ. ಮೂಲಗಳ ಪ್ರಕಾರ ಅವರು ವಿತ್ತ ಸಚಿವ ಪ್ರಣಬ್ ಮುಖರ್ಜಿಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದು, ಅನಿವಾರ್ಯ ಪರಿಸ್ಥಿತಿ ಎದುರಾದರೆ ಧೃತಿಗೆಡಬೇಕಾಗಿಲ್ಲ ಎಂದು ಹೇಳಿದ್ದಾರೆ.

ಮಹಿಳಾ ಮೀಸಲಾತಿ ಮಸೂದೆಯನ್ನು ಮುಂದಿಟ್ಟುಕೊಂಡು ಯುಪಿಎ ಸರಕಾರವನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿರುವ ಮುಲಾಯಂ, ನಂತರದ ದಿನಗಳಲ್ಲಿ ತನ್ನದೇ ತಂತ್ರಗಳ ಮೂಲಕ ಕೇಂದ್ರಕ್ಕೆ ಹತ್ತಿರವಾಗುತ್ತಿದ್ದಾರೆ. ಇತ್ತೀಚಿನ ಪ್ರತಿಪಕ್ಷಗಳ ಖಂಡನಾ ನಿರ್ಣಯದಲ್ಲಿ ಸರಕಾರದ ಪರವಾಗಿ ವರ್ತಿಸಿರುವುದು ಮತ್ತು ನಾಗರಿಕ ಪರಮಾಣು ಬಾಧ್ಯತಾ ಮಸೂದೆಯಲ್ಲಿ ಯುಪಿಎಯನ್ನು ಬೆಂಬಲಿಸಿರುವುದೇ ಇದಕ್ಕೆ ಸಾಕ್ಷಿ. ಈ ನಡುವೆ ಜಾತಿಯಾಧರಿತ ಜನಗಣತಿ ನಡೆಸಬೇಕೆಂಬ ಮುಲಾಯಂ ಆಗ್ರಹಕ್ಕೂ ಯುಪಿಎ ಮಣಿದಿದೆ. ಹಾಗಾಗಿ ಯುಪಿಎಯೊಳಗೆ ಮತ್ತೆ ಸಮಾಜವಾದಿ ಸೇರಿಕೊಂಡರೂ ಅಚ್ಚರಿಯಿಲ್ಲ ಎಂದು ಹೇಳಲಾಗುತ್ತಿದೆ.

2008ರಲ್ಲಿ ನಾಗರಿಕ ಪರಮಾಣು ಒಪ್ಪಂದವನ್ನು ವಿರೋಧಿಸಿ ಎಡಪಕ್ಷಗಳು ಯುಪಿಎ ತೊರೆದ ಹೊತ್ತಿನಲ್ಲಿ ಸರಕಾರಕ್ಕೆ ಬೆಂಬಲ ನೀಡಿದ್ದ ಮುಲಾಯಂ, ನಂತರ ನಡೆದ ಮಹಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ದೂರ ಉಳಿದಿದ್ದರು. ಚುನಾವಣೆಯ ನಂತರ ಸ್ವತಃ ಯುಪಿಎ, ಮುಲಾಯಂರನ್ನು ಹತ್ತಿರ ಸೇರಿಸಿರಲಿಲ್ಲ. ಪ್ರಸಕ್ತ ಅವರ ಪಕ್ಷ 21 ಲೋಕಸಭಾ ಸ್ಥಾನಗಳನ್ನು ಹೊಂದಿದ್ದರೆ, ತೃಣಮೂಲ 19 ಸ್ಥಾನಗಳನ್ನು ಹೊಂದಿದೆ.

ಕಾಂಗ್ರೆಸ್‌ನಿಂದ ತೇಜೋವಧೆ: ಮಮತಾ
ಈ ನಡುವೆ ಪ್ರತಿಕ್ರಿಯೆ ನೀಡಿರುವ ಮಮತಾ, ಕಾಂಗ್ರೆಸ್‌ನ ಒಂದು ವಲಯವು ತನ್ನನ್ನು ಮತ್ತು ತನ್ನ ಪಕ್ಷವನ್ನು ಮೂಲೆಗುಂಪು ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಆದರೆ ಸರಕಾರದಿಂದ ದೂರ ಸರಿಯುವ ಪ್ರಶ್ನೆ ಸದ್ಯಕ್ಕಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಘನತೆ ಮತ್ತು ಗೌರವವನ್ನು ಉಳಿಸಿಕೊಂಡು ಸಾಧ್ಯವಾಗುವಷ್ಟು ದಿನ ಯುಪಿಎಯಲ್ಲೇ ಮುಂದುವರಿಯಲು ಯತ್ನಿಸುತ್ತೇನೆ. ನಂಬಿಕೆಯೆನ್ನುವುದು ಮುರಿದು ಹೋಗದಂತೆ ನೋಡಿಕೊಳ್ಳಬೇಕಾಗಿದೆ. ಅದು ಒಮ್ಮೆ ನಡೆದು ಹೋದಲ್ಲಿ ಮತ್ತೆ ಸರಿಪಡಿಸುವುದು ಅಸಾಧ್ಯ ಎಂದು ಮಮತಾ ತಿಳಿಸಿದ್ದಾರೆ.

ನೀವು ಡಿಎಂಕೆ ಮತ್ತು ಎಐಎಡಿಎಂಕೆಯನ್ನು ಜತೆಗೆ ಇಟ್ಟುಕೊಂಡು ಸಾಗುವುದು ಸಾಧ್ಯವಿಲ್ಲ. ಅದೇ ರೀತಿ ತೃಣಮೂಲ ಕಾಂಗ್ರೆಸ್ ಮತ್ತು ಸಿಪಿಎಂ ಎರಡನ್ನೂ ಏಕಕಾಲದಲ್ಲಿ ಜತೆಯಾಗಿಟ್ಟುಕೊಳ್ಳಲಾಗದು. ಇದನ್ನು ಕಾಂಗ್ರೆಸ್ ಮುಖಂಡರು ಮನದಟ್ಟು ಮಾಡಿಕೊಳ್ಳಬೇಕು ಎಂದಿರುವ ತೃಣಮೂಲ ವರಿಷ್ಠೆ, ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಒಳ್ಳೆಯವರು; ಅವರು ಬಯಸಿದಲ್ಲಿ ನಮ್ಮ ಸಮಸ್ಯೆಗಳನ್ನು ವಿವರಿಸಲು ಸಿದ್ಧ ಎಂದಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ