ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಗಣಿಗಾರಿಕೆಗೆ ಸುಪ್ರೀಂ ಅನುಮತಿ; ಬಳ್ಳಾರಿ ರೆಡ್ಡಿಗಳು ನಿರಾಳ (Mining | Reddy brothers | Karnataka | Survey of India panel)
Bookmark and Share Feedback Print
 
ಬಳ್ಳಾರಿ ರೆಡ್ಡಿ ಸಹೋದರರಿಗೆ ಸಿಹಿ ಸುದ್ದಿ ಸಿಕ್ಕಿದೆ. ವಿವಾದ ರಹಿತ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಬಹುದು ಎಂದು ಸರ್ವೋಚ್ಚ ನ್ಯಾಯಾಲಯವು ಸೋಮವಾರ ಷರತ್ತುಬದ್ಧ ಅನುಮತಿ ನೀಡಿ ಆದೇಶ ಹೊರಡಿಸಿದೆ.

ಗಣಿಗಾರಿಕೆಗೆ ಗುತ್ತಿಗೆ ನೀಡಿರುವ ಪ್ರದೇಶದ ನಕಾಶೆಯಲ್ಲಿ ಲೋಪದೋಷಗಳಿದ್ದು, ಗಡಿ ಪುನರ್ ಪರಿಶೀಲನೆಯ ಅಗತ್ಯವಿದೆ. ಅದುವರೆಗೆ ಗಣಿಗಾರಿಕೆಗೆ ನಿಷೇಧ ಮುಂದುವರಿಸಬೇಕು ಎಂದು ಸುಪ್ರೀಂ ಕೋರ್ಟ್ ನೇಮಿಸಿದ್ದ ಸರ್ವೇ ಆಫ್ ಇಂಡಿಯಾ ಸಮಿತಿಯು ತನ್ನ ವರದಿಯಲ್ಲಿ ನ್ಯಾಯಾಲಯಕ್ಕೆ ಶಿಫಾರಸು ಮಾಡಿತ್ತು. ಈ ಸಂಬಂಧ ನ್ಯಾಯಾಲಯವು ತನ್ನ ತೀರ್ಪನ್ನು ನೀಡಿದ್ದು, ಗಣಿ ರೆಡ್ಡಿಗಳಿಗೆ ಕೊಂಚ ನಿರಾಳತೆಯನ್ನು ಒದಗಿಸಿದೆ.

ಕರ್ನಾಟಕ ಮತ್ತು ಆಂಧ್ರಪ್ರದೇಶಗಳ ನಡುವಿನ ಗಡಿ ಮರುಗುರುತಿಸುವಿಕೆ ಕಾರ್ಯವು ಸುದೀರ್ಘಾವಧಿಯನ್ನು ತೆಗೆದುಕೊಳ್ಳಲಿರುವ ಕಾರಣದಿಂದ ವಿವಾದ ರಹಿತ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು ಅನುಮತಿ ನೀಡಬೇಕು ಎಂದು ರೆಡ್ಡಿಗಳ ಮಾಲಕತ್ವದ ಓಬಳಾಪುರಂ ಗಣಿಗಾರಿಕಾ ಕಂಪನಿ ನ್ಯಾಯಾಲಯದಲ್ಲಿ ಮನವಿ ಮಾಡಿಕೊಂಡಿತ್ತು.

ಸುಪ್ರೀಂ ನೀಡಿರುವ ಅನುಮತಿಯ ಪ್ರಕಾರ, ವಿವಾದ ರಹಿತ ಪ್ರದೇಶದಲ್ಲಿ ಮಾತ್ರ ಗಣಿಗಾರಿಕೆ ನಡೆಸಬಹುದು. ವಿವಾದಿತ ಪ್ರದೇಶದಲ್ಲಿ ಗಣಿಗಾರಿಕೆ ಚಟುವಟಿಕೆಯನ್ನು ಯಾವುದೇ ಕಾರಣಕ್ಕೂ ನಡೆಸುವಂತಿಲ್ಲ. ಕರ್ನಾಟಕ ಗಡಿ ಪ್ರದೇಶದಲ್ಲಿ ಮತ್ತು ಗಡಿಯಿಂದ 150 ಮೀಟರ್ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧಿಸಲಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ನೇತೃತ್ವದ ತ್ರಿಸದಸ್ಯ ಪೀಠವು ತೀರ್ಪು ನೀಡಿದೆ.

ಹಲವು ಷರತ್ತುಗಳೊಂದಿಗೆ ಬಿಜೆಪಿ ಸಚಿವರ ಮಾಲಕತ್ವದ ಮೂರು ಗಣಿಗಳಲ್ಲಿ ಗಣಿಗಾರಿಕೆ ನಡೆಸಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. ಈ ನಡುವೆ ಸರ್ವೇ ಆಫ್ ಇಂಡಿಯಾವು ಎರಡು ತಿಂಗಳ ಒಳಗೆ ಮರು ಸರ್ವೆ ನಡೆಸಿ ವರದಿ ಸಲ್ಲಿಸಬೇಕೆಂದು ಸುಪ್ರೀಂ ಸೂಚನೆ ನೀಡಿದೆ.

ಕರ್ನಾಟಕ ಮತ್ತು ಆಂಧ್ರಪ್ರದೇಶಗಳ ನಡುವಿನ ಗಡಿ ಗುರುತಿಸುವಿಕೆಯನ್ನು ಮತ್ತೆ ನಡೆಸಬೇಕು ಎಂಬ ಸರ್ವೇ ಆಫ್ ಇಂಡಿಯಾ ಶಿಫಾರಸ್ಸನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿದೆ. ಈ ಸಂಬಂಧ ಗಡಿ ರೇಖೆ ಗುರುತಿಸಲು ಆದೇಶ ನೀಡಲಾಗಿದ್ದು, ಸರ್ವೆ ನಡೆಸುವ ವೇಳೆ ಗಣಿಗಾರಿಕೆ ಸ್ಥಗಿತಗೊಳಿಸಬೇಕೆಂದು ಸೂಚನೆ ನೀಡಿದೆ.

ಸರ್ವೇ ಆಫ್ ಇಂಡಿಯಾವು ಆರು ಗಣಿಗಳ ಸಮೀಕ್ಷೆ ನಡೆಸಿತ್ತು. ಇದರಲ್ಲಿ ಮೂರು ಗಣಿಗಳು ರೆಡ್ಡಿ ಸಹೋದರರಿಗೆ (ಜನಾರ್ದನ ರೆಡ್ಡಿ ಮತ್ತು ಕರುಣಾಕರ ರೆಡ್ಡಿ) ಸೇರಿದವು.
ಸಂಬಂಧಿತ ಮಾಹಿತಿ ಹುಡುಕಿ