ಅಚ್ಚರಿ ಮತ್ತು ಆಘಾತಕಾರಿ ಬೆಳವಣಿಗೆಯೊಂದರಲ್ಲಿ ಕುಖ್ಯಾತ ಖಾಪ್ ಪಂಚಾಯಿತಿಗಳಿಗೆ ಕಾಂಗ್ರೆಸ್ ಸಂಸದರೊಬ್ಬರು ಬೆಂಬಲ ನೀಡಿದ್ದು, ಅವರ 'ಸೇವೆ'ಗಳಿಗಾಗಿ ಪ್ರಶಂಸಿಸಿ ಪತ್ರ ಬರೆದಿರುವ ಘಟನೆ ಬೆಳಕಿಗೆ ಬಂದಿದೆ.
ಸಗೋತ್ರ ಮದುವೆಯನ್ನು ನಿಷೇಧಿಸುವ ಈ ಖಾಪ್ ಪಂಚಾಯಿತಿಗಳು, ಇದನ್ನು ಉಲ್ಲಂಘಿಸುವವರನ್ನು ಕೊಂದೇ ಹಾಕುವ ಕ್ರೂರ ಸ್ವಯಂ ಘೋಷಿತ ಅಲಿಖಿತ ಕಾನೂನುಗಳಿಂದ ಕುಖ್ಯಾತಿಗಳನ್ನು ಪಡೆದಿವೆ. ಆದರೆ ಕಾಂಗ್ರೆಸ್ ಸಂಸದರ ಪ್ರಕಾರ ಇದು ಸಮಾಜ ಸುಧಾರಣಾ ಕ್ರಮಗಳು.
ಕುರುಕ್ಷೇತ್ರ ಸಂಸದ ನವೀನ್ ಜಿಂದಾಲ್ ಎಂಬವರೇ ಈ ಪತ್ರ ಬರೆದವರು. ಸ್ವತಃ ಕೈಗಾರಿಕೋದ್ಯಮಿಯೂ ಆಗಿರುವ ಇವರು, ಇಂತಹ ಪಂಚಾಯಿತಿಗಳು ಸಾಮ್ರಾಟ್ ಅಶೋಕ್ ಮತ್ತು ಹರ್ಷವರ್ದನರ ಕಾಲದಿಂದಲೇ ಇವೆ ಮತ್ತು ಈ ಪಂಚಾಯಿತಿಗಳು ಯಾವತ್ತೂ ಸಮಾಜಕ್ಕೆ ನಿರ್ದೇಶಕ ತತ್ವಗಳನ್ನೇ ನೀಡಿವೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಪ್ರಸಕ್ತ ಇರುವ ಕಾನೂನು ವ್ಯವಸ್ಥೆ ಜಾರಿಗೆ ಬರುವ ಮೊದಲೇ ಜನತೆಯ ಸಮಸ್ಯೆಗಳನ್ನು ಪರಿಹರಿಸುವ ಮೂಲಕ ಸಮಾಜಕ್ಕೆ ಈ ಪಂಚಾಯಿತಿಗಳು ತನ್ನದೇ ಆದ ಕೊಡುಗೆಯನ್ನು ನೀಡಿವೆ ಎಂದು ಅವರು ಕುಖ್ಯಾತ ಪಂಚಾಯಿತಿಗಳಿಗೆ ತನ್ನ ಸಂಪೂರ್ಣ ಬೆಂಬಲವನ್ನು ಘೋಷಿಸಿದ್ದಾರೆ.
ಸಗೋತ್ರದ ಗಂಡು-ಹೆಣ್ಣಿನ ನಡುವಿನ ಮದುವೆಯನ್ನು ನಿಷೇಧಿಸಲು ಹಿಂದೂ ವಿವಾಹ ಕಾಯ್ದೆಗೆ ತಿದ್ದುಪಡಿ ತರುವ ಪ್ರಸ್ತಾಪಕ್ಕೆ ಹರ್ಯಾಣದ ಎಲ್ಲಾ ಜನಪ್ರತಿನಿಧಿಗಳು ಬೆಂಬಲ ನೀಡಬೇಕೆಂದು ಮೇ 2ರಂದು ಕೈತಾಲ್ ಜಿಲ್ಲೆಯ ಪೈ ಎಂಬಲ್ಲಿ ನಡೆದಿದ್ದ ಖಾಪ್ ಪಂಚಾಯಿತಿಗಳ ಒಕ್ಕೂಟದ ಮಹಾ ಸಭೆಯಲ್ಲಿ ಆಗ್ರಹಿಸಲಾಗಿತ್ತು.
ಅಲ್ಲದೆ ಕುರುಕ್ಷೇತ್ರ ಸಂಸದ ತಮಗೆ ಬೆಂಬಲ ನೀಡದೇ ಇದ್ದಲ್ಲಿ, ಅವರ ವಿರುದ್ಧ ಘೇರಾವ್ ಮಾಡುವ ಬೆದರಿಕೆಯನ್ನೂ ಈ ಪಂಚಾಯಿತಿಗಳು ಹಾಕಿದ್ದವು.
ಆದರೆ ಅದಕ್ಕೂ ಮೊದಲು ಜಿಂದಾಲ್ ತನ್ನ ಬೆಂಬಲವನ್ನು ಪಂಚಾಯಿತಿಗಳಿಗೆ ನೀಡಿದ್ದು, ಮಹಾ ಪಂಚಾಯಿತಿ ಸಭೆಗೆ ಹಾಜರಾಗಲು ಅಸಾಧ್ಯವಾಗಿರುವುದಕ್ಕೆ ವಿಷಾದ ವ್ಯಕ್ತಪಡಿಸಿದ್ದಾರೆ.
ಸಮಾಜದ ಸಂಪ್ರದಾಯಗಳು, ಕಟ್ಟಳೆಗಳು, ನಂಬಿಕೆಗಳು ಮತ್ತು ಸಂಸ್ಕೃತಿಯ ಬಗ್ಗೆ ನಾನು ಮತ್ತು ನನ್ನ ಕುಟುಂಬವು ಅಪಾರವಾಗಿ ಗೌರವವನ್ನು ಹೊಂದಿದ್ದೇವೆ ಎಂದು ಪತ್ರದಲ್ಲಿ ತಿಳಿಸಿರುವ ಅವರು, ಸಮಾಜದಲ್ಲಿನ ಇತರ ಪೀಡೆಗಳಾದ ಹೆಣ್ಣು ಭ್ರೂಣ ಹತ್ಯೆ, ವರದಕ್ಷಿಣೆ ವಿರುದ್ಧವೂ ಕಠಿಣ ಹೋರಾಟ ನಡೆಸುವಂತೆ ಕರೆ ನೀಡಿದ್ದಾರೆ.