ಹುಲಿಯನ್ನು ಜೀವಂತವಾಗಿ ಸೆರೆ ಹಿಡಿಯುವುದು ಹೇಗೆ ಎನ್ನುವುದು ಪ್ರಶ್ನೆ. ಮೊದಲನೇಯದ್ದು ನ್ಯೂಟನ್ ವಿಧಾನ - ನಿಮ್ಮನ್ನು ಹಿಡಿಯಲು ಹುಲಿಗೆ ಅವಕಾಶ ನೀಡಿ, ನಂತರ ಹುಲಿಯನ್ನು ಹಿಡಿಯುವುದು. ಎರಡನೇಯದ್ದು ಐನ್‌ಸ್ಟೈನ್ ಸೂತ್ರ - ಹುಲಿ ಸುಸ್ತಾಗುವವರೆಗೆ ಬೆನ್ನಟ್ಟಿ ನಂತರ ಸೆರೆ ಹಿಡಿಯುವುದು. ಮೂರನೇಯದ್ದು ಭಾರತೀಯ ಪೊಲೀಸರ ವಿಧಾನ - ಬೆಕ್ಕೊಂದನ್ನು ಮೊದಲು ಬಂಧಿಸಬೇಕು. ನಂತರ ಅದು 'ತಾನೇ ಹುಲಿ' ಎಂದು ಒಪ್ಪಿಕೊಳ್ಳುವ ತನಕ ಹೊಡೆಯುವುದು!
ಇದಕ್ಕೆ ಹೊಂದಿಕೊಳ್ಳುವ ಘಟನೆಯೊಂದು ಉತ್ತರ ಪ್ರದೇಶದಲ್ಲಿ ನಡೆದಿದೆ.
ಕುಟುಂಬದ ಗೌರವವನ್ನು ಕಾಪಾಡಲು ಸಹೋದರಿಯ ಪ್ರಿಯಕರನನ್ನು ತಾನೇ ಕೊಂದು ಹಾಕಿರುವುದಾಗಿ ಆಕೆಯ ಸಹೋದರ ಒಪ್ಪಿಕೊಂಡಿದ್ದಾನೆ ಎಂದು ಶವವೊಂದು ಪತ್ತೆಯಾದ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದ್ದ ಪೊಲೀಸರು ಹೇಳಿಕೆ ನೀಡಿದ್ದರು. ನಂತರ ಆ ಶವವನ್ನು ಹುಡುಗನ ಕುಟುಂಬದವರು ದಫನ ಕೂಡ ಮಾಡಿದ್ದರು. ಅಚ್ಚರಿಯ ವಿಚಾರವೆಂದರೆ ಆ ಹುಡುಗನೀಗ ತನ್ನ ಪ್ರೇಯಸಿಯೊಂದಿಗೆ ಪೊಲೀಸ್ ಠಾಣೆಗೆ ಹಾಜರಾಗಿರುವುದು! ಮೇಲ್ನೋಟಕ್ಕೆ ಇದರಲ್ಲಿ ಕಾಣುವ ಕಾರಣ ಪೊಲೀಸರ ತಂತ್ರಗಾರಿಕೆ.
ಪ್ರೇಮಕ್ಕೆ ವಿರೋಧವಿತ್ತು... ಹುಡುಗನ ಹೆಸರು ಅಜಿತ್ ಸೈನಿ. ಉತ್ತರ ಪ್ರದೇಶದ ಮುಜಾಫರ್ ನಗರದ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ವಿದ್ಯಾರ್ಥಿಯಾಗಿರುವ ಆತ ಅದೇ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಆಂಶು ತೊಮರ್ ಎಂಬಾಕೆಯನ್ನು ಪ್ರೀತಿಸುತ್ತಿದ್ದ. ಆದರೆ ಇದಕ್ಕೆ ಹುಡುಗಿಯ ಮನೆಯವರಿಂದ ಭಾರೀ ವಿರೋಧವಿತ್ತು.
ಇತ್ತೀಚೆಗಷ್ಟೇ ಅವರಿಬ್ಬರೂ ಇದ್ದಕ್ಕಿದ್ದಂತೆ ಕಾಣೆಯಾಗಿದ್ದರು. ಸ್ವಲ್ಪವೇ ದಿನದಲ್ಲಿ ಇಲ್ಲೇ ಪಕ್ಕದ ಬೀದಿಯೊಂದರಲ್ಲಿ ಶವವೊಂದು ಪತ್ತೆಯಾಗಿತ್ತು. ಅದು ಸೈನಿಯದ್ದೆಂದು ಗುರುತಿಸಿದ ನಂತರ ಕುಟುಂಬವು ಶವ ಸಂಸ್ಕಾರವನ್ನೂ ನಡೆಸಿತ್ತು.
ಇದರ ಬೆನ್ನಿಗೆ ಸೈನಿ ಕುಟುಂಬ ನೀಡಿದ ದೂರಿನಂತೆ ಪೊಲೀಸರು ಹುಡುಗಿಯ ತಂದೆ ನರೇಂದ್ರ ತೊಮರ್ ಮತ್ತು ಸಹೋದರ ಅನುಜ್‌ನನ್ನು ಬಂಧಿಸಿದ್ದರು. ಕುಟುಂಬದ ಗೌರವವನ್ನು ಹಾಳುಗೆಡವಿದ ಅಜಿತ್‌ನನ್ನು ತಾನು ಕೊಂದು ಹಾಕಿರುವುದಾಗಿ ಅನುಜ್ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೇಳಿಕೆಯನ್ನೂ ನೀಡಿದ್ದರು.
ಅಜಿತ್ ಮತ್ತು ಆಂಶು ಮನೆಯವರ ಮಾತನ್ನು ಕೇಳುತ್ತಿರಲಿಲ್ಲ. ಎರಡು ತಿಂಗಳ ಹಿಂದಷ್ಟೇ ನಮ್ಮ ಇಚ್ಛೆಗೆ ವಿರುದ್ಧವಾಗಿ ಅವರು ಪರಾರಿಯಾಗಿದ್ದರು. ಅವರ ಸಂಬಂಧಕ್ಕೆ ನಮ್ಮ ಸಂಪೂರ್ಣ ವಿರೋಧವಿದೆ. ಹಾಗಾಗಿ ನಾವು ಆತನನ್ನು ಕೊಂದು ಹಾಕಿದ್ದೇವೆ ಎಂದು ಆಂಶು ಸಹೋದರ ತಿಳಿಸಿದ್ದಾನೆ ಎಂದು ಪೊಲೀಸರು ಹೇಳಿದ್ದರು.
ಆದರೆ ಇದೀಗ ಅಜಿತ್ ಮತ್ತು ಆಂಶು ಸ್ಥಳೀಯ ಪೊಲೀಸ್ ಠಾಣೆಗೆ ಹಾಜರಾಗಿದ್ದಾರೆ. ನಾವಿಬ್ಬರೂ ಸತ್ತು ಹೋಗಿದ್ದೇವೆ ಎಂಬ ಸುದ್ದಿ ಹರಡಿದ ನಂತರ ಹೆದರಿ ನಾವು ಊರು ಬಿಟ್ಟಿದ್ದೆವು ಎಂದು ಪ್ರೇಮಿಗಳು ಹೇಳಿಕೊಂಡಿದ್ದಾರೆ.
ಪೊಲೀಸರು ಈಗ ಏನನ್ನೂ ಹೇಳುವ ಸ್ಥಿತಿಯಲ್ಲಿಲ್ಲ. ಮತ್ತಷ್ಟು ತನಿಖೆ ನಡೆಸುತ್ತಿದ್ದೇವೆ ಎಂದಷ್ಟೇ ಹೇಳಿ ಸುಮ್ಮನಾಗಿದ್ದಾರೆ.