ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಇತರ ಸಚಿವಾಲಯಗಳ ಬಗ್ಗೆ ತೆಪ್ಪಗಿರಿ; ರಮೇಶ್‌ಗೆ ಪ್ರಧಾನಿ (India | Jairam Ramesh | Manmohan Singh | Home Ministry)
Bookmark and Share Feedback Print
 
ಕೇಂದ್ರ ಗೃಹ ಸಚಿವಾಲಯದ ವಿರುದ್ಧ ಪರಿಸರ ಖಾತೆ ಸಚಿವ ಜೈರಾಮ್ ರಮೇಶ್ ಮಾಡಿರುವ ಕಟುಟೀಕೆಗೆ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಇತರ ಸಚಿವಾಲಯಗಳ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದಂತೆ ತಾಕೀತು ಮಾಡಿದ್ದಾರೆ ಎಂದು ಪ್ರಧಾನಿ ಕಚೇರಿ ಮೂಲಗಳು ತಿಳಿಸಿವೆ.

ಅದೇ ಹೊತ್ತಿಗೆ ಚೀನಾದೆಡೆಗಿನ ಭಾರತದ ನೀತಿಯಲ್ಲಿ ಯಾವುದೇ ಗೊಂದಲಗಳಿಲ್ಲ ಎಂದೂ ರಮೇಶ್ ಅವರಿಗೆ ಪ್ರಧಾನಿಯವರು ಸ್ಪಷ್ಟಪಡಿಸಿದ್ದಾರೆ ಎಂದು ಹೇಳಲಾಗಿದೆ.

ಚೀನಾದೆಡೆಗಿನ ಗೃಹಸಚಿವಾಲಯದ ನೀತಿಗಳು ಭೀತಿಕಾರಕ ಮತ್ತು ಸಂಶಯಗ್ರಸ್ತವಾಗಿವೆ ಎಂದು ಜೈರಾಮ್ ರಮೇಶ್ ಹೇಳಿದ ಗಂಟೆಗಳೊಳಗೆ ಪ್ರಧಾನ ಮಂತ್ರಿಯವರು ಈ ಪ್ರತಿಕ್ರಿಯೆ ನೀಡಿದ್ದಾರೆ.

ಗೃಹ ಸಚಿವಾಲಯ, ರಕ್ಷಣಾ ಸಚಿವಾಲಯ ಮತ್ತು ದೂರವಾಣಿ ಸಚಿವಾಲಯದ ವಿರುದ್ಧ ಏಕಕಾಲದಲ್ಲಿ ವಾಗ್ದಾಳಿ ನಡೆಸಿದ ಸಚಿವ ರಮೇಶ್, ಕೋಪನ್‌ಹೇಗನ್ ನಂತರ ಚೀನಾದ ಜತೆ ಸಹಕಾರವನ್ನು ಮುಂದುವರಿಸುವ ಸ್ಫೂರ್ತಿಯನ್ನು ಪ್ರಧಾನ ಮಂತ್ರಿಯವರ ಕಚೇರಿ ಹೊಂದಿತ್ತು; ಆದರೆ ತಮ್ಮ ಶಂಕಾಸ್ಪದ ನಿಲುವುಗಳಿಂದಾಗಿ ಗೃಹ ಸಚಿವಾಲಯ ಮತ್ತು ರಕ್ಷಣಾ ಸಚಿವಾಲಯಗಳು ಇದರ ಮೇಲೆ ಮೋಡ ಆವರಿಸುವಂತೆ ಮಾಡಿದವು ಎಂದಿದ್ದಲ್ಲದೆ, ಹವಮಾನ ಬದಲಾವಣೆ ಕುರಿತ ಭವಿಷ್ಯದ ಸಹಕಾರಕ್ಕೆ ಮಾರಕವಾಗುವ ಸಾಮರ್ಥ್ಯವನ್ನು ಹೊಂದಿದೆ ಎಂದೂ ಅವರು ತಿಳಿಸಿದ್ದಾರೆ.

ಹವಮಾನ ಬದಲಾವಣೆ ಕುರಿತ ಅಂತಾರಾಷ್ಟ್ರೀಯ ಮಾತುಕತೆಯ ನಿಕಟ ಸಹಭಾಗಿತ್ವದ ಕಾರಣದಿಂದ ಏಷಿಯಾದ ಎರಡು ದೇಶಗಳ ನಡುವೆ ಸೃಷ್ಟಿಯಾಗಿದ್ದ ಸ್ನೇಹಪರ ಸಂಬಂಧವು ಭಾರತದ ಭದ್ರತಾ ವ್ಯವಸ್ಥೆಗಳ ಶಂಕಾಸ್ಪದ ನಿಲುವಿನಿಂದಾಗಿ ಮಣ್ಣುಪಾಲಾಗುತ್ತಿದೆ ಎಂದು ರಮೇಶ್ ಖಾರವಾಗಿ ಹೇಳಿಕೆ ನೀಡಿದ್ದರು.
ಸಂಬಂಧಿತ ಮಾಹಿತಿ ಹುಡುಕಿ