ಯಾವುದೇ ಕಾರಣಕ್ಕಾದರೂ ಹೆತ್ತಬ್ಬೆಯನ್ನು ಹತ್ಯೆ ಮಾಡುವುದನ್ನು ಸಮರ್ಥಿಸಲು ಕಾರಣವೇ ಸಿಗದು ಅಥವಾ ಯಾರೂ ಸಮರ್ಥನೆ ಮಾಡಲಾರರು. ಅಂಥದ್ದರಲ್ಲಿ ಆತ ತನ್ನ ಸ್ವಂತಃ ತಾಯಿಯನ್ನೇ ಕೊಂದು ಜೈಲಿನಲ್ಲಿ ಪಶ್ಚಾತ್ತಾಪದ ಜೀವನ ನಡೆಸುತ್ತಿದ್ದ. ಕೊನೆಗೂ ಇನ್ನು ಬದುಕುವುದು ಸಾಧ್ಯವಿಲ್ಲ ಎಂಬುದನ್ನು ಮನಗಂಡು ಸ್ವಯಂ ಸಾವನ್ನು ತಂದುಕೊಳ್ಳಲು ನಿರ್ಧರಿಸಿ ಯಶಸ್ವಿಯಾಗಿದ್ದಾನೆ.
ಇದು ನಡೆದಿರುವುದು ದೆಹಲಿಯ ತಿಹಾರ್ ಜೈಲಿನಲ್ಲಿ. ಇಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ 28ರ ಹರೆಯದ ವಿಶವ್ ಚೌಧರಿ ಭಾರತದ ಅಥವಾ ಜಗತ್ತಿನ ಯಾವುದೇ ಅಧಿನಿಯಮ, ನ್ಯಾಯಾಲಯ ನೀಡದ ಶಿಕ್ಷೆಗೆ ಒಳಗಾಗಿದ್ದಾನೆ. ಕಾನೂನಿನಲ್ಲಿ ತಪ್ಪಿದ ಮರಣದಂಡನೆಯನ್ನು ಸ್ವತಃ ತಾನೇ ವಿಧಿಸಿಕೊಂಡಿದ್ದಾನೆ.
ಈ ಘಟನೆ ನಡೆದು ಎರಡು ವಾರಗಳೇ ಕಳೆದಿವೆ. ಏಪ್ರಿಲ್ 22ರ ಮುಂಜಾನೆ 5.30ಕ್ಕೂ ಮೊದಲು ಆತ ತನ್ನ ಸೆಲ್‌ನಲ್ಲೇ ನೇಣು ಹಾಕಿಕೊಂಡಿದ್ದ. ಅಮ್ಮಂದಿರ ದಿನದ (ಮೇ 9) ನಿಮಿತ್ತ ಸುದ್ದಿ ಹೊಸ ರೂಪ ಪಡೆದುಕೊಳ್ಳುತ್ತಿದೆ.
ತನ್ನ ತಂದೆ ಭೇಟಿಯಾದ ನಂತರ ವಿಶವ್ ತೀವ್ರ ಖಿನ್ನನಾಗಿದ್ದ. ಅದರ ಮರುದಿನವೇ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬಹುಶಃ ಪಾಪಪ್ರಜ್ಞೆ ಹೆಚ್ಚಿರಬೇಕು. ಈ ಸಂಬಂಧ ಯಾರಲ್ಲೂ ಯಾವುದೇ ಮಾಹಿತಿಯನ್ನು ಆತ ನೀಡಿಲ್ಲ. ಆದರೆ ತೀರಾ ಮೌನಿಯಾಗಿದ್ದ ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.
ಕತ್ತು ಹಿಸುಕಿ ಕೊಂದಿದ್ದ... ತಾಯಿಯನ್ನು ಸಾಯಿಸುವ ಮೊದಲು ತಂಪು ಪಾನೀಯಕ್ಕೆ ನಿದ್ದೆ ಮಾತ್ರೆಗಳನ್ನು ಹಾಕಿ ಕುಡಿಯಲೆಂದು ಕೊಟ್ಟಿದ್ದ. ಬಳಿಕ ಆಕೆ ನಿದ್ದೆಗೆ ಜಾರುತ್ತಿದ್ದಂತೆ ಕತ್ತು ಹಿಸುಕಿ ಸಾಯಿಸಿದ್ದ. ಈ ಸಂಬಂಧ ಮಾರ್ಚ್ ತಿಂಗಳಲ್ಲಿ ನ್ಯಾಯಾಲಯವು ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.
ವಿಶವ್ ಎಸಗಿರುವುದು ಬಹುದೊಡ್ಡ ಪ್ರಮಾದ ಎಂದು ಹೇಳಿದ್ದ ನ್ಯಾಯಾಲಯವು, ಈ ಪ್ರಕರಣವು ಮರಣ ದಂಡನೆ ವಿಧಿಸುವ ವಿಭಾಗದಲ್ಲಿ ಬರುವುದಿಲ್ಲ. ಇದಕ್ಕೆ ಜೀವಾವಧಿ ಶಿಕ್ಷೆಯೇ ಸೂಕ್ತ ಎಂದು ಹೇಳಿತ್ತು.
ಅಮ್ಮ ಎಂದರೆ ಅತಿ ಹೆಚ್ಚು ನಂಬಿಕೆಯ ಒಡನಾಡಿ. ಆಕೆ ನಾವು ಯಾವುದೇ ಕಷ್ಟ-ಸುಖದಲ್ಲಿದ್ದರೂ ಬೆಂಬಲಿಸುವ ಜೀವ. ಆ ಯುವಕ ತನ್ನ ತಾಯಿಯ ಅಗಾಧ ಮೌಲ್ಯವನ್ನು ಅರ್ಥ ಮಾಡಿಕೊಳ್ಳದೆ ಕೊಂದು ಹಾಕಿದ್ದಾನೆ. ಅದು ಆತ ತನ್ನ ಜೀವನದಲ್ಲಿ ಮಾಡಿದ ಬಹುದೊಡ್ಡ ಅವಿವೇಕದ ಕೆಲಸ. ಆದರೂ ಆತ ಬೆಳೆಯುತ್ತಿರುವ ಯುವಕನಾಗಿರುವುದರಿಂದ ಮತ್ತು ಯಾವುದೇ ಹೀನ ಕೃತ್ಯಗಳ ಹಿನ್ನೆಲೆ ಇಲ್ಲದೇ ಇರುವುದರಿಂದ ಈ ಶಿಕ್ಷೆ ಸಾಕು ಎಂದು ನ್ಯಾಯಾಧೀಶರು ಹೇಳಿದ್ದರು.
ಸರಕಾರಿ ಉದ್ಯೋಗಕ್ಕೆ ವಿಶವ್ ನಡೆಸಿದ ಯತ್ನಗಳೆಲ್ಲವೂ ವಿಫಲವಾದ ನಂತರ ಆತ ತಾಯಿಯನ್ನು ಕೊಂದು, ತಾನೂ ಆತ್ಮಹತ್ಯೆಗೆ ಯತ್ನಿಸಿದ್ದ. ಘಟನೆ 2008ರ ಮೇ 2ರಂದು ನಡೆದಿತ್ತು. ದುರದೃಷ್ಟವೆಂದರೆ ಈತನ ಆತ್ಮಹತ್ಯಾ ಯತ್ನ ವಿಫಲವಾಗಿತ್ತು.