ಕರ್ನಾಟಕದಲ್ಲಿ ಅಧಿಕಾರ ಹಂಚಿಕೆ ಸಂಬಂಧ ಜೆಡಿಎಸ್‌ನಿಂದ ಸಾಕಷ್ಟು ತೊಂದರೆಗಳನ್ನು ಅನುಭವಿಸಿದ್ದ ಬಿಜೆಪಿ ಇದೀಗ ಜಾರ್ಖಂಡ್‌ನಲ್ಲಿ ಜೆಎಂಎಂ ಬೆಂಬಲದಿಂದ ಮೈತ್ರಿ ಸರಕಾರ ರಚನೆ ಮಾಡಲು ಹೊರಟಿರುವಾಗಲೇ ಹಲವು ತಕರಾರುಗಳನ್ನು ಎದುರಿಸುತ್ತಿದೆ.
ಕಳೆದ ಕೆಲವು ಸಮಯಗಳಿಂದ ಜಾರ್ಖಂಡ್‌ನಲ್ಲಿ ಉದ್ಭವಿಸಿರುವ ರಾಜಕೀಯ ಅಸ್ಥಿರತೆ ಕೊನೆಗೊಳ್ಳುವ ಸೂಚನೆಯನ್ನು ಎರಡು ದಿನಗಳ ಹಿಂದೆಯಷ್ಟೇ ಬಿಜೆಪಿ ನೀಡಿತ್ತು. ಜಾರ್ಖಂಡ್ ಮುಕ್ತಿ ಮೋರ್ಛಾ (ಜೆಎಂಎಂ) ಬೆಂಬಲದಿಂದ ತಾನು ಸರಕಾರ ರಚಿಸುವುದಾಗಿಯೂ, ಮುಖ್ಯಮಂತ್ರಿ ಶಿಬು ಸೊರೆನ್ ಅವರು ರಾಜೀನಾಮೆ ನೀಡಿ ಸರಕಾರಕ್ಕೆ ಸಂಪೂರ್ಣ ಬೆಂಬಲ ನೀಡಲಿದ್ದಾರೆ ಎಂದೂ ಹೇಳಿಕೊಂಡಿತ್ತು.
ಆದರೆ ಇದೀಗ ಜೆಎಂಎಂ 50-50 ಸ್ಥಾನಗಳು ಬೇಕು ಎಂದು ಪಟ್ಟು ಹಿಡಿಯುವುದರೊಂದಿಗೆ ಬಿಜೆಪಿ ಮತ್ತೆ ಹಿಂದು ಮುಂದು ಯೋಚನೆ ಮಾಡಬೇಕಾದ ಪರಿಸ್ಥಿತಿಗೆ ತಲುಪಿದೆ. ಈ ವಿಚಾರದ ಕುರಿತು ಬಿಜೆಪಿ ಸ್ಪಷ್ಟ ನಿರ್ಧಾರ ಕೈಗೊಂಡ ಮೇಲಷ್ಟೇ ಸೊರೆನ್ ರಾಜೀನಾಮೆ ನೀಡುತ್ತಾರೆ ಎಂದು ಜೆಎಂಎಂ ಸ್ಪಷ್ಟಪಡಿಸಿದೆ.
ಏಪ್ರಿಲ್ 27ರಂದು ಸಂಸತ್ತಿನಲ್ಲಿ ಬಿಜೆಪಿ ಮಂಡಿಸಿದ್ದ ಖಂಡನಾ ನಿರ್ಣಯದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ಪರ ಜೆಎಂಎಂ ಮುಖಂಡ ಶಿಬು ಸೊರೆನ್ ಮತ ಚಲಾಯಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಬೆಂಬಲ ಹಿಂದಕ್ಕೆ ಪಡೆದುಕೊಳ್ಳುವ ಬೆದರಿಕೆ ಹಾಕಿದ ನಂತರ ಜಾರ್ಖಂಡ್‌ನಲ್ಲಿ ರಾಜಕೀಯ ಅಸ್ಥಿರತೆ ಉಂಟಾಗಿತ್ತು.
ಮುಖ್ಯಮಂತ್ರಿ ಶಿಬು ಸೊರೆನ್ ಅಧ್ಯಕ್ಷತೆಯಲ್ಲಿ ನಿನ್ನೆ ಸುಮಾರು ಮೂರು ಗಂಟೆಗಳಷ್ಟು ಸುದೀರ್ಘಾವಧಿ ಶಾಸಕಾಂಗ ಪಕ್ಷದ ಸಭೆ ನಡೆದಿದ್ದು, ಬಿಜೆಪಿ ಕೈಗೊಳ್ಳುವ ನಿರ್ಧಾರ ಮೇಲೆ ನಮ್ಮ ಮುಂದಿನ ನಡೆ ಅವಲಂಬಿಸಿದೆ ಎಂದು ಸೊರೆನ್ ಪುತ್ರ ಹೇಮಂತ್ ಸೊರೆನ್ ತಿಳಿಸಿದ್ದಾರೆ.
ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ ಮತ್ತು ಇತರರ ಜತೆಗಿನ ಸಭೆ ಸಂದರ್ಭದಲ್ಲಿ ನಾವು ತಲಾ 28 ತಿಂಗಳುಗಳ ಅಧಿಕಾರ ನಡೆಸುವ ಕುರಿತು ಪ್ರಸ್ತಾಪ ಮಾಡಿದ್ದೆವು. ಆದರೆ ನಂತರದ ಬೆಳವಣಿಗೆಯಲ್ಲಿ ಬಿಜೆಪಿಯೇ ನಾಲ್ಕುವರೆ ವರ್ಷಗಳ ಕಾಲ ಅಧಿಕಾರದಲ್ಲಿ ಮುಂದುವರಿಯುವ ನಿರ್ಧಾರಕ್ಕೆ ಬರಲಾಯಿತು. ರಾಜ್ಯದ ಅಭಿವೃದ್ಧಿ ಮತ್ತು ಸ್ಥಿರತೆಯ ಹಿತದೃಷ್ಟಿಯಿಂದ ನಾವು ಮುಖ್ಯಮಂತ್ರಿ ಗಾದಿಯನ್ನು ಬಿಜೆಪಿಗೆ ಬಿಟ್ಟುಕೊಟ್ಟಿದ್ದೇವೆ. ಹಾಗಾಗಿ ಈಗ 50-50ರ ಆಧಾರದಲ್ಲಿ ಅಧಿಕಾರ ಹಂಚಿಕೆ ಕುರಿತು ಅವರು ನಿರ್ಧರಿಸಬೇಕಾಗಿದೆ ಎಂದು ಹೇಮಂತ್ ವಿವರಣೆ ನೀಡಿದ್ದಾರೆ.
ಮುಖ್ಯಮಂತ್ರಿ ಶಿಬು ಸೊರೆನ್ ಯಾವಾಗ ರಾಜೀನಾಮೆ ನೀಡುತ್ತಾರೆ ಎಂದು ಪತ್ರಕರ್ತರು ಪ್ರಶ್ನಿಸಿದಾಗ, ಬಿಜೆಪಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಳ್ಳಲಿ ಮತ್ತು 50-50ರ ಹಂಚಿಕೆ ಪ್ರಸ್ತಾಪದ ಕುರಿತು ತನ್ನ ನಿಲುವನ್ನು ವ್ಯಕ್ತಪಡಿಸಲಿ ಎಂದಿದ್ದಾರೆ.
ಕೆಲ ವರ್ಷಗಳ ಹಿಂದೆ ಕರ್ನಾಟಕದ ರಾಜಕೀಯ ಪರಿಸ್ಥಿತಿ ಅಸ್ಥಿರವಾಗಿದ್ದಾಗ ಜೆಡಿಎಸ್ ಮತ್ತು ಬಿಜೆಪಿಗಳು ಒಟ್ಟಾಗಿ ಮೈತ್ರಿ ಸರಕಾರ ರಚನೆ ಮಾಡಿ ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದರು. ಜೆಡಿಎಸ್ ಅಧಿಕಾರಾವಧಿ ನಂತರ ಬಿಜೆಪಿಗೆ ಮುಖ್ಯಮಂತ್ರಿ ಪದವಿಯನ್ನು ಹಸ್ತಾಂತರ ಮಾಡಬೇಕಿತ್ತಾದರೂ, ಕೊನೆ ಕ್ಷಣದಲ್ಲಿ ಕೊಟ್ಟ ಮಾತಿನಿಂದ ಕುಮಾರಸ್ವಾಮಿ ಹಿಂದಕ್ಕೆ ಸರಿದಿದ್ದನ್ನು ಇದೀಗ ಸ್ಮರಿಸಬಹುದಾಗಿದೆ.