ಸಾಫ್ಟ್‌ವೇರ್ ದಿಗ್ಗಜ ಮೈಕ್ರೋಸಾಫ್ಟ್ ಮುಖ್ಯಸ್ಥ ಬಿಲ್ ಗೇಟ್ಸ್ ಅವರನ್ನು ತನ್ನ ಲೋಕಸಭಾ ಕ್ಷೇತ್ರ ಅಮೇಠಿಗೆ ಕರೆದೊಯ್ದಿರುವ ಸಂಸದ ಹಾಗೂ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ, ಹಲವು ಸ್ವಸಹಾಯ ಸಂಘಗಳು ಮತ್ತು ಸ್ತ್ರೀಶಕ್ತಿ ಸಂಘಟನೆಗಳ ಕಾರ್ಯಕ್ರಮಗಳಿಗೆ ಚಾಲನೆ ನೀಡಿಸಿದ್ದಾರೆ.
ಬಿಲ್ ಗೇಟ್ಸ್ ಭೇಟಿಯನ್ನು ಸೋಮವಾರ ಸಂಜೆಯವರೆಗೂ ರಹಸ್ಯವಾಗಿಡಲಾಗಿತ್ತು. ಉತ್ತರ ಪ್ರದೇಶದ ಹೆಚ್ಚಿನ ಕಾಂಗ್ರೆಸ್ ಮುಖಂಡರಿಗೂ ಇದು ತಿಳಿದಿರಲಿಲ್ಲ. ಭೇಟಿ ಹಿನ್ನೆಲೆಯಲ್ಲಿ ಭಾರೀ ಭದ್ರತೆಯನ್ನು ಏರ್ಪಡಿಸಲಾಗಿದೆ.
ಇಂದು ಬೆಳಿಗ್ಗೆ ನವದೆಹಲಿಯಿಂದ ಉತ್ತರ ಪ್ರದೇಶದ ಫುರ್ಸಾಟ್‌ಗಂಜ್‌ಗೆ ವಿಶೇಷ ವಿಮಾನದಲ್ಲಿ ಪ್ರಯಾಣಿಸಿದ ರಾಹುಲ್ ಮತ್ತು ಗೇಟ್ಸ್, ಅಲ್ಲಿಂದ ಅಮೇಠಿಗೆ ಬೆಳಿಗ್ಗೆ 10 ಗಂಟೆ ಹೊತ್ತಿಗೆ ತಲುಪಿದ್ದಾರೆ.
ರಾಹುಲ್‌ಗೆ ಸ್ಫೂರ್ತಿ ರುಡ್‌ಸೆಟ್... ಕಳೆದ ವರ್ಷ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದ ರಾಹುಲ್ ಗಾಂಧಿ, ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಗ್ರಾಮಾಭಿವೃದ್ಧಿ ಯೋಜನೆ, ಸ್ವಸಹಾಯ ಸಂಘಗಳು, ಸ್ತ್ರೀಶಕ್ತಿ ಸಂಘಟನೆಗಳು ಮತ್ತು ರುಡ್‌ಸೆಟ್ ಸಂಸ್ಥೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅಲ್ಲದೆ ಇದೇ ಮಾದರಿಯಲ್ಲಿ ತನ್ನ ಲೋಕಸಭಾ ಕ್ಷೇತ್ರದಲ್ಲೂ ಅಭಿವೃದ್ಧಿ ಕಾರ್ಯಗಳನ್ನು ನಡೆಸುವ ಹುಮ್ಮಸ್ಸನ್ನು ತೋರಿಸಿದ್ದರು.
ಇದೇ ನಿಟ್ಟಿನಲ್ಲಿ ಅವರು ಬ್ರಿಟನ್ ವಿದೇಶಾಂಗ ಕಾರ್ಯದರ್ಶಿ ಡೇವಿಡ್ ಮಿಲಿಬಾಂದ್ ಅವರನ್ನು ತನ್ನ ಕ್ಷೇತ್ರಕ್ಕೆ ಈ ಹಿಂದೆ ಕರೆಸಿಕೊಂಡಿದ್ದ ರಾಹುಲ್, ದಲಿತರ ಮನೆಯಲ್ಲಿ ಗ್ರಾಮ ವಾಸ್ತವ್ಯ ಮಾಡಿಸುವ ಸಂಚಲನ ಸೃಷ್ಟಿಸಿದ್ದರು.
ಇದೀಗ ಮತ್ತೂ ಒಂದು ಹೆಜ್ಜೆ ಮುಂದಕ್ಕೆ ಹೋಗಿರುವ ಅವರು, ಇಂದು ಹಲವು ಸ್ವಸಹಾಯ ಸಂಘಗಳು, ಸ್ತ್ರೀಶಕ್ತಿ ಸಂಘಟನೆಗಳಿಗೆ ಗೇಟ್ಸ್ ಮೂಲಕ ಚಾಲನೆ ನೀಡಿದ್ದಾರೆ. ಆ ಮೂಲಕ 'ಬಿಲ್ & ಮೆಲಿಂದಾ ಗೇಟ್ಸ್ ಫೌಂಡೇಶನ್' ಸಂಸ್ಥೆಯಿಂದ ಸಹಾಯವನ್ನು ಪಡೆದುಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ.
ಕಳೆದ ನಾಲ್ಕೈದು ವರ್ಷಗಳಿಂದ ಭಾರತದಲ್ಲಿ ತನ್ನ ಮತ್ತು ಪತ್ನಿ ಮೆಲಿಂದಾ ಗೇಟ್ಸ್ ಅವರ ಸಂಘಟನೆಯ ಮೂಲಕ ಗ್ರಾಮೀಣ ಅಭಿವೃದ್ಧಿಗೆ ಆರ್ಥಿಕ ಸಹಕಾರ ನೀಡುತ್ತಾ ಬಂದಿರುವ ಬಿಲ್ ಗೇಟ್ಸ್, ಇದೀಗ ರಾಹುಲ್ ಕ್ಷೇತ್ರದಲ್ಲೂ ಮಿಂಚು ಹರಿಸಿದ್ದಾರೆ.
ಬಿಹಾರ ಗ್ರಾಮ ದತ್ತು... ಉತ್ತರ ಪ್ರದೇಶ ಭೇಟಿಯ ಬಳಿಕ ಬಿಲ್ ಗೇಟ್ಸ್ ಬಿಹಾರಕ್ಕೆ ಪ್ರಯಾಣ ಬೆಳೆಸಲಿದ್ದು, ಅಲ್ಲಿನ ಖಗಾರಿಯಾದಲ್ಲಿನ ಗುಲಾರಿಯಾ ಎಂಬ ಗ್ರಾಮವನ್ನು ದತ್ತು ಸ್ವೀಕರಿಸಲಿದ್ದಾರೆ ಎಂದು ಸರಕಾರಿ ಮೂಲಗಳು ತಿಳಿಸಿವೆ.
ದಲಿತರೇ ಹೆಚ್ಚಾಗಿರುವ ಈ ಗುಲಾರಿಯಾ ಗ್ರಾಮದಲ್ಲಿ ನೀರು, ವಿದ್ಯುತ್, ಶಾಲೆಗಳು ಮತ್ತು ಆರೋಗ್ಯ ಕೇಂದ್ರಗಳಿಲ್ಲ. ಹಾಗಾಗಿ ಈ ಗ್ರಾಮವನ್ನು ದತ್ತು ಸ್ವೀಕರಿಸಲು ಗೇಟ್ಸ್ ನಿರ್ಧರಿಸಿದ್ದಾರೆ.