ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಎಲ್ಲವೂ ಸುಸೂತ್ರವಾದ್ರೆ ಕಸಬ್‌‌ಗೆ ಇದೇ ವರ್ಷ ಗಲ್ಲು: ಕೇಂದ್ರ (Ajmal Ameer Kasab | Pakistan | Mumbai attacks | GK Pillai)
Bookmark and Share Feedback Print
 
ಕಾನೂನು ಪ್ರಕ್ರಿಯೆಗಳು ಪೂರ್ಣಗೊಂಡರೆ ಮುಂಬೈ ದಾಳಿ ಪಾಕಿಸ್ತಾನಿ ಭಯೋತ್ಪಾದಕ ಮೊಹಮ್ಮದ್ ಅಜ್ಮಲ್ ಅಮೀರ್ ಕಸಬ್‌ನನ್ನು ಇದೇ ವರ್ಷ ಗಲ್ಲಿಗೇರಿಸಲಾಗುತ್ತದೆ ಎಂದು ಕೇಂದ್ರ ಕಾನೂನು ಸಚಿವ ವೀರಪ್ಪ ಮೊಯ್ಲಿ ಮತ್ತು ಗೃಹ ಕಾರ್ಯದರ್ಶಿ ಜಿ.ಕೆ. ಪಿಳ್ಳೈ ಅಭಿಪ್ರಾಯಪಟ್ಟಿದ್ದಾರೆ.

ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಮೊಯ್ಲಿ, ವಿಶೇಷ ನ್ಯಾಯಾಲಯ ವಿಧಿಸಿರುವ ಮರಣ ದಂಡನೆಯ ವಿರುದ್ಧ ಕಸಬ್ ಮೇಲಿನ ಕೋರ್ಟ್‌‌ಗಳಲ್ಲಿ ಮೇಲ್ಮನವಿ ಸಲ್ಲಿಸದೇ ಇದ್ದರೆ ಆತನನ್ನು ಇದೇ ವರ್ಷಾಂತ್ಯದೊಳಗೆ ಗಲ್ಲಿಗೆ ಹಾಕಲು ಸಾಧ್ಯವಾಗಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅತ್ತ ಗೃಹ ಕಾರ್ಯದರ್ಶಿ ಜಿ.ಕೆ. ಪಿಳ್ಳೈಯವರು ಕೂಡ ಇದೇ ಮಾತನ್ನು ಹೇಳಿದ್ದಾರೆ. ವಾರ್ತಾವಾಹಿನಿಯೊಂದರ ಜತೆ ಮಾತನಾಡುತ್ತಿದ್ದ ಅವರು, ಕಸಬ್ ತನಗೆ ಸೆಷನ್ಸ್ ಕೋರ್ಟ್ ನೀಡಿರುವ ಗಲ್ಲು ಶಿಕ್ಷೆಯನ್ನು ಪ್ರಶ್ನಿಸದೇ ಇದ್ದರೆ ಇದೇ ವರ್ಷ ಮರಣ ದಂಡನೆ ಶಿಕ್ಷೆಯನ್ನು ಜಾರಿಗೊಳಿಸಬಹುದಾಗಿದೆ ಎಂದರು.

ಕಸಬ್ ಕೂಡ ಅಫ್ಜಲ್ ಗುರು ಪ್ರಕರಣದ ಹಾದಿಯನ್ನೇ ಹಿಡಿಯಲಿದ್ದಾನೆಯೇ ಎಂಬ ಪ್ರಶ್ನೆಗೆ ಪಿಳ್ಳೈ ಮೇಲಿನಂತೆ ಉತ್ತರಿಸಿದ್ದರು.

ಅದೇ ಹೊತ್ತಿಗೆ ಸುಪ್ರೀಂ ಕೋರ್ಟ್‌ನಿಂದ ಐದು ವರ್ಷಗಳ ಹಿಂದೆಯೇ ಮರಣ ದಂಡನೆ ಶಿಕ್ಷೆ ಪಡೆದುಕೊಂಡಿರುವ ಸಂಸತ್ ದಾಳಿ ಭಯೋತ್ಪಾದಕ ಅಫ್ಜಲ್ ಗುರು ಕ್ಷಮಾದಾನ ಅರ್ಜಿ ಈಗ ಯಾವ ಹಂತದಲ್ಲಿದೆ ಎಂಬ ಪ್ರಶ್ನೆಗೆ, ಇದು ಸರಕಾರದ ಪರಿಗಣನೆಯಲ್ಲಿದೆ ಎಂದಷ್ಟೇ ಕಾರ್ಯದರ್ಶಿಯವರು ತಿಳಿಸಿದ್ದಾರೆ.

2008ರ ನವೆಂಬರ್ 26ರಂದು ಮುಂಬೈ ಮೇಲೆ ದಾಳಿ ನಡೆಸಿದ್ದ 10 ಭಯೋತ್ಪಾದಕರ ಪೈಕಿ ಬದುಕುಳಿದು ಜೀವಂತವಾಗಿ ಸೆರೆ ಸಿಕ್ಕಿರುವುದು ಕಸಬ್ ಮಾತ್ರ. ಈತನ ವಿಚಾರಣೆಯನ್ನು ವಿಶೇಷ ನ್ಯಾಯಾಲಯವು ಮುಕ್ತಾಯಗೊಳಿಸಿದ್ದು, ಮರಣ ದಂಡನೆ ಶಿಕ್ಷೆಯನ್ನು ವಿಧಿಸಿದೆ.

ಆದರೆ ವಿಶೇಷ ನ್ಯಾಯಾಲಯದ ಈ ತೀರ್ಪನ್ನು ಹೈಕೋರ್ಟ್ ಖಚಿತಪಡಿಸಬೇಕಿದೆ. ಇಲ್ಲಿ ಕಸಬ್ ಮೇಲ್ಮನವಿ ಸಲ್ಲಿಸುವ ಅವಕಾಶ ಹೊಂದಿದ್ದು, ನಂತರದ ಹಂತದಲ್ಲಿ ಸುಪ್ರೀಂ ಕೋರ್ಟ್‌ಗೂ ಹೋಗಬಹುದಾಗಿದೆ. ಬಳಿಕ ಸರಕಾರದ ಸಲಹೆಯಂತೆ ರಾಷ್ಟ್ರಪತಿಯವರು ಪ್ರಕರಣದ ಅಂತಿಮ ನಿರ್ಣಯ ಕೈಗೊಳ್ಳುತ್ತಾರೆ.

ಕಾನೂನು ಸಚಿವರು ಮತ್ತು ಗೃಹ ಕಾರ್ಯದರ್ಶಿಯವರು ಇದೇ ವರ್ಷ ಕಸಬ್‌ನನ್ನು ಗಲ್ಲಿಗೆ ಹಾಕಲು ಸಾಧ್ಯವಾಗಬಹುದು ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿರುವುದು ಹೌದಾದರೂ, ವಾಸ್ತವದಲ್ಲಿ ಇದು ಅಸಾಧ್ಯ. ಏಕೆಂದರೆ ಇನ್ನು ಮೂರು ತಿಂಗಳ ನಂತರವಷ್ಟೇ ಹೈಕೋರ್ಟ್ ಕಸಬ್ ಶಿಕ್ಷೆಯನ್ನು ಖಚಿತಪಡಿಸುವ ನಿರ್ಧಾರಕ್ಕೆ ಬರಲಿದೆ. ಬಳಿಕ ಕಸಬ್ ಮೇಲ್ಮನವಿ, ಸುಪ್ರೀಂ ವಿಚಾರಣೆ ಮುಂತಾದ ಕಾನೂನು ಪ್ರಕ್ರಿಯೆಗಳು ಒಂದು ವರ್ಷದಲ್ಲಿ ಮುಗಿಯುವ ಸಾಧ್ಯತೆಗಳಿಲ್ಲ. ಯಾವುದೇ ಮೇಲ್ಮನವಿ ಸಲ್ಲಿಸದೇ ಇರುವ ನಿರ್ಧಾರ ಕಲ್ಪನೆಗೂ ಮೀರಿದ್ದು ಎನ್ನುವುದು ಜನ ಸಾಮಾನ್ಯರೂ ತಿಳಿದಿರುವ ವಿಚಾರ.
ಸಂಬಂಧಿತ ಮಾಹಿತಿ ಹುಡುಕಿ