ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನಕ್ಸಲರ ವಿರುದ್ಧ ಮಿಲಿಟರಿ ಕ್ರಮ ಅನೈತಿಕ: ಚಿದಂಬರಂ (Military action | Naxals | P Chidambaram | India\)
Bookmark and Share Feedback Print
 
ಮಾವೋವಾದಿಗಳನ್ನು ಮಟ್ಟ ಹಾಕಲು ಮಿಲಿಟರಿ ಬಳಸುವುದನ್ನು ಸ್ಪಷ್ಟವಾಗಿ ತಳ್ಳಿ ಹಾಕಿರುವ ಕೇಂದ್ರ ಗೃಹ ಸಚಿವ ಪಿ. ಚಿದಂಬರಂ, ಇಲ್ಲಿ ನೈತಿಕ ಮತ್ತು ಚುನಾವಣಾ ವಿಚಾರಗಳ ಪ್ರಶ್ನೆಯಿರುವುದರಿಂದ ಸರಕಾರವು ನಿರಂಕುಶವಾಗಿ ವರ್ತಿಸದು ಎಂದು ತಿಳಿಸಿದ್ದಾರೆ.

ಎಲ್‌ಟಿಟಿಇಯನ್ನು ಮಣಿಸಲು ಶ್ರೀಲಂಕಾವು ತನ್ನ ಮಿಲಿಟರಿಯನ್ನು ಬಳಸಿರಬಹುದು. ಆದರೆ ಇದೇ ಪ್ರಶ್ನೆಯನ್ನು ಭಾರತದ ಕುರಿತು ಕೇಳುವುದಾದರೆ, ಖಂಡಿತಾ ನಾವು ಅದಕ್ಕೆ ಮುಂದಾಗುವುದಿಲ್ಲ. ನಮಗೆ ನೈತಿಕತೆಯ ಪ್ರಶ್ನೆಗಳಿರುವುದರಿಂದ ಇದು ಸಾಧ್ಯವಿಲ್ಲ ಎಂದರು.

ನಮ್ಮ ನಿಲುವು ಸ್ಪಷ್ಟವಾಗಿದೆ. ನಾವು ಸೇನೆ ಅಥವಾ ವಾಯುಪಡೆಯನ್ನು ಮಾವೋವಾದಿಗಳ ವಿರುದ್ಧದ ಹೋರಾಟಕ್ಕಾಗಿ ಬಳಸುವುದಿಲ್ಲ ಎಂದು ಸರಕಾರದ ನಿಲುವನ್ನು ಸ್ಪಷ್ಟಪಡಿಸಿದರು.

ಸರಕಾರಗಳು ಅಧಿಕಾರದಲ್ಲಿ ಉಳಿಯುವ ಮತ್ತು ಮತ್ತೆ ಚುನಾಯಿತರಾಗುವ ಅಗತ್ಯಗಳಿರುವುದರಿಂದ ನಿಯಮಾವಳಿಗಳನ್ನು ರೂಪಿಸುವಾಗ ಇಂತಹ ಸೂಕ್ಷ್ಮ ವಿಚಾರಗಳನ್ನು ಶಾಸಕಾಂಗವು ಗಮನಕ್ಕೆ ತೆಗೆದುಕೊಳ್ಳಬೇಕಾಗುತ್ತದೆ ಎಂದು ಹೇಳುವ ಮೂಲಕ ರಾಜಕೀಯ ಕಾರಣವೂ ನಕ್ಸಲ ವಿರುದ್ಧದ ಹೋರಾಟದಲ್ಲಿ ನಿಧಾನಗತಿ ಅನುಸರಿಸಲು ಕಾರಣ ಎಂದು ಪರೋಕ್ಷವಾಗಿ ಸಚಿವರು ಒಪ್ಪಿಕೊಂಡರು.

ಅಡ್ಮಿರಲ್ ರಾಜಾ ಮೆನನ್ ಮತ್ತು ಡಾ. ರಾಜೀವ್ ಕುಮಾರ್ ಅವರ 'ದಿ ಲಾಂಗ್ ವ್ಯೂ ಫ್ರಂ ಡೆಲ್ಲಿ' ಎಂಬ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಚಿದಂಬರಂ ಮಾತನಾಡುತ್ತಿದ್ದರು.

ಕಳೆದ ತಿಂಗಳು ಛತ್ತೀಸ್‌ಗಢದಲ್ಲಿ ಮಾವೋವಾದಿಗಳು 76 ಸಿಆರ್‌ಪಿಎಫ್ ಜವಾನರನ್ನು ಕೊಂದು ಹಾಕಿದ ಭೀಕರ ನರಮೇಧದ ನಂತರ ನಕ್ಸಲರನ್ನು ಮಟ್ಟ ಹಾಕಲು ಸೇನೆಯನ್ನು ಬಳಸಬೇಕೆಂಬ ಒತ್ತಡ ತೀವ್ರವಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ಗೃಹ ಸಚಿವರು ಸೇನೆ ಬಳಕೆ ಮಾಡುವ ಕುರಿತು ಯೋಚನೆ ಮಾಡಲಾಗುತ್ತದೆ ಎಂದಿದ್ದರು.

ಆದರೆ ಇದನ್ನು ರಕ್ಷಣಾ ಸಚಿವಾಲಯವು ತೀವ್ರವಾಗಿ ವಿರೋಧಿಸಿತ್ತು. ಆಂತರಿಕ ಭದ್ರತಾ ಸಮಸ್ಯೆಯಾದ ಮಾವೋವಾದಿಗಳನ್ನು ಮಟ್ಟ ಹಾಕಲು ಮಿಲಿಟರಿ ಅಥವಾ ವಾಯುಪಡೆಯನ್ನು ಬಳಸುವುದು ಸರಿಯಲ್ಲ ಎಂಬುದು ಸೇನಾ ಮುಖ್ಯಸ್ಥರಿಂದಲೂ ಆಕ್ಷೇಪ ಕೇಳಿ ಬಂದಿತ್ತು.
ಸಂಬಂಧಿತ ಮಾಹಿತಿ ಹುಡುಕಿ