ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮುಸ್ಲಿಮೇತರ ಮಹಿಳೆ ಮುಸ್ಲಿಮರನ್ನು ಮದುವೆಯಾಗುವಂತಿಲ್ಲ! (Non-Muslim women | Dilbar Habib Siddiqui | Khushboo | Sunita Jaiswal)
Bookmark and Share Feedback Print
 
ಮುಸ್ಲಿಮೇತರ ಮಹಿಳೆಯೊಬ್ಬಳು ಮುಸ್ಲಿಂ ಜತೆಗಿನ ಮದುವೆಗೂ ಮೊದಲು ಇಸ್ಲಾಂ ಧರ್ಮಕ್ಕೆ ಮತಾಂತರವಾಗದೇ ಇದ್ದರೆ ಆಕೆಯ ಜತೆಗಿನ ಮದುವೆ ಅನೂರ್ಜಿತ ಮತ್ತು ಇಸ್ಲಾಮಿಕ್ ಸಿದ್ಧಾಂತಗಳಿಗೆ ವಿರುದ್ಧ ಎಂದು ಪರಿಗಣಿಸಲಾಗುತ್ತದೆ ಎಂದು ಅಲಹಾಬಾದ್ ಉಚ್ಚ ನ್ಯಾಯಾಲಯ ಹೇಳಿದೆ.

ಒಂದು ಮದುವೆಯಾಗಿರುವ ಮುಸ್ಲಿಂ ಧರ್ಮೀಯ ವ್ಯಕ್ತಿಯೊಬ್ಬ ಹಿಂದೂ ಯುವತಿಯನ್ನು ಮತಾಂತರಗೊಳಿಸದೇ ಎರಡನೇ ಮದುವೆಯಾಗಿದ್ದ ಪ್ರಕರಣದಲ್ಲಿ ನ್ಯಾಯಾಲಯವು ಈ ಮಹತ್ವದ ತೀರ್ಪನ್ನು ನೀಡಿದೆ.

ಮೊದಲ ಪತ್ನಿಗೆ ವಿವಾಹ ವಿಚ್ಛೇದನ ನೀಡದೆ, ಆ ಮದುವೆಯಿಂದ ಹುಟ್ಟಿದ ಮಕ್ಕಳಿಗೆ ನ್ಯಾಯ ಸಮ್ಮತ ಪರಿಹಾರಗಳನ್ನು ನೀಡದೆ ಮುಸ್ಲಿಂ ವ್ಯಕ್ತಿಯೊಬ್ಬ ಎರಡನೇ ಮದುವೆಯಾದರೆ ಅದನ್ನು ಊರ್ಜಿತ ಎಂದು ಪರಿಗಣಿಸಲಾಗುವುದಿಲ್ಲ ಎಂದು ಇದೇ ಸಂದರ್ಭದಲ್ಲಿ ನ್ಯಾಯಾಲಯವು ಸ್ಪಷ್ಟಪಡಿಸಿದೆ.

ಅದು ಎರಡನೇ ಮದುವೆ...
ಖುಷ್ಬೂ ಎಂಬ ಯುವತಿಯನ್ನು ಕಳೆದ ವರ್ಷದ ಡಿಸೆಂಬರ್ 29ರಂದು ಅಲಹಾಬಾದ್ ನಿವಾಸಿ ದಿಲ್ಬಾರ್ ಹಬೀಬ್ ಸಿದ್ಧಿಕಿ ಎಂಬಾತ ಮದುವೆಯಾಗಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹುಡುಗಿಯ ತಾಯಿ ದಾಖಲಿಸಿದ್ದ ಪ್ರಕರಣವನ್ನು ವಜಾಗೊಳಿಸುವಂತೆ ಕೋರಿ ಸಿದ್ಧಿಕಿ ಸಲ್ಲಿಸಿದ ರಿಟ್ ಅರ್ಜಿಯನ್ನು ತಳ್ಳಿ ಹಾಕಿದ ನ್ಯಾಯಮೂರ್ತಿ ವಿನೋದ್ ಪ್ರಸಾದ್ ಮತ್ತು ರಾಜೇಶ್ ಚಂದ್ರ ಅವರನ್ನೊಳಗೊಂಡ ವಿಭಾಗೀಯ ಪೀಠವು ಈ ತೀರ್ಪನ್ನು ನೀಡಿತು.

ನನ್ನ ಮಗಳು ಅಪ್ರಾಪ್ತಳಾಗಿದ್ದಾಗ ಸಿದ್ಧಿಕಿ ಅವಳನ್ನು ಅಪಹರಿಸಿ ಬಲವಂತದಿಂದ ಮದುವೆಯಾಗಿದ್ದಾನೆ ಎಂದು ಸಿದ್ಧಿಕಿ ವಿರುದ್ಧ ಖುಷ್ಬೂ ತಾಯಿ ಸುನೀತಾ ಜೈಸ್ವಾಲ್ ಎಫ್ಐಆರ್ ದಾಖಲಿಸಿದ್ದರು.

ಆದರೆ ಇದನ್ನು ತಳ್ಳಿ ಹಾಕಿದ್ದ ಸಿದ್ಧಿಕಿ, ತಾನು ಖುಷ್ಬೂಳನ್ನು ಮದುವೆಯಾಗುವ ಸಂದರ್ಭದಲ್ಲಿ ಆಕೆ ಪ್ರಾಪ್ತ ವಯಸ್ಕಳಾಗಿದ್ದಳು ಎಂಬುದನ್ನು ತೋರಿಸುವ ಹೈಸ್ಕೂಲ್ ಪ್ರಮಾಣ ಪತ್ರ ಮತ್ತು ಇತರ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದ. ಅಲ್ಲದೆ ಈ ಮದುವೆಯು ಪರಸ್ಪರ ಒಪ್ಪಿಗೆಯಿಂದಲೇ ನಡೆದಿದೆ ಎಂದು ತನ್ನ ಅರ್ಜಿಯಲ್ಲಿ ವಾದಿಸಿದ್ದ.

ಮದುವೆಯಾಗಿದ್ದನ್ನು ತಿಳಿಸಬೇಕಿತ್ತು...
ಇಸ್ಲಾಂನಲ್ಲಿ ಬಹುಪತ್ನಿತ್ವಕ್ಕೆ ಅವಕಾಶವಿದೆ ಎಂಬ ಅಂಶವನ್ನು ಪರಿಗಣಿಸಿ ಸಿದ್ಧಿಕಿ ಮನವಿಯನ್ನು ಪರಿಶೀಲನೆ ನಡೆಸಿದ ನ್ಯಾಯಾಲಯವು, ತನಗೆ ಮೊದಲೇ ಮದುವೆಯಾಗಿದೆ ಮತ್ತು ಮೂರು ಮಕ್ಕಳನ್ನು ಹೊಂದಿದ್ದೇನೆ ಎಂಬ ಅಂಶವನ್ನು ಖುಷ್ಬೂಳಿಂದ ಮದುವೆಯ ಸಂದರ್ಭದಲ್ಲಿ ಮುಚ್ಚಿಟ್ಟಿದ್ದ ಎಂದು ಹೇಳಿತು.

ಇದಕ್ಕೂ ಮೊದಲು ನ್ಯಾಯಾಲಯದಲ್ಲಿ ಹಾಜರಾಗಿದ್ದ ಸಿದ್ಧಿಕಿ ಮೊದಲ ಪತ್ನಿ ತನ್ನ ಗಂಡ ಸಿದ್ಧಿಕಿ ವಿರುದ್ಧ ಆರೋಪಗಳ ಸುರಿಮಳೆಯನ್ನೇ ಸುರಿಸಿದ್ದಳು. ನನಗೆ ಮೂರು ಮಕ್ಕಳನ್ನು ಕರುಣಿಸಿದ ಸಿದ್ಧಿಕಿ ವಿಚ್ಛೇದನ ನೀಡದೆ ನಮ್ಮನ್ನು ತೊರೆದಿದ್ದು, ಬಲವಂತದಿಂದ ನಾವು ಅನಾಥರಂತೆ ಬದುಕುತ್ತಿದ್ದೇವೆ ಎಂದಿದ್ದಳು.

ಮುಸ್ಲಿಂ ಧರ್ಮಕ್ಕೆ ಮತಾಂತರ ಕಡ್ಡಾಯ...
ಮೊದಲ ಮದುವೆಯ ಮಾಹಿತಿ ನೀಡದ ಸಿದ್ಧಿಕಿಯು ಖುಷ್ಬೂಗೆ ವಂಚನೆ ಎಸಗಿದ್ದಾನೆ. ಮುಸ್ಲಿಂ ಮದುವೆಯೊಂದು ಊರ್ಜಿತವೆನಿಸಬೇಕಾದರೆ ವಧು ಮತ್ತು ವರ ಇಬ್ಬರೂ ಮುಸ್ಲಿಂ ಧರ್ಮೀಯರಾಗಿರಬೇಕು ಎಂದು ತಿಳಿಸಿದ ನ್ಯಾಯಾಲಯವು, 'ಮಹಿಳೆಯೊಬ್ಬಳು ಇಸ್ಲಾಮ್ ಧರ್ಮವನ್ನು ಅನುಸರಿಸುವ ತನಕ ಆಕೆಯನ್ನು ಮದುವೆಯಾಗಬಾರದು ಅಥವಾ ಬೇರೊಬ್ಬರು ಇಸ್ಲಾಂ ಧರ್ಮವನ್ನು ಅನುಸರಿಸುವ ತನಕ ಅವರಿಗೆ ಮುಸ್ಲಿಂ ಹುಡುಗಿಯರನ್ನು ಮದುವೆ ಮಾಡಿಕೊಡಬಾರದು..' ಎಂಬ ಪವಿತ್ರ ಕುರಾನ್‌ನ ಸಾಲನ್ನು ಉಲ್ಲೇಖಿಸಿತು.

ಪ್ರಸಕ್ತ ನಮ್ಮ ಮುಂದಿರುವ ಪ್ರಕರಣದಲ್ಲಿ ಷರತ್ತಿನ ಪಾಲನೆಯಾಗಿರದ ಕಾರಣ ಖುಷ್ಬೂ ಜತೆಗಿನ ಸಿದ್ಧಿಕಿಯ ಎರಡನೇ ಮದುವೆ ಊರ್ಜಿತವಲ್ಲ ಎಂದು ತೀರ್ಪು ನೀಡಿರುವ ನ್ಯಾಯಾಲಯವು ಸಿದ್ಧಿಕಿ ರಿಟ್ ಅರ್ಜಿಯನ್ನು ವಜಾಗೊಳಿಸಿ ಖುಷ್ಬೂಳನ್ನು ಹೆತ್ತವರ ವಶಕ್ಕೆ ಒಪ್ಪಿಸಿತು.
ಸಂಬಂಧಿತ ಮಾಹಿತಿ ಹುಡುಕಿ