ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 1971ರ ಭಾರತ-ಪಾಕಿಸ್ತಾನ ಯುದ್ಧ ದಾಖಲೆಗಳು ನಾಪತ್ತೆ..! (Navy | Pakistani submarine | PNS Ghazi | 1971 Indo-Pak war)
Bookmark and Share Feedback Print
 
1971ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ನಡೆದಿದ್ದ ಯುದ್ಧ ದಾಖಲೆಗಳು ಕಾಣಿಸುತ್ತಿಲ್ಲ. ಈ ಸಂದರ್ಭದಲ್ಲಿ ಪಾಕಿಸ್ತಾನದ ಘಾಜಿ ಎಂಬ ಜಲಾಂತರ್ಗಾಮಿ ನೌಕೆಯನ್ನು ಮುಳುಗಿಸಿದ ವಿವರಗಳು ಸೇರಿದಂತೆ ಭಾರತ ವಿಜಯಿಯಾಗಿದ್ದ ಸಮರದ ಬಹುತೇಕ ಎಲ್ಲಾ ದಾಖಲೆ ಪತ್ರಗಳೂ ಕಾಣೆಯಾಗಿವೆ.

ಪಾಕಿಸ್ತಾನದ ಹೆಡೆಮುರಿಕಟ್ಟಿದ ಈ ಐತಿಹಾಸಿಕ ಯುದ್ಧದಿಂದಾಗಿ ಬಾಂಗ್ಲಾದೇಶವು ಸ್ವಾತಂತ್ರ್ಯ ಪಡೆದುಕೊಂಡಿತ್ತು. ಇದಕ್ಕೆ ಸಂಬಂಧಪಟ್ಟ ದಾಖಲೆಗಳೇ ಈಗ ಭಾರತದಲ್ಲಿಲ್ಲ. ಅಂದರೆ ಅದನ್ನು ಯಾರೂ ಕದ್ದಿಲ್ಲ. ಅವುಗಳನ್ನು ನಾಶಪಡಿಸಲಾಗಿದೆ!

ಈ ಯುದ್ಧಕ್ಕೆ ಸಂಬಂಧಪಟ್ಟ ಎಲ್ಲಾ ದಾಖಲೆಗಳನ್ನು ಕೊಲ್ಕತ್ತಾದ ಈಸ್ಟರ್ನ್ ಕಮಾಂಡ್‌ನಲ್ಲಿಡಲಾಗಿತ್ತು. ಅವುಗಳನ್ನು 1971ರ ಯುದ್ಧದ ನಂತರ ನಾಶಪಡಿಸಲಾಗಿತ್ತು. ಆದರೆ ಇದು ಇದುವರೆಗೆ ಬಹಿರಂಗವಾಗಿರಲಿಲ್ಲ ಎಂದು ಸೇನೆಯ ಮೂಲಗಳು ತಿಳಿಸಿವೆ.

1971ರ ಡಿಸೆಂಬರ್ ನಾಲ್ಕರಂದು ಬಂಗಾಲ ಕೊಲ್ಲಿ ಸಾಗರದಲ್ಲಿ ವಿಶಾಖಪಟ್ಟಣ ಸಮೀಪ ಪಿಎನ್ಎಸ್ ಘಾಜಿ ಎಂಬ ಪಾಕಿಸ್ತಾನಿ ಜಲಾಂತರ್ಗಾಮಿ ನೌಕೆಯನ್ನು ಭಾರತದ ಐಎನ್ಎಸ್ ರಜಪೂತ್ ಮುಳುಗಿಸಿತ್ತು. ಇದರಲ್ಲಿದ್ದ 92 ಸಿಬ್ಬಂದಿಗಳ ಸಹಿತ ನೌಕೆ ಸಾಗರ ಪಾಲಾಗಿತ್ತು. ಇದರ ಕುರಿತು ವಿಸ್ತೃತ ವಿವರಣೆಗಳಿದ್ದ ದಾಖಲೆಗಳು ಕೂಡ ಭಾರತದ ಕೈಯಲ್ಲಿಲ್ಲ.

ಈಸ್ಟರ್ನ್ ಕಮಾಂಡ್‌ನಲ್ಲಿ ಕಾರ್ಯನಿರ್ವಹಿಸಿದ್ದ ಇಬ್ಬರು ಮಾಜಿ ಸೇನಾ ಮುಖ್ಯಸ್ಥರು ಮತ್ತು ಇತರ ಸೇನಾಧಿಕಾರಿಗಳ ಪ್ರಕಾರ ಯುದ್ಧದ ದಾಖಲೆಗಳನ್ನು ಉದ್ದೇಶಪೂರ್ವಕವಾಗಿಯೇ ನಾಶ ಮಾಡಲಾಗಿದೆ.

ಅವರ ಪ್ರಕಾರ ಇದು ನಡೆದಿರುವುದು ಲೆಫ್ಟಿನೆಂಟ್ ಜನರಲ್ ಜಗಜಿತ್ ಸಿಂಗ್ ಅರೋರಾ ಅವರು ಭಾರತೀಯ ಸೇನೆಯ ಈಸ್ಟರ್ನ್ ಫ್ರಂಟ್ ಕಮಾಂಡಿಂಗ್ ಆಫೀಸರ್ ಆಗಿದ್ದ ಸಂದರ್ಭದಲ್ಲಿ. ಇದು ನಿಜವೇ ಆಗಿದ್ದಲ್ಲಿ ಢಾಕಾದಲ್ಲಿ ಪಾಕಿಸ್ತಾನ ಸೇನೆ ಶರಣಾಗಲು ಕಾರಣರಾಗಿದ್ದ ಅರೋರಾ ಅವರ ಖ್ಯಾತಿಗೆ ಧಕ್ಕೆ ಬರಲಿದೆ ಎಂದು ಹೇಳಲಾಗುತ್ತಿದೆ.

13 ದಿನಗಳ ಯುದ್ಧವಿದು...
1971ರ ಭಾರತ-ಪಾಕ್ ಯುದ್ಧದಲ್ಲಿ ಭೂಸೇನೆ, ವಾಯುಸೇನೆ ಮತ್ತು ಜಲಸೇನೆ ಹೀಗೆ ಮೂರೂ ವಿಭಾಗಗಳಲ್ಲಿ ಯುದ್ಧ ಮಾಡಲಾಗಿತ್ತು. 13 ದಿನ ನಡೆದಿದ್ದ ಈ ಯುದ್ಧದಲ್ಲಿ ಪಾಕಿಸ್ತಾನವು ಸಂಪೂರ್ಣವಾಗಿ ಶರಣಾಗಿ ಒಪ್ಪಂದಕ್ಕೆ ಸಹಿ ಹಾಕಿತ್ತು.

ಡಿಸೆಂಬರ್ 3ರಿಂದ 16ರವರೆಗೆ ನಡೆದಿದ್ದ ಈ ಯುದ್ಧದಲ್ಲಿ ಭಾರತದ ಐದು ಲಕ್ಷ ಹಾಗೂ ಪಾಕಿಸ್ತಾನದ 3.65 ಲಕ್ಷ ಪಡೆಗಳು ಭಾಗವಹಿಸಿದ್ದವು. ಭಾರತದ ಕಡೆ 3,843 ಹಾಗೂ ಪಾಕಿಸ್ತಾನದ 9,000 ಮಂದಿ (ಯೋಧರೂ ಸೇರಿದಂತೆ) ಈ ಸಂದರ್ಭದಲ್ಲಿ ಸಾವನ್ನಪ್ಪಿದ್ದರು.

ಭಾರತವು ಒಂದು ಯುದ್ಧನೌಕೆ, ಒಂದು ನೌಕಾ ವಿಮಾನ ಹಾಗೂ 74 ಯುದ್ಧ ವಿಮಾನಗಳನ್ನು ಕಳೆದುಕೊಂಡಿದ್ದರೆ, ಪಾಕಿಸ್ತಾನವು ಎರಡು ಯುದ್ಧ ನೌಕೆ ನಾಶಕಗಳು, ಮೈನ್‌ಸ್ವೀಪರ್, ಜಲಾಂತರ್ಗಾಮಿ ನೌಕೆ ಮತ್ತು 10ಕ್ಕೂ ಹೆಚ್ಚು ಇತರ ಸಣ್ಣ ಹಡಗುಗಳನ್ನು ಭಾರತ ನಾಶಪಡಿಸಿತ್ತು.
ಸಂಬಂಧಿತ ಮಾಹಿತಿ ಹುಡುಕಿ