ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನನ್ನ ಜಾತಿಯ ಹೆಸರು 'ಭಾರತೀಯ': ಅಮಿತಾಬ್ ಬಚ್ಚನ್
(Amitabh Bachchan | Jaya Bhaduri | Abhishek Bachchan | Aishwarya Rai)
ಜಾತಿಯಾಧರಿತ ಜನಗಣತಿ ನಡೆಸಬೇಕೆಂಬ ಹಲವು ರಾಜಕೀಯ ಪಕ್ಷಗಳ ಒತ್ತಡಕ್ಕೆ ಕೇಂದ್ರ ಸರಕಾರ ಮಣಿಯುತ್ತಿರುವ ಲಕ್ಷಣಗಳು ಕಂಡು ಬರುತ್ತಿದ್ದಂತೆ ಪ್ರತಿಕ್ರಿಯೆ ನೀಡಿರುವ ಬಾಲಿವುಡ್ ಸ್ಟಾರ್ ಅಮಿತಾಬ್ ಬಚ್ಚನ್, ಜಾತಿ ವಿಭಾಗದಲ್ಲಿ ಏನು ನಮೂದಿಸಬೇಕು ಎಂಬ ಪ್ರಶ್ನೆ ಬಂದಾಗ ನನ್ನ ಸ್ಪಷ್ಟ ಉತ್ತರ 'ಭಾರತೀಯ' ಎಂದು ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ಬಚ್ಚನ್ ಮನೆಗೆ ಬಂದಿದ್ದ ಜನಗಣತಿ ತಂಡವು ಮನೆಯ ಇತರ ಎಲ್ಲಾ ವಿವರಗಳನ್ನು ಸಂಗ್ರಹಿಸಿತ್ತು. ಬಚ್ಚನ್ ನಿವಾಸ 'ಪ್ರತೀಕ್ಷಾ'ಕ್ಕೆ ಬಂದಿದ್ದ ಬಾಂಬೆ ಮಹಾನಗರ ಪಾಲಿಕೆ ಅಧಿಕಾರಿಗಳು ಹೆಸರು, ವಾಸಸ್ಥಳ, ವಯಸ್ಸು, ಮನೆಯಲ್ಲಿರುವವರ ಸಂಖ್ಯೆ, ಹುಟ್ಟಿದ ಸ್ಥಳ ಸೇರಿದಂತೆ ಹತ್ತು ಹಲವು ವಿವರಗಳನ್ನು ಪಡೆದುಕೊಂಡಿತ್ತು. ಆದರೆ ಜಾತಿ ಯಾವುದೆಂದು ಕೇಳಿರಲಿಲ್ಲ. ಇದಕ್ಕಿದ್ದ ಕಾರಣ ಸರಕಾರ ಇನ್ನೂ ಈ ಕುರಿತು ಯಾವುದೇ ಅಂತಿಮ ನಿರ್ಧಾರಕ್ಕೆ ಬರದೇ ಇರುವುದು.
ಆದರೆ ಅಮಿತಾಬ್ ಅವರಲ್ಲಿ ಜಾತಿ ಯಾವುದೆಂದು ಕೇಳಿದರೆ ಅದಕ್ಕೆ ಉತ್ತರ ಸಿದ್ಧವಾಗಿದೆ.
ಇತ್ತೀಚೆಗಷ್ಟೇ ಕೆಲವು ರಾಜಕಾರಣಿಗಳು ಎತ್ತುತ್ತಿರುವ ಈ ಜಾತಿಯೆಂಬ ಸೂಕ್ಷ್ಮ ವಿಚಾರದ ಕುರಿತು ಜನಗಣತಿ ತಂಡ ಯಾವುದೇ ಪ್ರಸ್ತಾಪ ಮಾಡದೆ ಎಚ್ಚರಿಕೆ ವಹಿಸಿತ್ತು. ಇದಕ್ಕಿರುವ ಕಾರಣ ಸರಕಾರದಿಂದ ಇನ್ನೂ ಯಾವುದೇ ಆದೇಶ ಬರದೇ ಇರುವುದು. ನಮ್ಮ ವ್ಯವಸ್ಥೆ ಯಾವ ನಿರ್ಧಾರವನ್ನು ತೆಗೆದುಕೊಂಡರೂ ಸರಿಯೇ, ಆ ಪ್ರಶ್ನೆಗೆ ನನ್ನ ಉತ್ತರ 'ಭಾರತೀಯ' ಎಂದು ಅವರಿಗೆ ತಿಳಿಸಿದ್ದೇನೆ ಎಂದು ತನ್ನ ಬಿಗ್‌ಅಡ್ಡಾ ಬ್ಲಾಗ್‌ನಲ್ಲಿ ಬಚ್ಚನ್ ಬರೆದುಕೊಂಡಿದ್ದಾರೆ.
ನನ್ನ ತಂದೆ ಹರಿವಂಶ ರಾಯ್ ಬಚ್ಚನ್ ಜಾತಿ ವ್ಯವಸ್ಥೆಯನ್ನು ಯಾವತ್ತೂ ನಂಬಿದವರಲ್ಲ. ಅದೇ ರೀತಿ ನಾವು ಕೂಡ. ಅವರು ಸಿಖ್ ಮಹಿಳೆಯನ್ನು (ತೇಜಿ ಬಚ್ಚನ್) ಮದುವೆಯಾಗಿದ್ದರು. ನಾನು ಬೆಂಗಾಲಿಯನ್ನು (ಜಯಾ ಬಾಧುರಿ), ನನ್ನ ಸಹೋದರ ಸಿಂಧಿಯನ್ನು (ರಮೋಲಾ), ನನ್ನ ಪುತ್ರಿ ಶ್ವೇತಾ ಪಂಜಾಬಿಯನ್ನು (ನಿಖಿಲ್ ನಂದಾ), ನನ್ನ ಪುತ್ರ ಅಭಿಷೇಕ್ ಮಂಗಳೂರು ಬಂಟ ಹುಡುಗಿಯನ್ನು (ಐಶ್ವರ್ಯಾ ರೈ) ಮದುವೆಯಾಗಿದ್ದಾರೆ ಎಂದು ಬಚ್ಚನ್ ವಿವರಣೆ ನೀಡಿದ್ದಾರೆ.
ಅದೇ ಹೊತ್ತಿಗೆ ತನ್ನ ತಂದೆ ಹರಿವಂಶ ರಾಯ್ ಬಚ್ಚನ್ ಅವರು, ತನ್ನ ಕುಟುಂಬವು ಮುಂದೆ ದೇಶದ ವಿವಿಧ ಭಾಗಗಳ ಜನರನ್ನು ಮದುವೆಯಾಗಬೇಕು ಎಂದು ಅಭಿಪ್ರಾಯಪಟ್ಟಿದ್ದರು ಎಂಬುದನ್ನು ತನ್ನ ಆತ್ಮಕಥೆಯಲ್ಲಿ ಬರೆದುಕೊಂಡಿದ್ದಾರೆ. ಹಾಗಾಗಿ ಇದುವರೆಗೆ ಆ ಸಂಪ್ರದಾಯ ಉಳಿದುಕೊಂಡು ಬಂದಿದೆ ಎಂದು ಬಚ್ಚನ್ ತಿಳಿಸಿದ್ದಾರೆ.
ಲೋಕಸಭೆಯ ವಿರೋಧ ಪಕ್ಷದ ಉಪ ನಾಯಕ ಗೋಪಿನಾಥ ಮುಂಡೆ, ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್, ಸಮಾಜವಾದಿ ವರಿಷ್ಠ ಮುಲಾಯಂ ಸಿಂಗ್ ಯಾದವ್ ಮತ್ತು ಜೆಡಿಯು ಅಧ್ಯಕ್ಷ ಶರದ್ ಯಾದವ್ ಸೇರಿದಂತೆ ಹಲವು ಮಂದಿ ಜನಗಣತಿಯಲ್ಲಿ ಜಾತಿಯನ್ನು ನಮೂದಿಸಬೇಕೆಂದು ಆಗ್ರಹಿಸುತ್ತಿದ್ದು, ಸರಕಾರ ಇನ್ನಷ್ಟೇ ಈ ಕುರಿತು ಸ್ಪಷ್ಟ ನಿರ್ಧಾರಕ್ಕೆ ಬರಬೇಕಿದೆ.