ಸಮಾಜವಾದಿ ಪಕ್ಷದ ವರಿಷ್ಠ ಮುಲಾಯಂ ಸಿಂಗ್ ಯಾದವ್ ಹಾಗೂ ರಾಷ್ಟ್ರೀಯ ಜನತಾದಳದ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿಯ ಕಾಲು ನೆಕ್ಕುವ 'ನಾಯಿ'ಯಂತೆ ವರ್ತಿಸುತ್ತಿದ್ದಾರೆ ಎಂದು ಭಾರತೀಯ ಜನತಾಪಕ್ಷದ ಅಧ್ಯಕ್ಷ ನಿತಿನ್ ಗಡ್ಕರಿ ಬಹಿರಂಗ ಸಭೆಯಲ್ಲಿ ಅವಾಚ್ಯ ಶಬ್ದ ಬಳಕೆ ಮೂಲಕ ವಾಗ್ದಾಳಿ ನಡೆಸಿ ಇದೀಗ ವಿವಾದಕ್ಕೆ ಈಡಾಗಿದ್ದಾರೆ.
ಚಂಡೀಗಢದಲ್ಲಿ ಬುಧವಾರ ನಡೆದ ರಾಲಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಗಡ್ಕರಿ, ಇತ್ತೀಚೆಗೆ ಬೆಲೆ ಏರಿಕೆಗೆ ಸಂಬಂಧಿಸಿದಂತೆ ಸಂಸತ್‌ನಲ್ಲಿ ಆಡಳಿತಾರೂಢ ಯುಪಿಎ ಸರ್ಕಾರದ ವಿರುದ್ಧ ಖಂಡನಾ ನಿರ್ಣಯ ಮಂಡಿಸುವ ವೇಳೆ ಈ ಇಬ್ಬರು ನಾಯಕರು ನಡೆದುಕೊಂಡ ವರ್ತನೆ ಬಗ್ಗೆ ಕಿಡಿಕಾರಿದರು.
ಬೆಲೆ ಏರಿಕೆ, ದುರಾಡಳಿತದ ಕುರಿತಂತೆ ಮುಲಾಯಂ ಸಿಂಗ್ ಮತ್ತು ಲಾಲೂ ಪ್ರಸಾದ್ ಸಿಂಹದ ತರ ಬೊಬ್ಬೆ ಹೊಡೆಯುತ್ತಾರೆ. ಆದರೆ ವಿಪರ್ಯಾಸವೆಂದರೆ ತದನಂತರ ಇವರು ಸೋನಿಯಾ ಮತ್ತು ಕಾಂಗ್ರೆಸ್‌ನ ಕಾಲು ನೆಕ್ಕುವ ನಾಯಿಯಂತೆ ವರ್ತಿಸುತ್ತಿದ್ದಾರೆ ಎಂದು ಮಾನಹಾನಿಕಾರಕ ಹೇಳಿಕೆ ನೀಡಿದ್ದರು.
ನಿತಿನ್ ಗಡ್ಕರಿಯ ಈ ಹೇಳಿಕೆ ಇದೀಗ ರಾಜಕೀಯ ವಲಯದಲ್ಲಿ ತೀವ್ರ ವಿವಾದದ ಬಿರುಗಾಳಿ ಎಬ್ಬಿಸಿದೆ. ಆ ನಿಟ್ಟಿನಲ್ಲಿ ಸಮಾಜವಾದಿ ಮತ್ತು ಆರ್‌ಜೆಡಿ ಪಕ್ಷದ ಮುಖಂಡರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಗಡ್ಕರಿ ಮೂರ್ಖತನದ ಹೇಳಿಕೆ ನೀಡಿದ್ದಾರೆ ಎಂದು ಕಿಡಿಕಾರಿರುವ ಲಾಲು ಮತ್ತು ಯಾದವ್, ಇದು ಅಸಂವಿಧಾನಿಕ ಶಬ್ದ ಬಳಕೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆಕ್ರೋಶಕ್ಕೆ ಕಾರಣವೇನು?: ಆಡಳಿತಾರೂಢ ಯುಪಿಎ ವಿರುದ್ಧ ಖಂಡನಾ ನಿರ್ಣಯ ಮಂಡಿಸಲು ಲಾಲೂ, ಯಾದವ್ ಹಾಗೂ ಬಹುಜನ ಸಮಾಜ ಪಕ್ಷ ನಮ್ಮೊಂದಿಗೆ ಕೈಜೋಡಿಸಿದ್ದವು. ಇದನ್ನು ಮಾಧ್ಯಮಗಳ ಎದುರು ಯುಪಿಎ ವಿರುದ್ಧ ಗರ್ಜಿಸಿದ್ದರು. ಈ ವಿಷಯದಲ್ಲಿ ಎಲ್ಲಾ ಪಕ್ಷಗಳು ನಮ್ಮೊಂದಿಗೆ ಇದ್ದವು ಎಂದು ನಾವು ನಂಬಿದ್ದೇವು.
ಆದರೆ ಬಳಿಕ ಈ ನಾಯಕರೆಲ್ಲ ಕೈಕೊಟ್ಟು ಬಿಟ್ಟರು ಎಂಬ ವಿಷಯವೇ ಗಡ್ಕರಿ ಆಕ್ರೋಶಕ್ಕೆ ಮುಖ್ಯ ಕಾರಣವಾಗಿತ್ತು. ಈ ಸಂದರ್ಭದಲ್ಲಿ ಕೆಲವರು ನನ್ನನ್ನು ಪ್ರಶ್ನಿಸಿದ್ದರು, ಯಾವೆಲ್ಲ ಪಕ್ಷಗಳು ಕಾಂಗ್ರೆಸ್‌ಗೆ ಬೆಂಬಲ ಇದೆ ಎಂದು, ಆಗ ನಾ ಹೇಳಿದ್ದೇ ಕೇವಲ ಕಾಂಗ್ರೆಸ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್(ಸಿಬಿಐ) ಮಾತ್ರ ಎಂದಿದ್ದೆ. ಯಾಕೆಂದರೆ ರಾಜಕೀಯ ವಿರೋಧಿಗಳನ್ನು ಮಟ್ಟಹಾಕಲು ಕಾಂಗ್ರೆಸ್ ಬಳಕೆ ಮಾಡುತ್ತಿರುವ ಅಸ್ತ್ರ ಸಿಬಿಐ. ಆದರೆ ಈ ನಾಯಕರು ತಮ್ಮ ಮೇಲಿನ ಆರೋಪವನ್ನು ಮುಚ್ಚಿಕೊಳ್ಳಲು ಕೊನೆಗೂ ಕಾಂಗ್ರೆಸ್ ಜೊತೆ ಕೈಜೋಡಿಸಿದ್ದರು ಎಂದು ಸಭೆಯಲ್ಲಿ ಕಿಡಿಕಾರಿದ್ದರು.
ಛೇ ನನ್ನದು ತಪ್ಪಾಯ್ತು, ನಾ ಹಾಗೆ ಹೇಳಿಲ್ಲ-ಗಡ್ಕರಿ: ಲಾಲೂ ಮತ್ತು ಯಾದವ್ ವಿರುದ್ಧ ಬಳಸಿದ ಪದ ಬಳಕೆಯನ್ನು ನಾನು ವಾಪಸ್ ಪಡೆಯುತ್ತೇನೆ, ಆ ಬಗ್ಗೆ ಕ್ಷಮೆಯಾಚಿಸುತ್ತೇನೆ. ನಿಜಕ್ಕೂ ನಾನು ವೈಯಕ್ತಿಕವಾಗಿ ನಾಯಿ ಎಂಬ ಪದ ಬಳಕೆ ಮಾಡಿಲ್ಲ ಎಂದು ಸಮಜಾಯಿಷಿ ನೀಡಿರುವ ನಿತಿನ್ ಗಡ್ಕರಿ, ನಾನು ಆ ಶಬ್ದವನ್ನು ನುಡಿಗಟ್ಟಿನ ನೆಲೆಯಲ್ಲಿ ಉದಾಹರಿಸಿದ್ದೇನೆ ಎಂದು ಸ್ಪಷ್ಟನೆ ನೀಡುವ ವಿವಾದ ಶಮನಕ್ಕೆ ಮುಂದಾಗಿದ್ದಾರೆ.
ನನ್ನ ಹೇಳಿಕೆಯಿಂದ ಯಾರ ಮನಸ್ಸಿಗೆ ನೋವಾಗಿದ್ರೆ ನಾನು ಕ್ಷಮೆಯಾಚಿಸುತ್ತೇನೆ, ಇದು ನಿಜಕ್ಕೂ ಉದ್ದೇಶಪೂರ್ವಕವಾಗಿ ಹೇಳಿದ ಮಾತಲ್ಲ ಎಂದು ತಾವು ಬಹಿರಂಗವಾಗಿ ಹೇಳಿಕೆ ನೀಡಿದ ಬೆನ್ನಲ್ಲೇ ಕ್ಷಮೆಯಾಚಿಸಿದ್ದರು.