ಕಾಮಿ ಸ್ವಾಮಿ ನಿತ್ಯಾನಂದನ ಹೈದರಾಬಾದ್ ಆಶ್ರಮಕ್ಕೆ ಇದೀಗ ಮತ್ತೊಮ್ಮೆ ದಾಳಿಯಾಗಿದೆ. ಇಲ್ಲಿನ ನಿತ್ಯಾನಂದನ ಆಶ್ರಮಕ್ಕೆ ಶಂಶಾಬಾದ್‌ನ ಸ್ಥಳೀಯರು ಬುಧವಾರ ದಾಳಿ ನಡೆಸಿದ್ದಾರೆ.
ಕಳೆದ ಮೂರು ತಿಂಗಳಲ್ಲಿ ಇದು ಮೂರನೇ ದಾಳಿಯಾಗಿದೆ. ಸುಮಾರು 4.5 ಎಕರೆ ಪ್ರದೇಶದಲ್ಲಿ ಹರಡಿಕೊಂಡಿರುವ ಆಶ್ರಮಕ್ಕೆ ಭೂಮಿಯನ್ನು ಸುಜಾತಾ ರೆಡ್ಡಿ ಎಂಬವರು ದಾನವಾಗಿ ನೀಡಿದ್ದರು. ಇವರು ಕಾಮಿ ಸ್ವಾಮಿ ನಿತ್ಯಾನಂದರ ಮಾಜಿ ಶಿಷ್ಯೆ.
ಆಶ್ರಮವನ್ನು ಸರಿಯಾಗಿ ನಿಭಾಯಿಸುತ್ತಿಲ್ಲ ಹಾಗೂ ಆಶ್ರಮದ ಸಿಬ್ಬಂದಿ ವರ್ತನೆಯೇ ಸರಿಯಾಗಿಲ್ಲ ಎಂದು ಆರೋಪಿಸಿ ಕೆಲವರು ಸುಜಾತಾ ರೆಡ್ಡಿಯವರ ಬಳಿ ದೂರು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಸುಜಾತಾ ರೆಡ್ಡಿ ಕೆಲವರು ಸ್ಥಳೀಯರೊಂದಿಗೆ ಆಶ್ರಮಕ್ಕೆ ದಾಳಿ ಮಾಡಿದ್ದಾರೆ. ಸುಜಾತಾ ರೆಡ್ಡಿ ಅವರು ತಮ್ಮ ಬೆಂಬಲಿಗರೊಂದಿಗೆ ತಮ್ಮ ಮೇಲೆ ದೈಹಿಕ ಹಲ್ಲೆಯನ್ನೂ ನಡೆಸಿದ್ದಾರೆಂದು ಆರೋಪಿಸಿ ಇದೇ ಸಂದರ್ಭ ಆಶ್ರಮದ ಸಿಬ್ಬಂದಿ ಆರ್‌ಜಿಐ ಏರ್‌ಪೋರ್ಟ್ ಪೊಲೀಸರಿಗೆ ದೂರು ನೀಡಿದರು. ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು ಗಲಾಟೆಯನ್ನು ಹತೋಟಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಈ ಸಂಬಂಧ ಯಾವುದೇ ಕೇಸು ದಾಖಲಾಗಿಲ್ಲ ಎಂದು ಇನ್ಸ್‌ಪೆಕ್ಟರ್ ಆರ್. ಸಂಜಯ್ ಕುಮಾರ್ ತಿಳಿಸಿದ್ದಾರೆ.