ಬಿಜೆಪಿಯ ಮಹಿಳಾ ಶಾಸಕಿಯರ ವಿರುದ್ಧ ಕಾಂಗ್ರೆಸ್‌ನ ಶಾಸಕರು ಅಶ್ಲೀಲ ಮಾತುಗಳಿಂದ ನಿಂದಿಸಿದ್ದ ದೂರನ್ನು ಆಲಿಸಿದ ಮಧ್ಯಪ್ರದೇಶದ ಅಸೆಂಬ್ಲಿ ಸ್ಪೀಕರ್ ಈಶ್ವರ್ ದಾಸ್ ರೋಹಾನಿ ಕುಸಿದು ಕುಳಿತದ್ದಲ್ಲದೇ, ಗಳಗಳನೆ ಅತ್ತ ಅಪರೂಪದ ಘಟನೆ ಬುಧವಾರ ನಡೆದಿತ್ತು.
ರಾಜ್ಯದ ಅಭಿವೃದ್ಧಿ ಕಾಮಗಾರಿ, ಭ್ರಷ್ಟಾಚಾರ, ಇಂಧನ ಸಮಸ್ಯೆ ಕುರಿತಂತೆ ಚರ್ಚೆ ನಡೆಸಲು ಮದ್ಯಪ್ರದೇಶದ ವಿಧಾನಸಭೆಯಲ್ಲಿ ವಿಶೇಷ ಅಧಿವೇಶನ ಕರೆಯಲಾಗಿತ್ತು. ಆದರೆ ಕಾಂಗ್ರೆಸ್ ಸದಸ್ಯರು ಕಲಾಪವನ್ನು ಬಹಿಷ್ಕರಿಸಿ, ಸದನದ ಹೊರಗೆ ಪ್ರತಿಭಟನೆ ನಡೆಸುತ್ತಿದ್ದರು. ಆದರೆ ಈ ಸಂದರ್ಭದಲ್ಲಿ ಬಿಜೆಪಿಯ ಮಹಿಳಾ ಶಾಸಕಿಯರು ಸಭೆಗೆ ತಡವಾಗಿ ಆಗಮಿಸಿದ್ದರು. ಆಗ ಪ್ರತಿಭಟನೆ ನಡೆಸುತ್ತಿದ್ದ ಕಾಂಗ್ರೆಸ್ ಶಾಸಕರು, ಮಹಿಳಾ ಶಾಸಕಿಯರನ್ನು ಗುರಿಯಾಗಿರಿಸಿಕೊಂಡು, ಅವರೆಲ್ಲಾ ತಮ್ಮ ಅಂದ ಹೆಚ್ಚಿಸಿಕೊಳ್ಳಲು ಬ್ಯೂಟಿ ಪಾರ್ಲರ್‌ನಲ್ಲಿಯೇ ತುಂಬಾ ಬ್ಯೂಸಿಯಾಗಿದ್ದಾರೆ ಎಂದು ಟಾಂಗ್ ಕೊಟ್ಟಿದ್ದರು. ಅಲ್ಲದೇ ಕೆಲವು ಮಾನಹಾನಿಕಾರಕ ಮಾತುಗಳಿಂದ ಮಹಿಳಾ ಶಾಸಕಿಯರನ್ನು ಚುಚ್ಚಿದ್ದರು.
ಇದರಿಂದ ಮನನೊಂದ ಬಿಜೆಪಿಯ ಮಹಿಳಾ ಶಾಸಕರಿಯರು ಸ್ಪೀಕರ್ ಈಶ್ವರ್ ದಾಸ್ ಅವರನ್ನು ಭೇಟಿಯಾಗಿ ದೂರು ನೀಡಿದ್ದರು. ಹೀಗೆ ಮಹಿಳಾ ಸದಸ್ಯರ ದೂರನ್ನು ಆಲಿಸುತ್ತಿದ್ದಾಗಲೇ, ಸ್ಪೀಕರ್ ಗಳಗಳನೆ ಕಣ್ಣೀರಿಟ್ಟ ಘಟನೆ ನಡೆಯಿತು. ಒಂದು ಹಂತದಲ್ಲಿ ಮಹಿಳಾ ಸದಸ್ಯರೇ ಆಘಾತಕ್ಕೊಳಗಾದರು.
ಆ ನಿಟ್ಟಿನಲ್ಲಿ ಗುರುವಾರದ ಕಲಾಪವನ್ನೂ ಕಾಂಗ್ರೆಸ್ ಸದಸ್ಯರು ಬಹಿಷ್ಕರಿಸಿ ಪ್ರತಿಭಟನೆ ನಡೆಸುತ್ತಿದ್ದಕ್ಕೆ ಸ್ಪೀಕರ್ ಯಾವುದೇ ರೂಲಿಂಗ್ ನೀಡಲು ತಿರಸ್ಕರಿಸಿದರು. ಕಾಂಗ್ರೆಸ್ ಶಾಸಕರು ನಡೆಸುತ್ತಿರುವ ಪ್ರತಿಭಟನೆ ಸಂವಿಧಾನ ಬಾಹಿರವಾದದ್ದು, ಅಲ್ಲದೇ ಆ ಪಕ್ಷ ತನ್ನ ಅಭಿಪ್ರಾಯ ವ್ಯಕ್ತಪಡಿಸಲು ಮುಕ್ತವಾಗಿದೆ. ಹಾಗಾಗಿ ಕಾಂಗ್ರೆಸ್ ನಡೆಸುತ್ತಿರುವ ಪ್ರತಿಭಟನೆಯನ್ನು ತಾವು ಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂದು ಸ್ಪೀಕರ್ ಈಶ್ವರ್ ದಾಸ್ ಸ್ಪಷ್ಟಪಡಿಸಿದ್ದಾರೆ.