ಬಾಯ್‌ಫ್ರೆಂಡ್ ಮೇಲಿನ ಕುರುಡು ವ್ಯಾಮೋಹಕ್ಕೆ ಬಲಿಬಿದ್ದು ನಿಮ್ಮ ಭವಿಷ್ಯವನ್ನು ಹಾಳುಮಾಡಿಕೊಳ್ಳಬೇಡಿ. ಅವರು ನೀಡುವ ಆಹ್ವಾನ, ವ್ಯವಹರಿಸುವ ಸಂದರ್ಭದಲ್ಲಿ ಹುಷಾರಾಗಿರಿ...ಹೀಗೆಂದು ಕಾಲೇಜು ಯುವತಿಯರಿಗೆ ಒರಿಸ್ಸಾ ಮಹಿಳಾ ಆಯೋಗ ಸಲಹೆಯೊಂದನ್ನು ನೀಡಿದೆ.
ಪ್ರತಿನಿತ್ಯ ಮಾಧ್ಯಮಗಳಲ್ಲಿ ವಂಚನೆ ಪ್ರಕರಣಗಳನ್ನು ಗಮನಿಸುತ್ತಿದ್ದರೂ ಕೂಡ, ಒರಿಸ್ಸಾದಲ್ಲಿ ಮೋಸ ಹೋಗುವವರ ಸಂಖ್ಯೆ ಏನೂ ಕಡಿಮೆಯಾಗುತ್ತಿಲ್ಲ, ಆ ನಿಟ್ಟಿನಲ್ಲಿ ಯುವತಿಯರು ಬಾಯ್‌ಫ್ರೆಂಡ್‌ಗಳಿಂದ ಮೋಸಕ್ಕೆ ಒಳಗಾಗುತ್ತಿರುವ ಪ್ರಕರಣ ಕೂಡ ಕಡಿಮೆಯಾಗಿಲ್ಲ, ಹಾಗಾಗಿ ಈ ಎಚ್ಚರಿಕೆ ನೀಡಿರುವುದಾಗಿ ಆಯೋಗ ಹೇಳಿದೆ.
ಬಾಯ್‌ಫ್ರೆಂಡ್‌ಗಳಿಂದ ವಂಚನೆಗೊಳಗಾಗುತ್ತಿರುವ ಪ್ರಕರಣದ ಬಗ್ಗೆ ಯುವತಿಯರಲ್ಲಿ ಅರಿವು ಮೂಡಿಸಲು ಒರಿಸ್ಸದಾದ್ಯಂತ ಆಂದೋಲನಾ ನಡೆಸಲಾಗುವುದು ಎಂದು ಆಯೋಗದ ಅಧ್ಯಕ್ಷೆ ಜ್ಯೋತಿ ಪಾಣಿಗ್ರಾಹಿ ತಿಳಿಸಿದ್ದಾರೆ.
ತನ್ನದೇ ಅಶ್ಲೀಲ ಭಂಗಿಯ ಸಿಡಿಯೊಂದು ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವುದನ್ನು ಕಂಡ 22ರ ಹರೆಯದ ಕಾಲೇಜು ಯುವತಿಯೊಬ್ಬಳು ಕಳೆ ವರ್ಷ ಕಟಕ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ತನ್ನ ಬಾಯ್‌ಫ್ರೆಂಡ್ ಒಬ್ಬನ ಜೊತೆಯಲ್ಲಿದ್ದಾಗ ಆತನೇ ಸೆರೆಹಿಡಿದ ಕೆಲವು ನಗ್ನ ಚಿತ್ರಗಳು ಸಿಡಿಯೊಂದರಲ್ಲಿ ಹರಿದಾಡುತ್ತಿರುವುದನ್ನು ಪತ್ತೆ ಹಚ್ಚಿದ ನಂತರ ಆಕೆ ಸಾವಿಗೆ ಶರಣಾಗಿದ್ದಳು. ನಂತರ ಆತನನ್ನು ಪೊಲೀಸರು ಬಂಧಿಸಿದ್ದರು.
ಬಾಯ್‌ಫ್ರೆಂಡ್‌ಗಳ ಇಂತಹ ಮೋಸದ ಜಾಲಕ್ಕೆ ಸಿಲುಕಿ ಮತ್ತೂ ಮೂರು ಮಂದಿ ಯುವತಿಯರು ಅಶ್ಲೀಲ ಸಿಡಿ ಪ್ರಕರಣದಲ್ಲಿ ಸಿಲುಕುವಂತಾಗಿತ್ತು. ಹುಡುಗಿಯರ ವಿಶ್ವಾಸ ಗಳಿಸಿದ ನಂತರ ಬಾಯ್‌ಫ್ರೆಂಡ್‌ಗಳು ಯುವತಿಯರ ನಗ್ನಚಿತ್ರಗಳನ್ನು ತೆಗೆದು ನಂತರ ಅದನ್ನು ಸಿಡಿ ರೂಪದಲ್ಲಿ ಮಾರಾಟ ಮಾಡುವ ಪ್ರವೃತ್ತಿ ಹೆಚ್ಚುತ್ತಿದೆ ಎಂದು ಮಹಿಳಾ ಆಯೋಗ ಆತಂಕ ವ್ಯಕ್ತಪಡಿಸಿದೆ.
ಹಾಗಾಗಿ ಕಾಲೇಜು ಯುವತಿಯರು ಇನ್ನು ಮುಂದೆ ಬಾಯ್‌ಫ್ರೆಂಡ್‌ಗಳ ಜೊತೆ ವ್ಯವಹರಿಸುವಾಗ ತುಂಬಾ ಎಚ್ಚರಿಕೆಯಿಂದ ಇರಬೇಕೆಂದು ಮಹಿಳಾ ಆಯೋಗ ಸಲಹೆ ನೀಡಿದೆ.