ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಜೈಲಿನಲ್ಲಿ ಪ್ರಾಣಭಯ!: ನಳಿನಿ ಸತ್ಯಾಸತ್ಯತೆ ಪರಿಶೀಲನೆಗೆ ಸಮಿತಿ (Nalini | Rajiv Gandhi assassination case | Vellore Jail | Tamil Nadu)
ಜೈಲಿನಲ್ಲಿ ಪ್ರಾಣಭಯ!: ನಳಿನಿ ಸತ್ಯಾಸತ್ಯತೆ ಪರಿಶೀಲನೆಗೆ ಸಮಿತಿ
ಚೆನ್ನೈ, ಗುರುವಾರ, 13 ಮೇ 2010( 17:58 IST )
WD
ನನ್ನ ಪ್ರಾಣಕ್ಕೆ ಅಪಾಯವಿದೆ ಎಂದಿದ್ದ ರಾಜೀವ ಗಾಂಧಿ ಹತ್ಯೆಯ ಆರೋಪದಡಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ನಳಿನಿಯ ಹೇಳಿಕೆಯಲ್ಲಿ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಇದೀಗ ವಿಶೇಷ ಜೈಲು ಅಧಿಕಾರಿಗಳನ್ನೊಳಗೊಂಡ ಸಮಿತಿಯನ್ನು ತಮಿಳುನಾಡು ಸರ್ಕಾರ ನೇಮಿಸಿದೆ.
ಕೊಯಂಬತ್ತೂರು ಜೈಲಿನ ಡಿಐಜಿ ಗೋವಿಂದರಾಜನ್ ಈ ಸಮಿತಿಯ ನೇತೃತ್ವ ವಹಿಸಿದ್ದು, ನಳಿನಿ ಈವರೆಗೆ ಮಾಡಿದ ಆರೋಪದಲ್ಲಿ ಹುರುಳಿದೆಯೇ ಇಲ್ಲವೇ ಎಂಬುದನ್ನು ಪತ್ತೆ ಹಚ್ಚಲಿದ್ದಾರೆ. ನಳಿನಿ ಕೆಲ ದಿನಗಳ ಹಿಂದೆ, ತನಗೆ ವೆಲ್ಲೂರಿನ ಮಹಿಳಾ ಜೈಲಿನಲ್ಲಿ ಅಧಿಕಾರಿಗಳು ವಿಪರೀತ ಕಿರುಕುಳ ನೀಡುತ್ತಿದ್ದಾರೆ ಎಂದು ದೂರು ನೀಡಿದ್ದರು.
ವಿಧಾನ ಸಭೆಯಲ್ಲಿ ಈ ಬಗ್ಗೆ ವಿವರ ನೀಡಿದ ಕಾನೂನು ಸಚಿವ ದುರೈ ಮುರುಗನ್, ನಳಿನಿಯ ಆರೋಪ ಸತ್ಯಾಸತ್ಯ ಪರಿಶೀಲನಾ ಸಮಿತಿಯಲ್ಲಿ ಮಹಿಳಾ ಅಧಿಕಾರಿಗಳೂ ಇದ್ದಾರೆ. ಹಾಗಾಗಿ ಇವರೂ ಕೆಲವು ವಿಚಾರಗಳ ಕೂಲಂಕುಷ ತನಿಖೆ ನಡೆಸಲಿದ್ದಾರೆ. ಶೀಘ್ರದಲ್ಲೇ ಸಮಿತಿ ವರದಿ ನೀಡಲಿದ್ದು, ವರಧಿಯ ಆಧಾರದಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ಕೆಲ ದಿನಗಳ ಹಿಂದಷ್ಟೇ ನಳಿನಿ ಜೈಲಿನ ಎಡಿಜಿಪಿ ಕೆ.ಆರ್.ಶ್ಯಾಮಸುಂದರ್ ಅವರಿಗೆ ದೂರು ನೀಡಿದ್ದರು. ತನಗೆ ನೀಡುವ ಆಹಾರದಲ್ಲಿ ವಿಷವನ್ನೂ ಹಾಕಿ ನನ್ನನ್ನು ಕೊಲ್ಲಲು ಪ್ರಯತ್ನಿಸಿದ್ದರು ಎಂದೂ ನಳಿನಿ ದೂರಿನಲ್ಲಿ ವಿವರಿಸಿದ್ದರು. ಕಳೆದ ತಿಂಗಳು ತನ್ನ ಮೊಬೈಲಿನಿಂದಲೂ ಅಧಿಕಾರಿಗಳು ಏನೋ ಮಾಹಿತಿಗಳನ್ನು ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದೂ ಆಕೆ ತನ್ನ ದೂರಿನ ಪತ್ರದಲ್ಲಿ ಬರೆದಿದ್ದಾರೆ.
ಆದರೆ ಮೇ 10ರಂದು ಆಕೆಯ ದೂರಿನ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಸರ್ಕಾರ, ಆಕೆ ತನ್ನ ಮೊಬೈಲ್ ಫೋನಿನ ಮೂಲಕ ಶ್ರೀಲಂಕಾ ಹಾಗೂ ಇಂಗ್ಲೆಂಡ್ ದೇಶಗಳಿಗೆ ಕರೆ ಮಾಡಲು ಪ್ರಯತ್ನಿಸಿದ್ದಳು. ಈ ಹಿನ್ನೆಲೆಯಲ್ಲಿ ಆಕೆಯ ಮೊಬೈಲನ್ನು ವಶಪಡಿಸಿಕೊಳ್ಳಲಾಗಿತ್ತು ಎಂದು ಸ್ಪಷ್ಟಪಡಿಸಿದೆ.