ನೇಣಿಗೇರಿಸಲು ವಧಾಗಾರರೇ ಈಗಿಲ್ಲ ಎಂಬ ಪರಿಸ್ಥಿತಿಯನ್ನು ಕೇಂದ್ರ ಸರ್ಕಾರವೇ ಒಪ್ಪಿಕೊಳ್ಳುತ್ತಿರುವ ಸಂದರ್ಭದಲ್ಲಿ ತಾನೊಬ್ಬ ವಧಾಗಾರನಾಗಬೇಕೆಂದು ಕನಸು ಹೊತ್ತು ವರ್ಷಾನುಗಟ್ಟಲೆ ಕಾದು ಕೂತಿರುವ ಜಿತೇಂದ್ರನ ಕಥೆಯಿದು.
ಎಲ್ಲರಿಗೂ ತಾನು ಭವಿಷ್ಯದಲ್ಲಿ ಹಾಗಾಗಬೇಕು, ಹೀಗಾಗಬೇಕು ಎಂದು ಕನಸು ಕಾಣುತ್ತಿರುವ ಹಾಗೆ ಜಿತೇಂದ್ರ ಅವರಿಗೊಂದು ವಿಕ್ಷಿಪ್ತ ಕನಸಿದೆ. ಆದರೆ ಆ ಕನಸು ಇನ್ನೂ ನನಸಾಗಿಲ್ಲ. ಆದರೆ ಇನ್ನೂ ಕನಸು ಕಾಣುತ್ತಲೇ ಇದ್ದಾರೆ. ಅದು ಅಂತಿಂಥ ಕನಸಲ್ಲ. ಮರಣ ದಂಡನೆ ಶಿಕ್ಷೆಗೊಳಗಾಗಿ ಜೈಲಿನಲ್ಲಿ ನೇಣುಕುಣಿಕೆಗೆ ತಲೆಯೊಡ್ಡುವ ಅಪರಾಧಿಗೆ ನೇಣಿಗೇರಿಸುವ ಕೆಲಸ!
ಹೌದು. ಓಲ್ಡ್ ಡೆಲ್ಲಿ ಪೊಲೀಸ್ ಸ್ಟೇಷನ್‌ನ ಹೋಂಗಾರ್ಡ್ ಜಿತೇಂದ್ರ ಸಿಂಗ್ ಎಂಬವರೀಗ ತನಗೆ ನೇಣುಗಂಬಕ್ಕೇರಿಸುವ ಕಲೆ ಗೊತ್ತು. ನಾನೇ ಕಸಬ್‌ನನ್ನು ನೇಣಿಗೇರಿಸುವ ಕೆಲಸ ಮಾಡುತ್ತೇನೆ ಎಂಬ ಕನಸು ಅವರದ್ದು. ಕಾನೂನು ಸಚಿವ ವೀರಪ್ಪ ಮೊಯಿಲಿ ಇತ್ತೀಚೆಗೆ ಒಂದು ವರ್ಷದೊಳಗೆ ಕಸಬ್‌ನನ್ನು ನೇಣಿಗೇರಿಸಲಾಗುತ್ತದೆ ಎಂದಿರುವ ಸಂದರ್ಭ ಕೇಂದ್ರ ಸರ್ಕಾರ ಇಂದು ಮರಣದಂಡನೆ ಶಿಕ್ಷೆಗೊಳಗಾದ ಕೈದಿಗಳನ್ನು ನೇಣಿಗೇರಿಸಲು ಯಾರೂ ಮುಂದೆ ಬರುತ್ತಿಲ್ಲ ಎಂದು ಕೈಚೆಲ್ಲಿತ್ತು.
29ರರ ಹರೆಯದ ಜಿತೇಂದ್ರ, ನನಗೆ ನೇಣುಗಂಬಕ್ಕೇರಿಸುವ ಕಲೆಯನ್ನು ನನ್ನ ಗುರೂಜಿ ಹೇಳಿಕೊಟ್ಟಿದ್ದಾರೆ. ನನಗೆ ಈ ಬಗ್ಗೆ ಎಲ್ಲ ರೀತಿಯಲ್ಲೂ ತರಬೇತಿಯಾಗಿದೆ. ಆದರೆ ನನ್ನ ಗುರು ಯಾರು ಅಂತ ಮಾತ್ರ ಹೇಳೋದಿಲ್ಲ ಎಂದು ಹೇಳಿದ್ದಾರೆ.
ಜೀವನದಲ್ಲಿರುವ ಗುರಿ ಏನು ಅಂದರೆ ಈತ ತಾನೊಬ್ಬ ನೇಣಿಗೇರಿಸುವ ವಧಾಗಾರನಾಗಬೇಕು ಎನ್ನುತ್ತಾರೆ. ತಪ್ಪು ಮಾಡಿದವರಿಗೆ ನೀಡಿದ ಶಿಕ್ಷೆಯನ್ನು ಸಾಕಾರಗೊಳಿಸಲು ನನಗೆ ಹೆಮ್ಮೆಯಿದೆ. ಆದರೆ ನನಗಿನ್ನೂ ವಧಾಗಾರನ ಕೆಲಸ ಸಿಕ್ಕಿಲ್ಲ. ಕಸಬ್‌ನನ್ನು ನೇಣಿಗೇರಿಸುವ ಮೂಲಕ ನನ್ನ ವೃತ್ತಿ ಆರಂಭವಾಗಲಿ ಎಂಬ ಆಸೆಯಿದೆ ಎನ್ನುತ್ತಾರೆ ಈ ಜಿತೇಂದ್ರ.
ಈಗಾಗಲೇ ಈ ಜಿತೇಂದ್ರ ತಾನೊಬ್ಬ ವಧಾಗಾರನಾಗಬೇಕೆಂಬ ಕನಸು ಹೊತ್ತು ದೆಹಲಿ ರಾಜ್ಯಪಾಲರಿಗೆ ಪತ್ರವನ್ನೂ ಬರೆದಿದ್ದಾರೆ. ನನಗೆ ವಧಾಗಾರನ ಕೆಲಸವೆಂದರೆ ತುಂಬ ಪ್ರೀತಿ. ದೇಶಕ್ಕೆ ಅನ್ಯಾಯ ಮಾಡಿದ ಭಯೋತ್ಪಾದಕರನ್ನು ನೇಣಿಗೇರಿಸುವುದನ್ನು ನಾನು ದೇಶಸೇವೆ ಎಂದುಕೊಳ್ಳುತ್ತೇನೆ. ಹಾಗಾಗಿ ನಾನು ಈ ಕೆಲಸವನ್ನು ತುಂಬ ಪ್ರೀತಿಸುತ್ತೇನೆ. ಆದರೆ ನನಗಿನ್ನೂ ಈ ಕೆಲಸ ದೊರೆತಿಲ್ಲ. ದೊರೆತರೆ ಮುಂಬೈ ಸ್ಫೋಟದ ಆರೋಪಿ ಅಜ್ಮಲ್ ಕಸಬ್ ಅವರನ್ನು ಮೊದಲು ನೇಣಿಗೇರಿಸುವ ಮೂಲಕ ನನ್ನ ಕೆಲಸ ಆರಂಭಿಸಬೇಕೆಂಬ ಆಸೆಯಿದೆ. ಈಗಾಗಲೇ ನಾನು ಈ ಹಿನ್ನೆಲೆಯಲ್ಲಿ ತಿಹಾರ್ ಜೈಲಿನ ಪ್ರಧಾನ ನಿರ್ದೇಶಕರಲ್ಲಿ ಮಾತನಾಡಿದರೂ ಅವರು ಕೆಲಸ ಖಾಲಿ ಇಲ್ಲ ಎಂದರು ಎನ್ನುತ್ತಾರೆ ಜಿತೇಂದ್ರ.
2004ರಲ್ಲೇ ಈ ಜಿತೇಂದ್ರ ತಾನೊಬ್ಬ ವಧಾಗಾರನಾಗಬೇಕೆಂಬ ಕನಸು ಹೊತ್ತಿದ್ದೇನೆಂದು ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದರು. ಆದರೆ ಆ ಪತ್ರ ನಿಜಕ್ಕೂ ರಾಷ್ಟ್ರಪತಿಗಳಿಗೆ ತಲುಪಿದೆಯೋ ಇಲ್ಲವೋ ಎಂದೇ ಗೊತ್ತಿಲ್ಲ ಎಂದು ಆಕಾಶ ನೋಡುತ್ತಾರೆ.
ಕಸಬ‌್‌ನನ್ನು ಆದಷ್ಟು ಬೇಗ ನೇಣಿಗೇರಿಸಬೇಕು. ಹಾಗೆ ಮಾಡುವ ಮೂಲಕ ಭಯೋತ್ಪಾದಕರಿಗೆ ನಾವು ಭಾರತೀಯರು ಪ್ರಮುಖ ಸಂದೇಶ ನೀಡಿದಂತಾಗುತ್ತದೆ. ಭಯೋತ್ಪಾದಕರ ವಿರುದ್ಧ ಸೆಟೆದು ನಿಂತ ಸಂಕೇತವಾಗುತ್ತದೆ ಎಂದು ಅಭಿಪ್ರಾಯ ಪಡುತ್ತಾರೆ ಈ ಜಿತೇಂದ್ರ.