ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಗಡ್ಗರಿ ಕ್ಷಮೆ ಯಾರಿಗ್ಬೇಕು; ತಕ್ಕ ಪಾಠ ಕಲಿಸ್ತೇವೆ: ಲಾಲೂ (Nitin Gadkari | Sonia | Lalu Prasad | Mulayam Singh | BJP)
ಬಹಿರಂಗ ಸಭೆಯಲ್ಲಿ ಅವಹೇಳನಕಾರಿ ಮಾತುಗಳನ್ನಾಡಿದ್ದಕ್ಕೆ ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್ ಗಡ್ಕರಿ ಅವರು ಎರಡು ಬಾರಿ ಕ್ಷಮೆಯಾಚಿಸಿದ್ದರೂ ಕೂಡ, ಆರ್‌ಜೆಡಿ ನಾಯಕ ಲಾಲೂ ಪ್ರಸಾದ್ ಯಾದವ್ ಮತ್ತು ಸಮಾಜವಾದಿ ಪಕ್ಷದ ಮುಲಾಯಂ ಸಿಂಗ್ ಯಾದವ್ ಕ್ಷಮೆಯನ್ನು ತಿರಸ್ಕರಿಸಿ, ತಾತ್ವಿಕ ರೀತಿಯಲ್ಲೇ ಗಡ್ಕರಿಗೆ ತಕ್ಕ ಪಾಠ ಕಲಿಸುವುದಾಗಿ ಗುಡುಗಿದ್ದಾರೆ.
ಕಾಂಗ್ರೆಸಿಗರನ್ನು ಬಾಯಿಗೆ ಬಂದಂತೆ ಬಯ್ಯುವುದನ್ನೇ ಭಾರತೀಯ ಜನತಾ ಪಕ್ಷ ನಿತ್ಯ ಕಾಯಕವನ್ನಾಗಿ ಮಾಡಿಕೊಂಡಿದೆ. ಆದರೆ, ನಾನು ಗಡ್ಗರಿಯ ಕಳಪೆ ಕ್ಷಮೆಯಾಚನೆಯನ್ನು ಕಿವಿಗೆ ಹಾಕಿಕೊಳ್ಳಲಾರೆ. ಗಡ್ಗರಿಯ ಬೈಗುಳ ಮಾನಹಾನಿಕರವಾದದ್ದು ಎಂದು ಲಾಲು ಕಿಡಿಕಾರಿದ್ದಾರೆ.
ಅಲ್ಲದೇ ಈ ಹಿಂದೆ ಬಿಜೆಪಿಯ ಯಾವ ಅಧ್ಯಕ್ಷರೂ ನಮ್ಮನ್ನು ಇಷ್ಟು ಕೀಳುಮಟ್ಟದ ಶಬ್ದ ಉಪಯೋಗಿಸಿ ಬೈದಿಲ್ಲ, ಆಡ್ವಾಣಿಯಂಥ ಹಿರಿಯರನ್ನು ನಾವು ಹಲವು ಬಾರಿ ಟೀಕಿಸಿದ್ದರೂ ಕೂಡ ಅವರು ಇಂಥ ಪದ ಬಳಕೆ ಮಾಡಿಲ್ಲ. ಹಾಗಾಗಿ ಗಡ್ಗರಿಯ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸುವುದಾಗಿ ಲಾಲೂ ಎಚ್ಚರಿಕೆ ನೀಡಿದ್ದಾರೆ.
ಚಂಡೀಗಢದಲ್ಲಿ ನಡೆದ ರಾಲಿಯೊಂದರಲ್ಲಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಗಡ್ಗರಿ, ಸಂಸತ್‌ನಲ್ಲಿ ಬೆಲೆ ಏರಿಕೆ ಕುರಿತಂತೆ ಖಂಡನಾ ನಿರ್ಣಯ ಮಂಡಿಸುವ ವಿಚಾರದ ಪ್ರಸ್ತಾಪದ ಸಂದರ್ಭದಲ್ಲಿ ಲಾಲು ಮತ್ತು ಮುಲಾಯಂ ಸಿಂಹಗಳಂತೆ ಘರ್ಜಿಸಿದ್ದರು. ಆದರೆ ನಂತರ ಖಂಡನಾ ನಿರ್ಣಯ ಮಂಡಿಸುವ ವೇಳೆ ನಾಯಿಗಳಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಮತ್ತು ಕಾಂಗ್ರೆಸ್‌ನ ಪಾದ ನೆಕ್ಕಲು ಬಾಗಿದರು ಎಂದು ವಾಗ್ದಾಳಿ ನಡೆಸಿದ್ದರು.