ನವಜಾತ ಶಿಶು ಹುಟ್ಟಿದ ಕೂಡಲೇ ಅದು ಸಾವನ್ನಪ್ಪಿದೆ ಎಂದು ವೈದ್ಯ ಮಹಾಶಯ ಘೋಷಿಸಿ, ಅದನ್ನು ಕಸದ ತೊಟ್ಟಿಗೆ ಎಸೆದಿರುವ ಆಘಾತಕಾರಿ ಘಟನೆ ಒರಿಸ್ಸಾ ರಾಜಧಾನಿಯ ಭುವನೇಶ್ವರದ ಪ್ರತಿಷ್ಠಿತ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ! ಆದರೆ ಆಸ್ಪತ್ರೆಯ ಪರಿಚಾರಕಿಯೊಬ್ಬಳು ತೊಟ್ಟಿಯಲ್ಲಿದ್ದ ಮಗು ಜೀವಂತವಾಗಿರುವುದನ್ನು ಪತ್ತೆ ಹಚ್ಚಿ ಅದನ್ನು ರಕ್ಷಿಸಿದ್ದಾಳೆ.
ಘಟನೆಯ ವಿವರ: ಭುವನೇಶ್ವರದ ಸರ್ಕಾರಿ ಆಸ್ಪತ್ರೆಯಲ್ಲಿ ಮಗು ಜನಿಸಿದ ತಕ್ಷಣವೇ ವೈದ್ಯರು ಮತ್ತು ನರ್ಸ್ ಸೇರಿ, ಈ ಮಗು ಸತ್ತು ಹೋಗಿರುವುದಾಗಿ ಘೋಷಿಸಿದ್ದರು. ಅಲ್ಲದೇ ಮಗುವಿನ ದೇಹದಿಂದ ವಾಸನೆ ಬರುತ್ತಿದೆ ಎಂದಿದ್ದ. ನಂತರ ನರ್ಸ್ ಮಗುವನ್ನು ಆಸ್ಪತ್ರೆಯ ಆಪರೇಶನ್ ಕೋಣೆ ಸಮೀಪದ ಕಸದ ತೊಟ್ಟಿಗೆ ಎಸೆದು ಬಂದಿದ್ದಳು!
ಅಚ್ಚರಿ ಎಂಬಂತೆ, ಕುತೂಹಲದಿಂದ ಆಸ್ಪತ್ರೆಯ ಪರಿಚಾರಕಿಯೊಬ್ಬಳು ಕಸದ ತೊಟ್ಟಿ ಬಳಿ ಹೋಗಿ ಮಗುವನ್ನು ಗಮನಿಸಿದ್ದಾಳೆ, ಆ ಸಂದರ್ಭದಲ್ಲಿ ಮಗು ಉಸಿರಾಡುತ್ತಿತ್ತು. ಕೂಡಲೇ ಮಗುವನ್ನು ಎತ್ತಿಕೊಂಡಾಗ ಮಗು ಕೂಗಲು ಆರಂಭಿಸಿತ್ತು ಎಂದು ಲತಾ ಪ್ರಧಾನ್ ತಿಳಿಸಿದ್ದಾಳೆ.
'ನಿನ್ನ ಮಗು ಸತ್ತು ಹೋಗಿದೆ ಅಂತ ನರ್ಸ್ ಬಂದು ಹೇಳಿದಾಗ, ನಾನು ಹೇಳಿದೆ ಮಗುವಿನ ಮೃತ ದೇಹವನ್ನಾದರೂ ನನಗೆ ಕೊಡಿ ಎಂದು ಬೇಡಿಕೊಂಡೆ ಆದರೆ ನನ್ನ ಮನವಿಗೆ ಆಕೆ ಕಿವಿಗೊಡಲೇ ಇಲ್ಲ ಎಂದು ಮಗುವಿನ ತಾಯಿ ಪ್ರಮೀಳಾ ದಾಲೈ ಹೇಳಿದ್ದಾರೆ. ಒಟ್ಟಾರೆ ನನಗೆ ಮಗು ಬೇಕು, ಅದೇ ರೀತಿಯಲ್ಲಿ ವೈದ್ಯನಿಗೆ ಶಿಕ್ಷೆಯಾಗಬೇಕೆಂದು ಆಕ್ರೋಶ ವ್ಯಕ್ತಪಡಿಸಿದ್ದಾಳೆ.
ಇದೀಗ ಕಾಲು ಮುರಿತಕ್ಕೊಳಗಾಗಿರುವ ಮಗು ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಕುರಿತಂತೆ ರಾಜ್ಯ ಸರ್ಕಾರ ತನಿಖೆಗೆ ಆದೇಶ ನೀಡಿದೆ. ವೈದ್ಯನನ್ನು ವರ್ಗಾಯಿಸುವ ಸಾಧ್ಯತೆ ಇದೆ ಎಂದು ಆಸ್ಪತ್ರೆಯ ಹಿರಿಯ ವೈದ್ಯರೊಬ್ಬರು ತಿಳಿಸಿದ್ದಾರೆ.
ಹೌದು ನಮ್ಮ ವೈದ್ಯರಿಂದ ಅಚಾತುರ್ಯ ನಡೆದುಹೋಗಿದೆ ಎಂಬುದನ್ನು ಆಸ್ಪತ್ರೆಯ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ. ಆದರೆ ಮಗುವನ್ನು ಯಾವತ್ತೂ ಈ ರೀತಿ ಕಸದ ತೊಟ್ಟಿಗೆ ಎಸೆದಿಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ.
ಘಟನೆ ಕುರಿತು ತಪ್ಪೆಸಗಿದ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ರಾಜ್ಯ ಸರ್ಕಾರಕ್ಕೆ ವಿವರಣೆ ನೀಡಲಾಗುವುದು ಎಂದು ಆಸ್ಪತ್ರೆಯ ಮುಖ್ಯ ಅಧಿಕಾರಿ ಗಂಗಾಧರ್ ರಾಥ್ ತಿಳಿಸಿದ್ದಾರೆ.