ದಕ್ಷಿಣ ಭಾರತದ ಖ್ಯಾತ ಬಹುಭಾಷಾ ನಟಿ ಖುಷ್ಬೂ ಇದೀಗ ರಾಜಕೀಯ ರಂಗ ಪ್ರವೇಶಿಸಲು ನಿರ್ಧರಿಸಿದ್ದು, ಆ ನಿಟ್ಟಿನಲ್ಲಿ ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಸೇರುವುದು ಬಹುತೇಕ ಖಚಿತವಾಗಿದೆ.
ಡಿಎಂಕೆ ಸೇರ್ಪಡೆ ಹಿನ್ನೆಲೆಯಲ್ಲಿ ಪಕ್ಷದ ವರಿಷ್ಠ, ಹಾಲಿ ಮುಖ್ಯಮಂತ್ರಿ ಎಂ.ಕರುಣಾನಿಧಿ ಅವರನ್ನು ಶೀಘ್ರದಲ್ಲೇ ಭೇಟಿಯಾಗಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲಿದ್ದಾರೆ ಎಂದು ಖುಷ್ಬೂ ಆಪ್ತವಲಯದ ಮೂಲಗಳು ಶುಕ್ರವಾರ ಖಚಿತಪಡಿಸಿವೆ.
ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಸೇರಲು ಈಗಾಗಲೇ ಪಕ್ಷದ ಹಿರಿಯ ಮುಖಂಡರೊಂದಿಗೆ ಎರಡು ಸುತ್ತಿನ ಮಾತುಕತೆ ನಡೆಸಲಾಗಿದೆ. ಅಲ್ಲದೇ ಮತ್ತೊಂದು ಸುತ್ತಿನ ಚರ್ಚೆ ಇನ್ನೆರಡು ದಿನಗಳಲ್ಲಿ ನಡೆಸಲಾಗುವುದು ಎಂದು ಮೂಲವೊಂದು ಹೇಳಿದೆ.
2005ರಲ್ಲಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ವಿವಾಹ ಪೂರ್ವ ಲೈಂಗಿಕತೆ ತಪ್ಪಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸುವ ಮೂಲಕ ನಟಿ ಖುಷ್ಬೂ ತೀವ್ರ ವಿವಾದಕ್ಕೊಳಗಾಗಿದ್ದರು. ಅಲ್ಲದೇ ಆ ಸಂಬಂಧ ಆಕೆ ವಿರುದ್ಧ 22 ಮೊಕದ್ದಮೆಗಳು ದಾಖಲಾಗಿದ್ದವು. ಸುದೀರ್ಘ ವಿಚಾರಣೆಯ ನಂತರ, ಖುಷ್ಬೂ ಮೇಲಿನ ಎಲ್ಲಾ ಪ್ರಕರಣವನ್ನು ಸುಪ್ರೀಂಕೋರ್ಟ್ ಇತ್ತೀಚೆಗಷ್ಟೇ ವಜಾಗೊಳಿಸಿತ್ತು. ಇದೀಗ ಪ್ರಕರಣದಿಂದ ಮಕ್ತಗೊಂಡ ಖುಷ್ಬೂ ರಾಜಕೀಯ ರಂಗ ಪ್ರವೇಶಿಸಲು ಮುಂದಾಗಿದ್ದಾರೆ.
ತನ್ನ ಮೇಲಿನ ಪ್ರಕರಣಗಳು ಸುಪ್ರೀಂಕೋರ್ಟ್‌ನಿಂದ ವಜಾಗೊಳ್ಳುತ್ತಲೇ, ರಾಜಕೀಯ ಪ್ರವೇಶಿಸಲು ಖುಷ್ಬೂ ಇಚ್ಛೆ ವ್ಯಕ್ತಪಡಿಸಿದ್ದರು, ಅಲ್ಲದೇ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಸೇರ್ಪಡೆಗೆ ಒಲವು ತೋರಿದ್ದರು. ಒಟ್ಟಾರೆ ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಖುಷ್ಬೂ ಡಿಎಂಕೆ ಪ್ರವೇಶಿಸಿ ರಾಜಕೀಯ ಭವಿಷ್ಯ ಕಂಡುಕೊಳ್ಳಲು ನಿರ್ಧರಿಸಿದ್ದಾರೆ.
'ನಾನು ನಟಿಯಾಗಿಯೂ ಹಲವಾರು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವುದಾಗಿ ಖುಷ್ಬೂ ಪ್ರತಿಕ್ರಿಯೆ ನೀಡಿದ್ದು, ಎಚ್ಐವಿ, ಏಡ್ಸ್, ಕ್ಯಾನ್ಸರ್ ರೋಗ ಪೀಡಿತರಿಗಾಗಿ ಸಾಕಷ್ಟು ನೆರವು ನೀಡುತ್ತಿದ್ದೇನೆ. ಆದರೆ ನನ್ನ ಸಾಮಾಜಿಕ ಸೇವೆಗೆ ಮತ್ತಷ್ಟು ಬಲಬರಬೇಕಿದ್ದಲ್ಲಿ ಅದಕ್ಕೆ ರಾಜಕೀಯ ರಂಗ ಉತ್ತಮ ವೇದಿಕೆಯಾಗಲಿದೆ' ಎಂಬುದು ಆಕೆಯ ಅಭಿಪ್ರಾಯ. 12ರ ಹರೆಯದಲ್ಲಿಯೇ ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿದ್ದ ಖುಷ್ಬೂ ಖಾನ್ ನಂತರ ತಮಿಳು, ತೆಲುಗು, ಕನ್ನಡ, ಮಲಯಾಳಂ, ಹಿಂದಿ ಚಿತ್ರದಲ್ಲಿ ನಟಿಸಿ ಖ್ಯಾತಿ ಗಳಿಸಿದ್ದರು. ಅಲ್ಲದೇ ತಮಿಳುನಾಡಿನಲ್ಲಿ ಅಭಿಮಾನಿಗಳು ಆಕೆಯ ಹೆಸರಿನಲ್ಲಿ ದೇವಾಲಯವನ್ನೂ ಕಟ್ಟಿಸಿದ್ದರು.
ಮುಂದಿನ ವರ್ಷ ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಖುಷ್ಬೂ ಡಿಎಂಕೆ ಪ್ರವೇಶಿಸುತ್ತಿರುವುದು ಪಕ್ಷಕ್ಕೆ ಆನೆ ಬಲ ಬಂದಂತಾಗಿದೆ. ರಾಜ್ಯದಲ್ಲಿ ಲಕ್ಷಾಂತರ ಮಂದಿ ಅಭಿಮಾನಿಗಳನ್ನು ಹೊಂದಿರುವ ನಟಿ ಖುಷ್ಬೂ ರಾಜಕೀಯ ಇನಿಂಗ್ಸ್ ಯಾವ ಮಟ್ಟದಲ್ಲಿ ಯಶಸ್ವಿಯಾಗಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.