ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮುತ್ತಿನನಗರಿಯಲ್ಲಿ ಗುಂಡಿನ ದಾಳಿ- 1 ಬಲಿ: ಸಿಮಿ ಕೃತ್ಯ? (Hyderabad | Gunmen open fire | SIMI | Mumbai attacks | Shah Ali Banda)
ಬೈಕ್‌ನಲ್ಲಿ ಆಗಮಿಸಿದ್ದ ಇಬ್ಬರು ವ್ಯಕ್ತಿಗಳು ಗುಂಡಿನ ದಾಳಿ ನಡೆಸಿದ ಪರಿಣಾಮ ಕರ್ತವ್ಯ ನಿರತ ಪೊಲೀಸ್ ಪೇದೆಯೊಬ್ಬರು ಸಾವನ್ನಪ್ಪಿದ್ದು, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಹೈದರಾಬಾದ್‌ನ ಶಾ ಅಲಿಬಂಡ್ ಸಮೀಪ ಶುಕ್ರವಾರ ನಡೆದಿದೆ. ಇದೊಂದು ಸಿಮಿ ಉಗ್ರರ ಕೃತ್ಯ ಎಂದು ಶಂಕಿಸಲಾಗಿದೆ.
ಐತಿಹಾಸಿಕ ಚಾರ್‌ಮಿನಾರ್ ಹಾಗೂ ಮೆಕ್ಕಾ ಮಸೀದಿ ಸಮೀಪದ ಶಾ ಅಲಿಬಂಡ್‌ನ ವೋಲ್ಗಾ ಹೋಟೆಲ್ ಸಮೀಪ ಈ ಘಟನೆ ನಡೆದಿದೆ. ಬೈಕ್‌ನಲ್ಲಿ ಆಗಮಿಸಿದ್ದ ಇಬ್ಬರು ವ್ಯಕ್ತಿಗಳು ಏಕಾಏಕಿ ಕರ್ತವ್ಯ ನಿರತ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿರುವುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಘಟನೆಯಲ್ಲಿ ಆಂಧ್ರಪ್ರದೇಶ್ ಸ್ಪೇಶಲ್ ಪೊಲೀಸ್ ಕಾನ್ಸ್‌ಸ್ಟೇಬಲ್ ರಮೇಶ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಗಂಭೀರವಾಗಿ ಗಾಯಗೊಂಡ ಪೊಲೀಸರಿಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ದಾಳಿಯ ನಂತರ ಹೈದರಾಬಾದ್‌ನಾದ್ಯಂತ ಹೈಅಲರ್ಟ್ ಘೋಷಿಸಲಾಗಿದೆ.
ಘಟನಾ ಸ್ಥಳದಲ್ಲಿ ಟಿಜಿಐ ಎಂದು ಬರೆದಿರುವ ಸಿಡಿಯೊಂದು ಪತ್ತೆಯಾಗಿದ್ದು, ಆರೋಪಿಗಳನ್ನು ಸೆರೆ ಹಿಡಿಯುವ ನಿಟ್ಟಿನಲ್ಲಿ ತೀವ್ರ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಎಕೆ ಖಾನ್ ತಿಳಿಸಿದ್ದಾರೆ.
ಸಿಮಿ ಉಗ್ರರ ಕೃತ್ಯ?: ಮೆಕ್ಕಾ ಮಸೀದಿ ಬ್ಲಾಸ್ಟ್ ಘಟನೆ ಸಂಭವಿಸಿ ಮೇ 18ಕ್ಕೆ ಒಂದು ವರ್ಷವಾಗಲಿದೆ. ಆ ನಿಟ್ಟಿನಲ್ಲಿ ವರ್ಷಾಚರಣೆ ಕೆಲವು ದಿನಗಳ ಮುನ್ನವೇ ಪೊಲೀಸರ ಮೇಲೆ ಈ ದಾಳಿ ನಡೆಸಲಾಗಿದೆ ಎಂದು ಶಂಕಿಸಲಾಗಿದೆ. ಘಟನೆಯ ಹಿಂದೆ ಸಿಮಿ ಸಂಘಟನೆಯ ಸೈಯದ್ ವಾಖ್ವಾರುದ್ದೀನ್ ಕೈವಾಡ ಇದ್ದಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ಶಂಕಿಸಿದ್ದಾರೆ. ಉಗ್ರ ವಾಖ್ವಾರುದ್ದೀನ್ ಪಾಕಿಸ್ತಾನದ ಐಎಸ್ಐನಿಂದ ತರಬೇತಿ ಪಡೆದಿದ್ದು, ಕಳೆದ ಒಂದು ವರ್ಷದಿಂದ ನಾಪತ್ತೆಯಾಗಿದ್ದಾನೆ.