ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ ರಾಜಸ್ತಾನದ ಶಿಕ್ಷಣ ಸಚಿವ ಭಾನ್ವಾರ್‌ಲಾಲ್ ಮೆಗ್ವಾಲ್ ಮನೆಯ ಆವರಣದೊಳಗೆ ಕುಳಿತು ಪ್ರತಿಭಟನೆ ನಡೆಸುತ್ತಿದ್ದ ನೂರಾರು ಮಹಿಳಾ ಶಿಕ್ಷಕಿಯರ ಮೇಲೆ ಪೊಲೀಸರು ಮನಬಂದಂತೆ ಲಾಠಿ ಪ್ರಹಾರ ನಡೆಸಿ, ಹಿಗ್ಗಾಮುಗ್ಗಾ ಹೊಡೆದ ಆಘಾತಕಾರಿ ಘಟನೆಯೊಂದು ಶುಕ್ರವಾರ ನಡೆದಿದೆ.
ಎನ್‌ಟಿಟಿ (ನರ್ಸರಿ ಟೀಚರ್ಸ್ಸ್ ಟ್ರೈನಿಂಗ್) ಸರ್ಟಿಫಿಕೆಟ್ ಕೋರ್ಸ್‌ಗೆ ಸರ್ಕಾರಿ ಮಾನ್ಯತೆ ನೀಡಬೇಕು ಎಂದು ಆಗ್ರಹಿಸಿ ನೂರಕ್ಕೂ ಅಧಿಕ ಮಹಿಳಾ ಶಿಕ್ಷಕಿಯರು ಮೆಗ್ವಾಲ್ ಮನೆಯ ಆವರಣದೊಳಗೆ ಕುಳಿತು ಪ್ರತಿಭಟನೆ ನಡೆಸುತ್ತಿದ್ದರು. ಸರ್ಟಿಫಿಕೆಟ್‌ಗೆ ಸರ್ಕಾರಿ ಮಾನ್ಯತೆ ದೊರೆತಲ್ಲಿ, ಸರ್ಕಾರಿ ಹುದ್ದೆ ದೊರೆಯುತ್ತದೆ ಎಂಬುದು ಶಿಕ್ಷಕಿಯರ ಬೇಡಿಕೆಯಾಗಿತ್ತು.
ಆದರೆ ಪುರುಷ ಮತ್ತು ಮಹಿಳಾ ಪೊಲೀಸರು ಮೃಗದಂತೆ ಪ್ರತಿಭಟನಾ ನಿರತ ಶಿಕ್ಷಕಿಯರ ಮೇಲೆ ಲಾಠಿ ಪ್ರಹಾರ ನಡೆಸಿ, ಶಿಕ್ಷಕಿಯರ ಕೈ, ತಲೆಕೂದಲನ್ನು ಹಿಡಿದು ವರಾಂಡದಲ್ಲಿ ಎಳೆದಾಡಿ ಹೊಡೆದಿದ್ದರು. ಇದರಿಂದ ಕೆಲವು ಶಿಕ್ಷಕಿಯರು ಪ್ರಜ್ಞೆ ತಪ್ಪಿ ಬಿದ್ದ ಘಟನೆಯೂ ನಡೆಯಿತು.
ಆದರೆ ಘಟನೆಯ ದೃಶ್ಯಾವಳಿ ಮಾಧ್ಯಮಗಳಲ್ಲಿ ಬಿತ್ತರಗೊಳ್ಳುತ್ತಿದ್ದಂತೆಯೇ ಸಚಿವ ಕಕ್ಕಾಬಿಕ್ಕಿಯಾಗಿದ್ದರು. ಈ ಕುರಿತು ಮಾಧ್ಯಮ ಪ್ರತಿನಿಧಿಗಳು ಮೆಗ್ವಾಲ್ ಅವರನ್ನು ಪ್ರಶ್ನಿಸಿದಾಗ, ಶಿಕ್ಷಕಿಯರ ಮೇಲೆ ಪೊಲೀಸರ ಮೃಗೀಯ ವರ್ತನೆಯ ಹೊಡೆತಗಳನ್ನು ಕಂಡಿಲ್ಲ ಎಂದು ಹೇಳಿ ನುಣುಚಿಕೊಂಡಿದ್ದಾರೆ!
ಇಷ್ಟೆಲ್ಲಾ ಗೊಂದಲಗಳ ನಡುವೆ ಸಚಿವ ಮೆಗ್ವಾಲ್, ಪ್ರಜಾಪ್ರಭುತ್ವದಲ್ಲಿ ಅವರವರ ಹಕ್ಕು, ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಲು ಹಕ್ಕಿದೆ. ಅದೇ ರೀತಿ ಶಾಂತಿಯುತವಾಗಿ ನಡೆದುಕೊಳ್ಳಬೇಕು. ಅದನ್ನು ಬಿಟ್ಟು ಪ್ರತಿಭಟನೆ ವೇಳೆ ಬೊಬ್ಬೆ ಹೊಡೆಯುವ ಅವಶ್ಯಕತೆ ಇಲ್ಲ ಎಂಬ ಅಣಿಮುತ್ತನ್ನು ಉದುರಿಸಿದ್ದಾರೆ.