ಶ್ವಾಸಕೋಶ ಮತ್ತು ತೀವ್ರ ಉಸಿರಾಟ ತೊಂದರೆಯಿಂದ ನರಳುತ್ತಿದ್ದ ಮಾಜಿ ಉಪ ರಾಷ್ಟ್ರಪತಿ ಭೈರೋನ್ ಸಿಂಗ್ ಶೇಖಾವತ್ (87) ಶನಿವಾರ ಬೆಳಿಗ್ಗೆ ವಿಧಿವಶರಾಗಿದ್ದಾರೆ.
ಶ್ವಾಸಕೋಶ ಸಂಬಂಧಿ ಮತ್ತು ಉಸಿರಾಟ ತೊಂದರೆಯಿಂದ ನರಳುತ್ತಿದ್ದ ಶೇಖಾವತ್ ಅವರನ್ನು ಎರಡು ದಿನಗಳ ನಂತರ ಇಲ್ಲಿನ ಸ್ವೈ ಮನ್ ಸಿಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಆಸ್ಪತ್ರೆಯ ವರಿಷ್ಠಾಧಿಕಾರಿ ಡಾ.ನಾರ್‌ಪತ್ ಸಿಂಗ್ ತಿಳಿಸಿದ್ದಾರೆ.
ಆದರೆ ಅವರ ಆರೋಗ್ಯ ಸ್ಥಿತಿ ತುಂಬಾ ಹದಗೆಟ್ಟಿದ್ದರಿಂದ ಮೇ 13ರಂದು ರಾತ್ರಿ ಎಸ್ಎಂಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದ ಹಿನ್ನೆಲೆಯಲ್ಲಿ 87ರ ಹರೆಯದ ಶೇಖಾವತ್ ಇಂದು ಬೆಳಿಗ್ಗೆ ಕೊನೆಯುಸಿರೆಳೆದರು ಎಂದು ಆಸ್ಪತ್ರೆಯ ವೈದ್ಯರಾದ ಡಾ.ಅಶೋಕ್ ಪಾನ್‌ಗಾರಿಯಾ ಸುದ್ದಿಸಂಸ್ಥೆಯೊಂದಕ್ಕೆ ವಿವರಿಸಿದ್ದಾರೆ.
ರಾಜಸ್ಥಾನದ ಸಿಕಾರ್ ಜಿಲ್ಲೆಯ ಪುಟ್ಟ ಹಳ್ಳಿಯಾದ ಕಚಾರಿಯಾವಾಸ್ ಎಂಬಲ್ಲಿ 1923 ಅಕ್ಟೋಬರ್ 23ರಂದು ಶೇಖಾವತ್ ಜನಿಸಿದ್ದರು. ಅವರು ಭಾರತೀಯ ಜನತಾ ಪಕ್ಷದ ಸದಸ್ಯರಾಗಿರುವ ಶೇಖಾವತ್ 2002 ಆಗೋಸ್ಟ್ 19ರಂದು ದೇಶದ 11ನೇ ಉಪ ರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಿದ್ದರು. 1952ರಿಂದ ( 1972 ಹೊರತುಪಡಿಸಿ) ರಾಜಸ್ಥಾನ್ ವಿಧಾನಸಭೆಗೆ ಸತತವಾಗಿ ಆಯ್ಕೆಯಾದ ಹೆಗ್ಗಳಿಕೆ ಶೇಖಾವತ್ ಅವರದ್ದು, ಅಲ್ಲದೇ 1974ರಲ್ಲಿ ನೆರೆಯ ಮಧ್ಯಪ್ರದೇಶದ ರಾಜ್ಯಸಭೆಗೂ ಆಯ್ಕೆಯಾಗಿದ್ದರು.
ಕಾಂಗ್ರೆಸ್ ವಿರೋಧಿ ನಾಯಕನೆಂದೇ ಗುರುತಿಸಿಕೊಂಡಿದ್ದ ಶೇಖಾವತ್ ರಾಜಸ್ಥಾನದಲ್ಲಿ 1977-1980, 1990-1992 ಮತ್ತು 1993-1998ರಲ್ಲಿ ಕಾಂಗ್ರೆಸ್ಸೇತರ ಸರ್ಕಾರ ರಚಿಸಿ, ಮೂರು ಬಾರಿ ಮುಖ್ಯಮಂತ್ರಿಯಾದ ಕೀರ್ತಿ ಅವರದ್ದಾಗಿದೆ.