ಇಲ್ಲಿನ ಪ್ರಸಿದ್ಧ ಪ್ರವಾಸಿ ತಾಣವಾಗಿರುವ ಕೋವಲಂ ಬೀಚ್ ಪಟ್ಟಣದಲ್ಲಿ ಭಾರೀ ಪ್ರಮಾಣದಲ್ಲಿ ಲೈಂಗಿಕ ದೌರ್ಜನ್ಯ ನಡೆಯುತ್ತಿರುವುದನ್ನು ಸಮೀಕ್ಷೆಯೊಂದು ಬಹಿರಂಗಪಡಿಸಿದೆ.
ಮಹಿಳಾ ಸ್ವಯಂಸೇವಕ ಸಂಘಟನೆಯಾದ ಮಹಿಳಾ ಸಮಖ್ಯ ಸೊಸೈಟಿ ನಡೆಸಿದ ಸಮೀಕ್ಷೆಯ ಪ್ರಕಾರ 12ರಿಂದ 18 ವರ್ಷದೊಳಗಿನ ಮಕ್ಕಳ ಮೇಲೆ ಭಾರೀ ಪ್ರಮಾಣದಲ್ಲಿ ಲೈಂಗಿಕ ದೌರ್ಜನ್ಯ, ಅತ್ಯಾಚಾರ ಪ್ರಕರಣಗಳು ನಡೆಯುತ್ತಿದೆ. ಸಮೀಕ್ಷೆಗೆ ಆರಿಸಿದ 705 ಮಕ್ಕಳ ಪೈಕಿ ಶೇ.50ಕ್ಕೂ ಹೆಚ್ಚು ಮಂದಿ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಆಘಾತಕಾರಿ ಅಂಶವನ್ನು ಒಪ್ಪಿಕೊಂಡಿದ್ದಾರೆ.
ಮೀನುಗಾರರ ಮಕ್ಕಳೂ ಸೇರಿದಂತೆ ವಿವಿಧ ಸ್ತರಗಳ ಮಕ್ಕಳನ್ನು ಸಮೀಕ್ಷೆಗೆ ಒಳಪಡಿಸಿದ್ದು, ಸಮೀಕ್ಷೆಯ ಪ್ರಕಾರ ಒಂಭತ್ತು ವರ್ಷದ ಮಕ್ಕಳ ಮೇಲೂ ಲೈಂಗಿಕ ದೌರ್ಜನ್ಯ ನಡೆದಿದೆ. ಆದರೆ 12ರಿಂದ 18 ವರ್ಷದೊಳಗಿನ ಹದಿಹರೆಯದವರ ಮೇಲೆ ಈ ದೌರ್ಜನ್ಯ ಮಿತಿ ಮೀರಿದೆ ಎನ್ನುತ್ತಾರೆ ಸಮೀಕ್ಷೆಯ ನಿರ್ದೇಶಕರಾದ ಸೀಮಾ ಭಾಸ್ಕರ್.
ಸಮೀಕ್ಷೆಯ ಪ್ರಕಾರ, 14 ಮಕ್ಕಳು ತಮ್ಮ ಟ್ಯೂಷನ್ ಮಾಸ್ತರರಿಂದಲೇ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾರೆ. 39 ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದು ವಿದೇಶೀ ಪ್ರವಾಸಿಗರು. ಈ ಪ್ರವಾಸಿಗರು ತಾವು ನಿಮಗೆ ದುಡ್ಡು ಕೊಡುತ್ತೇವೆ, ಗಿಫ್ಟ್ ನೀಡುತ್ತೇವೆ ಎಂಬ ಆಮಿಷ ಒಡ್ಡಿ ತಮ್ಮ ಲೈಂಗಿಕ ಲಾಲಸೆಗೆ ಬಳಸಿಕೊಳ್ಳುವ ಪ್ರಯತ್ನ ಮಾಡಿದ್ದರು ಎನ್ನಲಾಗಿದೆ. ಇನ್ನು, ಕೆಲವು ಪ್ರಕರಣಗಳಲ್ಲಿ ವಿದೇಶೀಯರು ಮೊಬೈಲ್ ಫೋನ್, ಫ್ಯಾಷನ್ ವಸ್ತ್ರಗಳು, ಕಾಸ್ಮೆಟಿಕ್‌ಗಳನ್ನು ನೀಡಿ ಪುಸಲಾಸುವ ಪ್ರಯತ್ನ ಮಾಡಿದ್ದರು ಎನ್ನಲಾಗಿದೆ. ಶೇ.6.36ರಷ್ಟು ಮಕ್ಕಳಿಗೆ ತಮ್ಮ ಮನೆಯಲ್ಲೇ ದೈಹಿಕವಾಗಿ ಹಿಂಸೆ ನೀಡಲಾಗಿದೆ.
ವರದಿಯ ಪ್ರಕಾರ, ಈ ಬೀಚ್ ಸುತ್ತಮುತ್ತ ಪ್ರಮುಖವಾದ ಜಾಲಗಳಿದ್ದು, ಲೈಂಗಿಕವಾಗಿ ಮಕ್ಕಳನ್ನು ತಮ್ಮ ಗ್ರಾಹಕರಿಗೆ ಪೂರೈಸುವ ಕೈಲಸ ಮಾಡುತ್ತಿವೆ. ಹಾಗಾಗಿ ಇವುಗಳ ಹಿಂದಿನ ಜಾಲವನ್ನು ಪತ್ತೆ ಹಚ್ಚಿ ಇದರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಮೀಕ್ಷೆ ಆಗ್ರಹಿಸಿದೆ.