ಭಾರತೀಯ ವೈದ್ಯಕೀಯ ಮಂಡಳಿಯನ್ನು (ಎಂಸಿಐ) ವಿಸರ್ಜನೆ ಮಾಡಬೇಕೆಂಬ ಸರ್ಕಾರದ ಶಿಫಾರಸಿಗೆ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅಂಗೀಕಾರದ ಮುದ್ರೆ ಹಾಕಿದ್ದಾರೆಂದು ರಾಷ್ಟ್ರಪತಿ ಭವನದ ಮೂಲಗಳು ತಿಳಿಸಿವೆ.
ಇನ್ನು ಮುಂದೆ ಎಂಸಿಐಗೆ ಹೊರತಾಗಿ ಏಳು ತಜ್ಞ ವೈದ್ಯರ ಸಮಿತಿ ಕಾರ್ಯ ನಿರ್ವಹಿಸಲಿದೆ. ಇದು ಮಂದಿನ ಒಂದು ವರ್ಷದವರೆಗೆ ಅಧಿಕಾರದಲ್ಲಿ ಇರುತ್ತದೆ. ಈ ಹೊಸ ಸಮಿತಿ ಕಾರ್ಯ ನಿರ್ವಹಿಸಲು ಅಗತ್ಯವಾದ ನೀತಿ ನಿಯಮಾವಳಿಗಳನ್ನು ಸರ್ಕಾರ ಸಿದ್ದಪಡಿಸುತ್ತಿದೆ. ಇನ್ನೊಂದು ತಿಂಗಳಲ್ಲಿ ಇದು ಪೂರ್ಣಗೊಳ್ಳಲಿದೆ ಎಂದು ಆರೋಗ್ಯ ಕಾರ್ಯದರ್ಶಿ ಸುಜಾತಾ ರಾವ್ ವಿವರಿಸಿದ್ದಾರೆ.
ಡಾ.ಎಸ್.ಕೆ.ಸರಿನ್ ನೇತೃತ್ವದ ಆರು ಮಂದಿ ಸಮಿತಿಯಲ್ಲಿ ಬೆಂಗಳೂರಿನ ಡಾ.ದೇವಿ ಶೆಟ್ಟಿ, ಡಾ.ರಂಜಿತಾ ರಾಯ್ ಚೌಧರಿ, ಸೀತಾ ನಾಯಕ್, ಗೌತಮ್ ಸೇನ್ ಮತ್ತು ಆರ್.ಎಲ್.ಸಲ್ಝಾನ್ ಸೇರಿದ್ದಾರೆ.
ಭ್ರಷ್ಟಾಚಾರದ ಆರೋಪದ ಮೇಲೆ ಎಂಸಿಐ ಅಧ್ಯಕ್ಷ ಕೇತನ್ ದೇಸಾಯಿ ಬಂಧನವಾದ ಮೂರು ವಾರಗಳ ನಂತರ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ಎಂಸಿಐ ವಿಸರ್ಜನೆಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ.