ಆಡಳಿತಾರೂಢ ಪಕ್ಷದ ವರಿಷ್ಠರು ಮತ್ತು ವಿರೋಧ ಪಕ್ಷದ ವರಿಷ್ಠರು ಅನಿವಾರ್ಯ ಸಂದರ್ಭದಲ್ಲಿ ಮುಖಾಮುಖಿಯಾಗಿ ಉಭಯ ಕುಶಲೋಪರಿ ಮಾತನಾಡಿದರೆ, ಮೂರನೆಯ ಪಕ್ಷದವರಿಗೆ ಅದು ಅಸೂಯೆ ಪಡುವಂತೆ ಮಾಡುತ್ತದೆ. ಅಂತಹ ಪ್ರಸಂಗ ಸೋನಿಯಾ, ಅಡ್ವಾಣಿ ಮಾತುಕತೆಯಲ್ಲಿ ನಡೆದಿದೆ!
ಇತ್ತೀಚೆಗೆ ಕಾಂಗ್ರೆಸ್ ವರಿಷ್ಠೆ ಸೋನಿಯಾಗಾಂಧಿ ಮತ್ತು ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಅವರು ವಿವಾಹ ಸಮಾರಂಭವೊಂದರಲ್ಲಿ ಭೇಟಿಯಾಗಿ ಪರಸ್ಪರ ಅಭಿನಂದನೆ ವಿನಿಮಯ ಮಾಡಿಕೊಂಡರು. ಹೌದು, ಅದರಲ್ಲೇನು ತಪ್ಪೇನಿದೆ ಎಂದು ಹುಬ್ಬೇರಿಸಬೇಡಿ.
ಆದರೆ ಈ ಘಟನೆಯನ್ನು ನೋಡಿದ ತಮಿಳುನಾಡು ಮುಖ್ಯಮಂತ್ರಿ, ಡಿಎಂಕೆ ವರಿಷ್ಠ ಕರುಣಾನಿಧಿಯವರಿಗೆ ತುಂಬಾ ಹೊಟ್ಟೆಕಿಚ್ಚಾಯಿತಂತೆ! ಆದರೆ ಇದು ರಾಜಕೀಯ ಸೇಡಿನ ಅಸೂಯೆ ಅಲ್ಲ,ಇದರಿಂದ ಕರುಣಾನಿಧಿ ಹೊಸ ಪಾಠವೊಂದನ್ನು ಕಲಿತಿದ್ದಾರಂತೆ.
ರಾಜಕೀಯ ವೈಮನಸ್ಸಿನಿಂದ ಪಕ್ಷಗಳ ನಡುವಿನ ಬಾಂಧವ್ಯ ಹಾಳಾಗಬಾರದು. ಬಾಂಧವ್ಯ ಬೇರೆ, ರಾಜಕೀಯ ನಿಲುವು ಬೇರೆ ಎಂದು ತಿಳಿಸಿರುವ ಕರುಣಾನಿಧಿ, ರಾಷ್ಟ್ರೀಯ ರಾಜಕೀಯದಲ್ಲಿ ವಿರೋಧ ಪಕ್ಷದ ನಾಯಕರು ಸೌಹಾರ್ದತೆಯನ್ನು ಕಾಪಾಡಿಕೊಂಡು ಬರುತ್ತಿದ್ದಾರೆ. ಅದರಂತೆ ತಮಿಳುನಾಡು ರಾಜ್ಯರಾಜಕಾರಣದಲ್ಲೂ ಸೌಹಾರ್ದತೆ ಕಾಪಾಡಿಕೊಂಡು ಹೋಗಬೇಕೆಂದು ಅವರು ಅಪೇಕ್ಷೆ ಪಟ್ಟಿದ್ದಾರೆ.
ನಾಲ್ಕು ವರ್ಷಗಳ ಅಧಿಕಾರ ಪೂರ್ಣಗೊಳಿಸಿದ ಅಂಗವಾಗಿ ಎಐಎಡಿಎಂಕೆ ಹೊರತಾಗಿ ವಿವಿಧ ಪಕ್ಷಗಳು ಕರುಣಾನಿಧಿಯವರನ್ನು ಅಭಿನಂದಿಸಿದ ಸಂದರ್ಭದಲ್ಲಿ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ತಮಿಳುನಾಡಿನಲ್ಲಿ ಡಿಎಂಕೆ ಮತ್ತು ಎಐಎಡಿಎಂಕೆ ಬದ್ಧ ವೈರಿಗಳಂತೆ ವರ್ತಿಸುತ್ತಿವೆ. ಯಾವುದೇ ಸಂದರ್ಭದಲ್ಲೂ ಒಬ್ಬರನ್ನೊಬ್ಬರು ನೋಡುವುದಿಲ್ಲ. ಪಕ್ಷದ ನಾಯಕರು ಮುಖಾಮುಖಿ ಭೇಟಿಯಾದಾಗಲೂ ಒಬ್ಬರನ್ನೊಬ್ಬರು ಅಭಿನಂದಿಸುವುದೂ ಇಲ್ಲ. ಈ ಹಿನ್ನೆಲೆಯಲ್ಲಿ ಕರುಣಾನಿಧಿಯವರಿಗೆ ಸೋನಿಯಾ-ಅಡ್ವಾಣಿ ಅಭಿನಂದನೆ ವಿಷಯ ಹೆಚ್ಚಿನ ಗಮನಸೆಳೆದಿತ್ತು.