ಸಿಂಡೇಗಾ(ಜಾರ್ಖಂಡ್), ಸೋಮವಾರ, 17 ಮೇ 2010( 16:09 IST )
ನಕ್ಸಲರ ಅಟ್ಟಹಾಸ ದಿನೇ ದಿನೇ ಮುಂದುವರಿದಿದೆ. ಇಲ್ಲಿನ ಯುವ ಕಾಂಗ್ರೆಸ್ ಪ್ರಮುಖನಾದ ಹೇಮಂತ್ ಬಾಗೇ ಎಂಬಾತನನ್ನು ನಕ್ಸಲರು ಆತನ ದ್ವಿಚಕ್ರ ವಾಹನದೊಂದಿಗೆ ಜೀವಂತ ಸುಟ್ಟಿದ್ದಾರೆ.
ಹೇಮಂತ್ ಅವರು ತಮ್ಮ ದ್ವಿಚಕ್ರ ವಾಹನದಲ್ಲಿ ತಮ್ಮ ಮಾವನ ಮನೆಗೆ ತೆರಳುತ್ತಿದ್ದಾಗ ಹಾದಿ ಮಧ್ಯೆ ನಕ್ಸಲರ ಈ ಕೃತ್ಯಕ್ಕೆ ಬಲಿಯಾಗಿದ್ದಾರೆ ಎಂದು ಇಲ್ಲಿನ ಪೊಲೀಸರು ತಿಳಿಸಿದ್ದಾರೆ.
ವಾಹನಕ್ಕೆ ಬೆಂಕಿ ಹೊತ್ತಿಸಿ ಇದರ ಸಮೇತನಾಗಿ ಆತ ಸುಟ್ಟು ಹೋಗುವಂತೆ ನಕ್ಸಲರು ವ್ಯೂಹ ರಚಿಸಿದ್ದರು. ಅಷ್ಟೇ ಅಲ್ಲ, ಆ ಜಾಗದಲ್ಲಿ ತಮ್ಮ ಕರಪತ್ರಗಳನ್ನು ಬಿಟ್ಟು ಹೋಗಿದ್ದು, ಆ ಮೂಲಕ ನಕ್ಸಲರೇ ಈ ಕೃತ್ಯ ನಡೆಸಿದ್ದಾರೆಂದು ತಿಳಿದು ಬಂದಿದೆ.
ಇದೀಗ ಪೊಲೀಸರು ಆರೋಪಿಗಳ ಹುಡುಕಾಟಕ್ಕೆ ತೊಡಗಿದ್ದು, ಈ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಇದೇ ವೇಳೆ ಇಲ್ಲಿನ ಮಾಜಿ ಕಾಂಗ್ರೆಸ್ ಎಂಎಲ್ಎ ನಿಯಾಲ್ ಟಿರ್ಕೆ ಅವರನ್ನೂ ನಕ್ಸಲರು ಬೆದರಿಸಿದ್ದಾರೆ. ನಕ್ಸಲರ ವಿರುದ್ಧ ಸಾರ್ವಜನಿಕ ಹೇಳಿಕೆಗಳ್ನನು ನೀಡಿದರೆ, ಪರಿಣಾಮ ನೆಟ್ಟಗಿರದು ಎಂದು ನಕ್ಸಲರು ನಿಯಾಲ್ ಅವರಿಗೂ ಬೆದರಿಕೆ ಒಡ್ಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.