ಇನ್ನು ಗುಜರಾತಿನಲ್ಲಿ ಮತದಾನ ನಡೆಸಲು ವೋಟಿಂಗ್ ಬೂತ್‌ಗೇ ಹೋಗಬೇಕಾಗಿಲ್ಲ. ಗುಜರಾತ್ ಸರ್ಕಾರ ಇದೇ ಮೊದಲ ಬಾರಿಗೆ ತನ್ನ ಮುಂದಿನ ಸ್ಥಳೀಯ ಸಂಸ್ಥೆ ಚುನಾವಣೆಗೆ ಇ-ಮತದಾನ ನಡೆಸಲಿದೆ. ಹೌದು. ಸಂಪೂರ್ಣವಾಗಿ ಆನ್‌ಲೈನ್‌ನಲ್ಲೇ ಮತದಾನ ನಡೆಸುವ ಯೋಜನೆಗೆ ಇದೀಗ ಗುಜರಾತ್ ಸರ್ಕಾರ ಮುನ್ನಡಿಯಿಟ್ಟಿದೆ. ಆ ಮೂಲಕ ಈಗಾಗಲೇ ಹಲವು ಪ್ರಥಮಗಳನ್ನು ನೀಡಿದ ಗುಜರಾತ್ ಮತ್ತೊಮ್ಮೆ ಇ -ಮತದಾನ ನಡೆಸಿದ ದೇಶದ ಮೊದಲ ರಾಜ್ಯವೆನಿಸಲಿದೆ.
ಈ ಬಗ್ಗೆ ಮಾಹಿತಿ ನೀಡಿದ ಸರ್ಕಾರದ ಕಾರ್ಯದರ್ಶಿ ಪಿ.ಎಚ್.ಶಾ, ಗುಜರಾತ್ ತನ್ನ ಮುಂದಿನ ಸ್ಥಳೀಯ ಸಂಸ್ಥೆ ಚುನಾವಣೆಗೆ ಇ-ವೋಟಿಂಗ್ ನಡೆಸಲಿದೆ. ಇದು ದೇಶದಲ್ಲೇ ಮೊದಲ ಬಾರಿಯಾಗಿದ್ದು, ಗುಜರಾತ್ ಈ ರೀತಿ ಪ್ರಯೋಗ ಮಾಡಿದ ಮೊದಲ ರಾಜ್ಯವೆನಿಸಲಿದೆ. ಅಹಮದಾಬಾದ್ ನಗರ ಪಾಲಿಕೆ ಚುನಾವಣೆ ಇದೇ ಅಕ್ಟೋಬರ್ ಮಧ್ಯಭಾಗದಲ್ಲಿ ನಡೆಯಲಿದ್ದು, ಈ ಪದ್ಧತಿಯ ಮೂಲಕ ಚುನಾವಣೆ ನಡೆಸಿ ಮೊದಲ ಪ್ರಯೋಗ ಮಾಡಲಾಗುತ್ತದೆ. ಅದಾದ ನಂತರ ರಾಜ್‌ಕೋಟ್, ವಡೋದರಾ, ಸೂರತ್, ಭಾವ್‌ನಗರ, ಜಾಂನಗರ ಸ್ಥಳೀಯ ಸಂಸ್ಥೆ ಚುನಾವಣೆಗಳ ಸಂದರ್ಭವೂ ಇದೇ ಮತದಾನ ಪದ್ಧತಿ ಮುಂದುವರಿಸುವ ನಿರ್ಧಾರ ಮಾಡಲಾಗಿದೆ ಎಂದರು.
ಇ-ಮತದಾನ ಹೊಸದಾಗಿರುವುದರಿಂದ ಈ ಬಗ್ಗೆ ಒಂದು ಸಮಿತಿ ರಚಿಸಲಾಗಿದ್ದು, ಇ-ಮತದಾನವನ್ನು ಯಶಸ್ವಿಗೊಳಿಸಲು ಸಕಲ ಸಿದ್ಧತೆಗಳನ್ನೂ ನಡೆಸಲಾಗಿದೆ. ರಾಜ್ಯ ಚುನಾವಣಾ ಆಯುಕ್ತ ಕೆ.ಸಿ.ಕಪೂರ್ ನೇತೃತ್ವದಲ್ಲಿ ಎಲ್ಲವೂ ಸುಸೂತ್ರವಾಗಿ ನಡೆಯಲಿದೆ ಎಂಬ ಭರವಸೆಯಿದೆ ಎಂದು ಶಾ ತಿಳಿಸಿದರು.
ಆನ್‌ಲೈನ್ ಮೂಲಕ ಮತದಾನ ಮಾಡುವ ಪದ್ಧತಿಯ ಮೂಲಕ ಯುವಕರನ್ನು ಹೆಚ್ಚು ಹೆಚ್ಚು ಮತದಾನದತ್ತ ಸೆಳೆಯುವ ಪ್ರಯತ್ನ ಗುಜರಾತ್ ಸರ್ಕಾರದ್ದು. ಬಹುತೇಕರು ತಾಸುಗಟ್ಟಲೆ ಸರತಿಯ ಸಾಲಿನಲ್ಲಿ ನಿಂತು ಮತದಾನ ಮಾಡುವ ಉಸಾಬರಿಗೆ ಹೋಗುವುದಿಲ್ಲ. ಇದರಿಂದಾಗಿ ಅಮೂಲ್ಯ ಮತಗಳ ನಷ್ಟವಾಗುತ್ತದೆ. ಆನ್‌ಲೈನ್ ಮೂಲಕ ಮತದಾನ ಮಾಡುವ ಯೋಜನೆಯಲ್ಲಿ ಹೆಚ್ಚು ಸಮಯ ಅಗತ್ಯವಿಲ್ಲವಾದ್ದರಿಂದ ಎಲ್ಲಾ ವಿದ್ಯಾವಂತರು ಕೆಲವೇ ಸೆಕೆಂಡುಗಳಲ್ಲಿ ಕುಳಿತಲ್ಲಿಂದಲೇ ಮತದಾನ ಮಾಡಲು ಸಾಧ್ಯವಾಗುತ್ತದೆ. ಇದರಿಂದ ಮತದಾನದ ಪ್ರಮಾಣದಲ್ಲಿ ಏರಿಕೆಯಾಗುವ ಸಾಧ್ಯತೆಗಳಿವೆ. ಜೊತೆಗೆ ಯುವ ಮಂದಿಯೂ ಮತದಾನ ಮಾಡಲು ಉತ್ಸುಕತೆ ತೋರಿಸುತ್ತಾರೆ ಎಂದು ಈ ಪದ್ಧತಿಯನ್ನು ಅಳವಡಿಸುತ್ತಿದ್ದೇವೆ ಎನ್ನುತ್ತಾರೆ ಶಾ.
ಈ ಹಿನ್ನೆಲೆಯಲ್ಲಿ ಈಗಾಗಲೇ ಗುಜರಾತ್ ನಗರಾಭಿವೃದ್ಧಿ ಸಚಿವಾಲಯ ಸುತ್ತೋಲೆಯ್ನನು ಹೊರಡಿಸಿದ್ದು, ಇ-ಮತದಾನದಕ್ಕೆ ಸಂಬಂಧಿಸಿ ಟೀಕೆ, ಸಲಹೆ ಸೂಚನೆಗಳನ್ನು ನಾಗರಿಕರಿಂದ ಪಡೆಯಲಾಗುತ್ತಿದೆ.